


ಪ್ರದೀಪ್ ಪೂಜಾರಿ ಪ್ರಕರಣ: ತನಿಖೆ ಸಿಐಡಿಗೆ ವರ್ಗಾವಣೆ

ಡಿಜಿ–ಐಜಿಪಿ ಆದೇಶದ ಮೇರೆಗೆ ಕ್ರಮ; ಕೊಲೆ ಯತ್ನ, ಅಪಹರಣ–ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳ ತನಿಖೆ ಸಿಐಡಿ ಹೆಗಲಿಗೆ
ಉಡುಪಿ, ನ.9: ರಾಜ್ಯಾದ್ಯಂತ ಗಮನ ಸೆಳೆದಿರುವ ಪ್ರದೀಪ್ ಪೂಜಾರಿ ಪ್ರಕರಣಕ್ಕೆ ಮಹತ್ವದ ಬೆಳವಣಿಗೆ ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾಯಿಸಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ–ಐಜಿಪಿ) ಆದೇಶ ಹೊರಡಿಸಿದ್ದಾರೆ.
ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ದೃಢಪಡಿಸಿದ್ದು, ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಪ್ರದೀಪ್ ಪೂಜಾರಿ ಪ್ರಕರಣದ ತನಿಖೆ ರಾಜ್ಯಮಟ್ಟದ ತನಿಖಾ ಸಂಸ್ಥೆಯ ಕೈಗೆ ವರ್ಗಾವಣೆಯಾಗಿದೆ.
ಕೊಲೆ ಯತ್ನದ ಆರೋಪದ ಪ್ರಕರಣವೂ ಸಿಐಡಿಗೆ
ಸಿಐಡಿಗೆ ವರ್ಗಾಯಿಸಲಾದ ಪ್ರಕರಣಗಳಲ್ಲಿ ಮೊದಲನೆಯದು ಸಂತ್ರಸ್ತೆ ಅಕ್ಟೋಬರ್ 27ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರು. ಹೈಕೋರ್ಟ್ನಿಂದ ಜಾಮೀನು ಪಡೆದಿದ್ದ ಪ್ರದೀಪ್ ಪೂಜಾರಿ, ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತನ್ನ ಮೇಲೆ ಕೊಲೆ ಯತ್ನ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು.
ಅಪಹರಣ, ಹಲ್ಲೆ ಆರೋಪದ ತನಿಖೆ
ಎರಡನೇ ಪ್ರಕರಣವು ಪ್ರದೀಪ್ ಪೂಜಾರಿಯ ಸಹೋದರ ದಿಲೀಪ್ ಅವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿಗೆ ಸಂಬಂಧಿಸಿದೆ. ಸಂತ್ರಸ್ತೆಯ ಸಹೋದರರಾದ ಸುಧೀರ್ ಮತ್ತು ಶೈಲೇಶ್, ಕೃಷ್ಣ ನಾಯಕ್, ಸಂಜಯ್ ಕುಲಾಲ್ ಹಾಗೂ ಬೇರೆ ರಾಜ್ಯದ ಇಬ್ಬರು ವಲಸೆ ಕಾರ್ಮಿಕರು ಬ್ರೆಝಾ ಕಾರಿನಲ್ಲಿ ಪ್ರದೀಪ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವೂ ಸಿಐಡಿ ವ್ಯಾಪ್ತಿಗೆ
ಮೂರನೇ ಪ್ರಕರಣವು ಪ್ರದೀಪ್ ಪೂಜಾರಿಯ ಸಾವಿಗೆ ಸಂಬಂಧಿಸಿದೆ. ಅಕ್ಟೋಬರ್ 30ರಂದು ಅಜ್ಜರಕಾಡಿನ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಳಿಕ ಸಹೋದರ ದಿಲೀಪ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದೂರು ದಾಖಲಿಸಿದ್ದರು.
ಈ ಮೂರು ಪ್ರಕರಣಗಳ ತನಿಖೆಯನ್ನೂ ಇದೀಗ ಸಿಐಡಿಗೆ ವಹಿಸಿರುವುದು ಪ್ರಕರಣದ ಮುಂದಿನ ತನಿಖಾ ಹಂತದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪರಸ್ಪರ ಸಂಬಂಧ ಹೊಂದಿರುವ ಆರೋಪ–ಪ್ರತ್ಯಾರೋಪಗಳು, ಪ್ರದೀಪ್ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳು ಹಾಗೂ ವಿವಿಧ ದೂರುಗಳಲ್ಲಿನ ಆರೋಪಗಳ ಸತ್ಯಾಸತ್ಯತೆ ಸಿಐಡಿ ತನಿಖೆಯಿಂದ ಹೊರಬರಬೇಕಿದೆ.
ಪ್ರಕರಣದ ಸೂಕ್ಷ್ಮತೆ ಮತ್ತು ಸಾರ್ವಜನಿಕ ಗಮನವನ್ನು ಪರಿಗಣಿಸಿದರೆ, ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸುವ ಜವಾಬ್ದಾರಿ ಇದೀಗ ಸಿಐಡಿ ಮೇಲಿದೆ.
ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಕಾಂಗ್ರೆಸ್ ಸ್ವಾಗತಿಸಿದೇಕೆ?
ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಬಗ್ಗೆ ದಿನ ಕಳೆದಂತೆ ಅನೇಕ ಸಂಶಯಗಳು ಹುಟ್ಟಿಕೊಂಡಿದ್ದು ಅಡಗಿರುವ ಸತ್ಯಾಸತ್ಯತೆಯನ್ನು ತಿಳಿಯಬೇಕಾದರೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ನಾವೂ ಬಯಸಿದ್ದೆವು ಹಾಗಾಗಿ ತನಿಖೆಯನ್ನು ಸಿಐಡಿಗೆ ನೀಡಿದ ಕ್ರಮವನ್ನು ಸ್ವಾಗತಿಸುತ್ತೇನೆ. ಮತ್ತು ಘಟನೆಯ ಬಗ್ಗೆ ಪೋಲಿಸರಿಗೆ ಮಹಿತಿ ನೀಡಿದವರಿಗೆ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಿರುವುದರಿಂದ ನಿರಪರಾದಿಗಳಿಗೆ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಹಿಂದೆ ಅನೇಕ ಮುಚ್ಚಿಟ್ಟಿರುವ ಸತ್ಯಗಳು ಬಹಿರಂಗವಾಗಬೇಕಿದೆ ಪ್ರತಿಭಟನೆ ಮತ್ತು ಭಾಷಣದ ಮೂಲಕ ಒತ್ತಡ ಹಾಕಿ ಅದನ್ನು ಮುಚ್ಚಿಡುವ ಪ್ರಯತ್ನಗಳು ನಡೆಯುತ್ತಿವೆ ಅದನ್ನು ಸಹಿಸಲು ಸಾಧ್ಯವಿಲ್ಲ ಪ್ರದೀಪ್ ಸಂತ್ರಸ್ಥೆಯ ಮನೆಗೆ ಬೇಟಿ ನೀಡಿ ಕೇಸು ಹಿಂದಕ್ಕೆ ಪಡೆಯಲು ಮನವೊಲಿಸುವಂತೆ ಆತನನ್ನು ಪ್ರೇರೇಪಿದವರು ಯಾರು? ಮತ್ತು ಒಂದು ವೇಳೆ ಅವನ ಜಾಮೀನು ರದ್ದಾದರೆ 14 ವರ್ಷ ಜೈಲು ಸೇರಬೇಕಾಗುತ್ತದೆ ಎಂದು ಅವನ್ನು ಮಾನಸಿಕವಾಗಿ ಕುಗ್ಗಿಸಿ ಆತ್ಮಹತ್ಯೆಗೆ ಪ್ರಮುಖ ಕಾರಣರಾದವರು ಯಾರು? ಎನ್ನುವುದು ಬಹಿರಂಗವಾಗಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯ ಇದೆ ಎಂದರು.
ಪ್ರಕರಣ ನಡೆದ ನಂತರ ಸ್ಥಳಕ್ಕೆ ಬೇಟಿ ನೀಡಿ ಪೋಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಗಳನ್ನೇ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಲಾಗಿದೆ ಇದು ನ್ಯಾಯವಲ್ಲ, ಸಂತ್ರಸ್ಥೆಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾನೆ ಎಂದು ಪ್ರದೀಪನ ಮೇಲೆ ಹಲ್ಲೆ ನಡೆದಿದ್ದು ಅದಾದ ಮೂರು ದಿನಗಳ ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಸಂತ್ರಸ್ಥೆಯ ಮನೆಗೆ ನುಗ್ಗುವ ಧೈರ್ಯ ಮಾಡಿದವನು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾದ್ಯ? ಆತ್ಮಹತ್ಯೆಯ ಮೊದಲು ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾನೆ ಎನ್ನುವ ಅಭಿಪ್ರಾಯವಿದೆ ಅದ್ದರಿಂದ ಸಾವಿಗೆ ಜವಾಬ್ದಾರಿ ಯಾರು? ಇಂತಹ ಅನೇಕ ಪ್ರಶ್ನೆಗಳು ಸಹಜವಾಗಿಯೆ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಸಿಐಡಿ ತನಿಖೆ ಉತ್ತಮ ಕ್ರಮ ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿ ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣಕ್ಕೆ ಸಿಲುಕಿರುವ ನಿರಪರಾಧಿಗಳಿಗೂ ನ್ಯಾಯ ಸಿಗಲಿ ಎಂದರು
ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಸಮಾಜವನ್ನು ಪಕ್ಷದ ವಿರುದ್ದ ಎತ್ತಿಕಟ್ಟುವ ಪ್ರಯತ್ನಗಳು ನಡಿತಿದೆ ಇದನ್ನು ಸಹಿಸಲು ಸಾದ್ಯವಿಲ್ಲ. ಒತ್ತಡಕ್ಕೆ ಮಣಿದು ಅಮಾಯಕರನ್ನು ಗುರಿಯಾಗಿಸಿದರೆ ನಾವು ಮೌನ ಮುರಿಯಬೇಕಾಗುತ್ತದೆ ಎಂದರು.













