ಧರ್ಮಸ್ಥಳದ ರಿಕ್ಷಾ ಚಾಲಕನಿಗೆ ಹಾವು ಹಿಡಿಯೋದೆಂದ್ರೆ ಹೂವು ಹಿಡಿದಷ್ಟೇ ಸಲೀಸು…!
12 ವರ್ಷಗಳಲ್ಲಿ ಬರೋಬ್ಬರಿ 5ಸಾವಿರದಷ್ಟು ಘಟಸರ್ಪಗಳನ್ನು ಹಿಡಿದ ‘ಸ್ನೇಕ್ ಪ್ರಕಾಶ್..!!


ಈ ಮನುಷ್ಯನ ಬಳಿ ಕುಳಿತು ಹಾವಿನ ಕತೆ ಕೇಳಿದರೆ ಮೈ ಕಾವೇರುತ್ತದೆ....!




ಒಂದೊಂದು ಹಾವಿನದ್ದೂ ಒಂದೊಂದು ಕತೆ…!
” ನಿಜಕ್ಕೂ ಹಾವು ಹಿಡಿಯುವುದೇನೂ ಸಾಹಸ, ಸಾಧನೆಯಲ್ಲ, ಹಾಗೆಂದು ಎಚ್ಚರ,ಶ್ರದ್ಧೆ ತಪ್ಪಿದರೆ ಅಪಾಯಗಳೂ ತಪ್ಪಿದ್ದಲ್ಲ” ಎನ್ನುವ ಸ್ನೇಕ್ ಪ್ರಕಾಶ್ (46) ಧರ್ಮಸ್ಥಳದಲ್ಲಿ ಸಕಲರಿಗೂ ಚಿರಪರಿಚಿತ ರಿಕ್ಷಾಚಾಲಕ.
ಕಳೆದ 12ವರ್ಷಗಳಲ್ಲಿ 5ಸಾವಿರದಷ್ಟು ಹಾವುಗಳನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುವ ಈ ಮನುಷ್ಯನಿಂದಾಗಿ ಇಡೀ ಬೆಳ್ತಂಗಡಿ ತಾಲೂಕೇ ಹಾವಿನ ಉಪಟಳದಿಂದ ಪಾರಾಗುತ್ತದೆ. ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ..!
ವೃದ್ಧೆಯೊಬ್ಬರ ಆಶೀರ್ವಾದವೇ ಆರಂಭ


12 ವರ್ಷಗಳ ಹಿಂದೊಮ್ಮೆ ರಿಕ್ಷಾ ಬಾಡಿಗೆ ಹೋಗಿದ್ದಾಗ ಒಂದೆಡೆ ಅಜ್ಜಿಯೊಬ್ಬರು ಮನೆಗೆ ಹಾವು ನುಗ್ಗಿದೆಯೆಂದು ಗೋಳಿಡುತ್ತಿದ್ದರು. ಅಲ್ಲಿ ಜನರು ಸೇರಿದ್ದರೂ ಯಾರೊಬ್ಬರೂ ಹಾವು ಹಿಡಿಯಲು ಮುಂದಾಗಲಿಲ್ಲ. ನನಗೆ ಅಜ್ಜಿಯ ರೋದನ ಕಂಡು ಮನಮರುಗಿತು. ಆಗಿನ್ನೂ ನಾನು ಹಾವು ಹಿಡಿಯಲು ಆರಂಭಿಸಿಯೇ ಇರಲಿಲ್ಲ. ಗೊತ್ತಿರಲೂ ಇಲ್ಲ!
ಧೈರ್ಯ ಮಾಡಿ ಮನೆಯೊಳಗೆ ನುಗ್ಗಿ ಹಾವನ್ನು ಪತ್ತೆ ಮಾಡಿದೆ. ಎಚ್ಚರದಿಂದ ಹಿಡಿದು ಮನೆಯ ಹೊರಗೆಳೆತಂದೆ. ಎಲ್ಲರೂ ನಿಟ್ಟುಸಿರಿಟ್ಟರು. ಸಂಕಷ್ಟದಿಂದ ಪಾರಾದ ಅಜ್ಜಿ ನನಗೆ ಶುಭಕೋರಿ ಹಾರೈಸಿದರು.
ಅದೇ ಆರಂಭ..
ಇದು ಜನರಿಗೆ ಉಪಕಾರ ಮಾಡುವ ಕೆಲಸವಲ್ಲವೇ? ಮುಂದುವರಿಸೋಣ ಅನ್ನಿಸಿತು. ಧೈರ್ಯವೂ ಬಂತು.
ಬಳಿಕ ನೇಷನಲ್ ಜಿಯೋಗ್ರಫಿ ಚಾನೆಲ್ನಲ್ಲಿ ಹಾವು ಹಿಡಿಯೋದನ್ನ ನೋಡತೊಡಗಿದೆ. ನೋಡಿ ನೋಡಿಯೇ ಅದರ ತಂತ್ರ, ಕೌಶಲಗಳನ್ನ ಕಲಿತೆ. ಅಲ್ಲದೇ ಇದಕ್ಕೆಂದು ಯಾವತರಬೇತಿಯೂ ಪಡೆದಿಲ್ಲ ಎನ್ನುತ್ತಾರೆ ಪ್ರಕಾಶ್.

