ಪಿಕಪ್ ಢಿಕ್ಕಿ ಹೊಡೆಸಿ ಇಬ್ಬರ ಕೊಲೆ!ಬೋಳಿಯಾರಿನಲ್ಲಿ ನಡೆದಿದ್ದ ಭೀಕರ ಅಪಘಾತ ಪ್ರಕರಣಕ್ಕೆ ತಿರುವು; ಆರೋಪಿ ಹಫೀಝ್ ಅಲಿಯಾಸ್ ಅಪ್ಪಿ ಬಂಧನ

Picture of RB NEWS

RB NEWS

Bureau Report


ಮಂಗಳೂರು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಪಿಕಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಫೀಝ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದೆ. ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಇಸ್ಮಾಯಿಲ್ ನೀಡಿದ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮೊಬೈಲ್ ವಿಚಾರಕ್ಕೆ ಮಾತಿನ ಚಕಮಕಿ
ಅ.19ರಂದು ಸಂಜೆ ಜುನೈದ್ ಮತ್ತು ಅರ್ಫಾಝ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಪಿಕಪ್ ಚಾಲಕ ಹಫೀಝ್ ಜತೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರ ನಡುವೆ ಹೊಡೆದಾಟವೂ ನಡೆದಿತ್ತು ಎನ್ನಲಾಗಿದೆ. ಈ ಹಿಂದಿನಿಂದಲೂ ಅವರ ನಡುವೆ ವೈಷಮ್ಯವಿತ್ತು ಎಂದು ತಿಳಿದುಬಂದಿದೆ. ಗೆಳೆಯನ ಮೊಬೈಲ್ ವಿಚಾರವಾಗಿ ನಡೆದ ಮಾತಿನ ಚಕಮಕಿಯೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಘಟನೆಯ ಬಳಿಕ ಜುನೈದ್ ಮತ್ತು ಅರ್ಫಾಝ್ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳಿದ್ದರು. ಇದನ್ನು ಗಮನಿಸಿದ ಹಫೀಝ್ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೆಟ್ರೋಲ್ ಪಂಪ್ ಬಳಿ ಭೀಕರ ಅಪಘಾತ
ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ, ಹಫೀಝ್ ಉದ್ದೇಶಪೂರ್ವಕವಾಗಿ ಪಿಕಪ್ ವಾಹನವನ್ನು ಸ್ಕೂಟರ್‌ಗೆ ಹಿಂದಿನಿಂದ ರಭಸವಾಗಿ ಢಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆರೋಪಿ ಪಿಕಪ್ ವಾಹನವನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯ ತಪ್ಪೊಪ್ಪಿಗೆ
ವಿಚಾರವೊಂದಕ್ಕೆ ಸಂಬಂಧಿಸಿದಂತೆ ಉಂಟಾದ ಸಿಟ್ಟಿನ ಭರದಲ್ಲಿ ಬೊಲೆರೊ ವಾಹನದಿಂದ ಢಿಕ್ಕಿ ಹೊಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದು, ಇಬ್ಬರು ಯುವಕರ ಸಾವಿಗೆ ಕಾರಣವಾದ ಘಟನೆಯ ಹಿಂದಿನ ವೈಷಮ್ಯ ಹಾಗೂ ಇತರ ಅಂಶಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top