ನೆರೆ * ಕ.ರಾ. ಕೃಷ್ಣ ತೊಡಿಕಾನ


ಹಳ್ಳ ಹೊಳೆ ನದಿ ಮೊಗೆದು ಮೊಗೆದು
ಕೆಂಪು ನೀರು ಉಕ್ಕಿ ಬಂತು
ಶಸ್ತ್ರ ಹಿಡಿದ ಉಗ್ರನಂತೆ
ಊರನೂರ ಮುತ್ತಿತು
ಮುನಿದ ಬಾನು ಸುರಿದನಷ್ಟು
ನೆಲದ ಬಲವು ಕುಸಿಯುವಷ್ಟು
ಪ್ರಾಣಿ ಪಕ್ಷಿ ಜೀವ ಜಂತು
ಅಬಾಲ ವೃದ್ಧ ತಾರತಮ್ಯ ತಳೆಯದೆ
ಸೆಳೆದು ಸೆಳೆದು ಎಳೆದು ಒಯ್ದು
ನರಕದೂರು ಸೃಷ್ಟಿಸಿ ಎಲ್ಲೊ ದೂರ ಸಾಗಿತು
ಸಾಲು ಸಾಲು ಗುಡಿಸಲು
ಕೇರಿಕೇರಿ ಮನೆಗಳು
ಮೊಹಲ್ಲವೆಲ್ಲ ಮುಳುಗಿತು
ಹಸಿರ ತೊಟ್ಟ ಗದ್ದೆ ಬಯಲು
ಬಿತ್ತಿ ಬೆಳೆದ ದವಸ ಧಾನ್ಯ
ಧನ ಕನಕ ಸೊತ್ತು ಗಿತ್ತು
ಗುದ್ದಿ ಗುದ್ದಿ ದಬ್ಬಿತು
ಸತ್ತು ಹೋದವರು ಇದ್ದು ಸತ್ತವರು
ಸುತ್ತೆಲ್ಲಾ ನೊಂದವರು
ಸಾವಿನ ಮನೆಯಲ್ಲೆ
ಕೊರಡಾಯಿತು ದೇಹ
ಬರಡಾಯಿತು ಭಾವ
ಅತ್ತು ಕರೆದರೆ ಯಾರಿಹರು?
ಮೊರೆಯಿಟ್ಟ ಮಂದಿ ಜಲರಾಶಿಯ ಬಂಧಿ
ಅಳಿದವರ ನೆಲದಲ್ಲಿ ಉಳಿದವರ ಕಣ್ಣೀರು
ತಿಳಿಯಾಗಲಿಲ್ಲ ರೌದ್ರವದ ಕೆಂಪು ನೀರು
- ಕ.ರಾ. ಕೃಷ್ಣ ತೊಡಿಕಾನ



