ರಿಕ್ಷಾ ಚಾಲಕ “ಸ್ನೇಕ್ ಪ್ರಕಾಶ”ನಾದ ಕತೆ
ರಿಕ್ಷಾ ಚಾಲಕ ಹಾವು ಹಿಡಿಯುವುದು ಊರಲ್ಲಿ ಸುದ್ದಿಯಾಯಿತು. ಅರಣ್ಯ ಇಲಾಖೆಯವರೂ ಮೌನ ಬೆಂಬಲ ನೀಡಿದರು. ಹಾವು ಬಂದಲ್ಲಿಂದ ಕರೆ ಬರಲಾರಂಭಿಸಿತು. ಒಂದು ದಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಕಟ್ಟಡದಲ್ಲೂ ಘಟ ಸರ್ಪ..!!
ಪ್ರಕಾಶ್ ಎಲ್ಲರ ಸಮ್ಮುಖದಲ್ಲೇ ಅದನ್ನು ಲೀಲಾಜಾಲ ಹಿಡಿದರು. ಇದನ್ನು ಕಂಡ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇವ ಇನ್ನು “ಸ್ನೇಕ್ ಪ್ರಕಾಶ್” ಎಂದರು. ಆ ಹೆಸರೇ ಇವರಿಗೀಗ ಖಾಯಂ ಆಗಿದೆ. ಇಡೀ ತಾಲೂಕಲ್ಲಿ ಹಾಗೆಂದೇ ಗುರುತಿಸುತ್ತಾರೆ.
ಈ ವರೆಗೆ ಪ್ರಕಾಶರು 4ಸಾವಿರಕ್ಕೂ ಅಧಿಕ ನಾಗರ ಹಾವುಗಳನ್ನು ಹಿಡಿದಿದ್ದಾರೆ. 721 ಕಾಳಿಂಗಸರ್ಪಗಳನ್ನು ಹಿಡಿದ್ದಿದ್ದಾರೆ. ಉಳಿದಂತೆ ಹೆಬ್ಬಾವು ಸಹಿತ ವಿಷ ಸರ್ಪಗಳು ಅನೇಕ.
ಈ ವರೆಗೆ ಒಮ್ಮೆಯೂ ಎಲ್ಲೂ ಸರ್ಪಗಳಿಂದ ತೊಂದರೆ, ಅನಾಹುತಗಳಾಗಿಲ್ಲ. ಕಾರಣ “ಸರ್ಪದ ಜೊತೆಗೆ ಸರಸವಾಡಬಾರದು. ಎಚ್ಚರಿಕೆ, ಕಾಳಜಿ, ಧೈರ್ಯ, ಶ್ರದ್ಧೆ ಮುಖ್ಯ” ಎನ್ನುತ್ತಾರವರು.

ಅರಣ್ಯ ಇಲಾಖೆಯ ಆಪ್ತ ರಕ್ಷಕ!
ಪ್ರಕಾಶರೀಗ ಅರಣ್ಯ ಇಲಾಖೆಯ ಆಪ್ತ, ರಕ್ಷಕ. ಇಡೀ ತಾಲೂಕಿಂದ ಎಲ್ಲಿಂದಲೇ ಇಲಾಖೆಗೆ ಕರೆ ಬರಲಿ, ಅವರೂ ಮೊರೆ ಹೋಗುವುದು ಇವರನ್ನೇ…!!
ಇಲಾಖೆಗೆ ಹಾವು ಹಿಡಿದ ಮತ್ತು ರಕ್ಷಿತಾರಣ್ಯಗಳಲ್ಲಿ ಉಪೇಕ್ಷಿಸಿದ ಫೋಟೋ ಒದಗಿಸಿದರೆ ಸಾಕು.
ಹಾಗೆಂದು ಎಲ್ಲ ಹಾವುಗಳನ್ನು ಒಂದೇ ಕಾಡಲ್ಲಿ ಬಿಡುವುದಲ್ಲ. ಕಾಳಿಂಗ ಸರ್ಪಗಳನ್ನು ದೂರದ ಬೇರೆಯೇ ಕಾಡಲ್ಲಿ ಬಿಡಬೇಕು.
ಇದಕ್ಕೆಲ್ಲ ತಗಲುವ ಖರ್ಚು, ವೆಚ್ಚಗಳೇನೂ ಇಲಾಖೆ ಭರಿಸುವುದಿಲ್ಲ. ಹಾಗೆಂದು ಪ್ರಕಾಶ್ ಇದನ್ನೊಂದು ಧನಸಂಗ್ರಹದ ದಾರಿಯಾಗಿಯೂ ಕಂಡಿಲ್ಲ. ತನ್ನ ರಿಕ್ಷಾ ಬಾಡಿಗೆ ಮತ್ತು ಜನರು ಅರಿತು ನೀಡುವ ಧನಸಹಾಯವೇ ಅವರ ಉತ್ಪತ್ತಿ.


