ಪ್ರತಿಯೊಂದು ಕ್ಷೇತ್ರದಲ್ಲಿ ಸಮಾಜಮುಖಿ ಚಿಂತನೆ ಅಗತ್ಯ: ಶ್ರೀ ಈಶ ವಿಠಲದಾಸ ಸ್ವಾಮೀಜಿ

ಉದಯ ಶೆಟ್ಟಿ ಮುನಿಯಾಲುರವರ 52ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳನ್ನು ಸನ್ಮಾನ

ಕಾರ್ಕಳ : ಮಾನವನ ದೇಹದೊಳಗಿರುವ ಅಮೂಲ್ಯ ರಕ್ತ ರಸ್ತೆಯಲ್ಲಿ ಚೆಲ್ಲಬಾರದು. ಇಂತಹ ಕೃತ್ಯ ಸಮಾಜ ಮುಂದಾಗಿರುವುದರಿಂದಲೇ ಅಶಾಂತಿ ಎದುರಾಗಿದೆ ಎಂದು ಕೇಮಾರು ಮಠಾಧೀಶ ಶ್ರೀ ಈಶ ವಿಠಲ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಬಂಡೀಮಠ ಮೂಡುಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉದಯ ಶೆಟ್ಟಿ ಮುನಿಯಾಲುರವರ 52ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರ ಇರಬಹುದು ಅಲ್ಲಿ ಸಮಾಜ ಕಟ್ಟುವ ಕೆಲಸವಾಗಬೇಕು. ಉದಯ ಶೆಟ್ಟಿಯವರು ತಮ್ಮ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ರಕ್ತದಾನ ಕಾರ್ಯಕ್ರಮ ಮಾಡಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸುವ ಕಾರ್ಯ ಮಾಡುತ್ತಿರುವುದು ಧರ್ಮ ಉಳಿಸುವ ಕಾರ್ಯ ಎಂದರು.
ಪ್ರತಿ ಧರ್ಮದಲ್ಲಿ ಕೂಡಾ ಸಹಕಾರ, ಶಾಂತಿ ಬಗ್ಗೆ ಉಲ್ಲೇಖ ಇದೆ. ಅದು ವೇದಿಕೆಗೆ ಮಾತ್ರ ಸೀಮಿತವಾಗಿ ಉಳಿದಿದೆ ಆಚರಣೆಗೆ ಬರುವಲ್ಲಿ ಎಡರು ತೊಡರು ಆಗುತ್ತದೆ. ಮಾನವೀಯತೆ, ಸಂಸ್ಕಾರ ಉಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಮತ್ತೊಬ್ಬರ ಕಣ್ಣೀರು ಒರೆಸುವ ಸತ್ಕಾರ್ಯ ಆಗಬೇಕು. ಕಣ್ಣೀರು ತರಿಸುವ ಕಾರ್ಯ ಆಗಬಾರದು. ಕಣ್ಣೀರು ಒರೆಸುವ ಕಾರ್ಯದಲ್ಲಿ ಉದಯ ಶೆಟ್ಟಿಯವರು ತೊಡಗಿಸಿ ಕೊಂದಿದ್ದಾರೆ. ಅವರಿಗೆ ಭಗವಂತ ಆಶೀರ್ವಾದ ನೀಡಲಿ ಎಂದು ಆಶಿಸಿದರು.

ಮುಸ್ಲಿಂ ಧಾರ್ಮಿಕ ಮುಖಂಡ ಮೌಲನ ಹಫೀಜ್ ರವರು ಮಾತನಾಡಿ, ಉದಯ ಶೆಟ್ಟಿಯವರು ಮಾನವೀಯತೆಯಿಂದ ತುಂಬಿದ ವ್ಯಕ್ತಿ. ಯಾವುದೇ ಧರ್ಮದವರಾಗಲಿ ನೆರವು ಕೇಳಿಬಂದವರಿಗೆ ಸಹಾಯ ಹಸ್ತ ನೀಡುವ ಸದ್ಗುಣ ಅವರದಾಗಿದೆ. ಅಂತಹ ವ್ಯಕ್ತಿಗಳು ಈ ಸಮಾಜಕ್ಕೆ ಅತ್ಯಗತ್ಯ ಇದೆ ಎಂದರು.
ಅತ್ತೂರು ಸಂತ ಲಾರನ್ಸ್ ಬಸಿಲಿಕಾದ ಧರ್ಮಗುರು ಅಲ್ಬನ್ ಡಿ ಸೋಜಾ ಮಾತನಾಡಿ, ಮನು ಕುಲಕ್ಕೆ ಸೇವೆ ಪರಮ ಧರ್ಮವಾಗಿದೆ. ಅದನ್ನು ಉದಯಕುಮಾರು ಶೆಟ್ಟಿ ಪರಿಪಾಲಿಸಿ ಬಂದಿದ್ದಾರೆ ಎಂದರು.
ನೀರೆ ಕೃಷ್ಣ ಶೆಟ್ಟಿ ಮಾತನಾಡಿ ವಿಶಾಲ ಹೃದಯವಂತರು ಇರೋದು ಭಾರತ ದೇಶದಲ್ಲಿ. ಇಡೀ ಸಮಾಜದ ಅಶಕ್ತರ ನೆರವಿಗೆ ತೊಡಗಿಸಿ ಮಾದರಿ ಎನ್ನಿಸಿಕೊಂಡ ಮುನಿಯಾಲು ಉದಯ ಶೆಟ್ಟಿ ಅವರು ಹೆಬ್ರಿ ಬಂಟರ ಸಂಘದ ಮೂಲಕ ಬಂಟರು ಮಾತ್ರವಲ್ಲದೆ ಎಲ್ಲಾ ಜಾತಿಯವರಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ಪವರ್ ಟಿವಿ ಯ ನಿರ್ದೇಶಕ ರಾಕೇಶ್ ಶೆಟ್ಟಿ ಮಾತನಾಡಿ ಜನಗಳ ಹೃದಯ ಸಾಮ್ರಾಜ್ಯದ ಜನಪ್ರತಿನಿಧಿ ಆಗಬೇಕು.
ಇವತ್ತು ಉದಯ ಶೆಟ್ಟಿಯವರು ಮಾಡುವ ಕಾರ್ಯವು ಇಲ್ಲಿನ ಜನಪ್ರತಿನಿಧಿಗಳನ್ನು ಮೀರಿಸುವಂತಹದ್ದು. ಅದನ್ನು ಅವರು ಮಾಡುತ್ತಿರುವುದು ಬಹಳ ಸಂತಸ ದಾಯಕ ಎಂದು ಹೇಳಿದರು.
ವೇದಿಕೆಯಲ್ಲಿ ನಮಿತಾ ಉದಯ ಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಸುರೇಂದ್ರ ಶೆಟ್ಟಿ, ರಮೇಶ್ ಕಾಂಚನ್, ಅಜಿತ್ ಮಾಳ, ಭಾನು ಭಾಸ್ಕರ್ , ಬಿಪಿನ್ ಚಂದ್ರ ಪಾಲ್ ನಕ್ರೆ, ಸದಾನಂದ ಪೂಜಾರಿ, ಉದಯ ಶೆಟ್ಟಿ ಕುಕ್ಕುಂದೂರು, ಸುಧಾಕರ ಶೆಟ್ಟಿ, ಸುಧಾಕರ ಕೋಟ್ಯಾನ್, ಹರೀಶ್ ಪಡು ಪರ್ಕಳ, ಸುಬೀತ್ ಎನ್.ಆರ್, ವಾದಿರಾಜ ಶೆಟ್ಟಿ ಹೆಬ್ರಿ, ರಾಘವ ದೇವಾಡಿಗ ಸೇರಿದಂತೆ ಇತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



