ಊರಲ್ಲೇಕೆ ಹಾವಿನ ಉಪಟಳ ಜಾಸ್ತಿ??
ಧರ್ಮಸ್ಥಳ ಸುತ್ತ ಕಾಡುಗಳು ಜಾಸ್ತಿ.
ಇದು ಪಶ್ಚಿಮಘಟ್ಟ ತಾನೇ?
ವೇಣೂರು, ಕೌಕ್ರಾಡಿ, ಬೆಳಾಲು, ನೆಲ್ಯಾಡಿ, ಕೊಕ್ಕಡ, ಕಾಯರ್ತಡ್ಕ, ಸೇರಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಈಗೀಗ ನವಿಲುಗಳ ಸಂಖ್ಯೆ ಜಾಸ್ತಿಯಾಗಿದೆ. ಪರಿಣಾಮ ಹಾವುಗಳು ಆಹಾರ ಮತ್ತು ಸುರಕ್ಷಿತ ತಾಣವನ್ನರಸಿ ಕಾಡಿಂದ ಬಂದು ಬೆಚ್ಚಗಿನ ಮನೆಯೇರಿಕೊಳ್ಳುತ್ತವೆ!
ಮನೆಗೆ ಹೊಂದಿ ಕಟ್ಟಿಗೆ ಪೇರಿಸುವ ಕೊಟ್ಟಗೆ, ಕೋಳಿಗೂಡು, ಹಟ್ಟಿ, ಕೌಂಪೌಂಡ್, ಮನೆಮಾಡು ಮೊದಲಾದೆಡೆ ಹಾವುಗಳು ಸೇರಿಕೊಳ್ಳುತ್ತವೆ.
ಹೀಗೆ ನಾಡು ಸೇರುವ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆಯಲ್ಲಿ ನುರಿತ ಸಿಬ್ಬಂದಿ ವ್ಯವಸ್ಥೆಗಳೇ ಇಲ್ಲ!
ಸಮಾಜ ಸೇವಾಸಕ್ತಿಯಿಂದ ಇಂಥ ಅಪಾಯಕಾರಿ ಸವಾಲಿನ ಕೆಲಸ ಮಾಡಿದವರಿಗೂ ಪ್ರೋತ್ಸಾಹ ಸಹಿತ ಸಂರಕ್ಷಣೆಗಳಿಲ್ಲ!
ನಾನಿದು ಸರಕಾರದ ಸಹಾಯ, ಬೆಂಬಲ ನಿರೀಕ್ಷಿಸಿ ಮಾಡುವುದೇ ಅಲ್ಲ. ನನ್ನಿಂದ ಸಮಾಜಕ್ಕೆ ಪ್ರಯೋಜನ ಆಗಬೇಕೆಂದೇ ಈ ಕೆಲಸ ಮಾಡುತ್ತಿದ್ದೇನೆ ಎಂದರು ಪ್ರಕಾಶ್.
ಇಷ್ಟಕ್ಕೂ ಗೃಹಿಣಿಯಾದ ಪ್ರಕಾಶರ ಪತ್ನಿ ಶೋಭಾಗೆ ಈ ಕಾಯಕ ಇಷ್ಟವೇ ಇಲ್ಲ. ಏನಾದರೂ ಅನಾಹುತ ಸಂಭವಿಸಿದರೆ ನಮಗೆ ಯಾರಿದ್ದಾರೆ ಎಂಬುದೇ ಅವರ ಭಯ. ಇದೂ ಸತ್ಯ ತಾನೇ?


ಸರಕಾರಿ ಮಾನ್ಯತೆ ಯಾಕಿಲ್ಲವೋ..?
ಹಾವು ಹಿಡಿದು ರಕ್ಷಿಸಿ, ಸಾಮಾಜಿಕರನ್ನು ಭಯಮುಕ್ತಗೊಳಿಸುವುದು ನಿರ್ಲಕ್ಷಿತ ಕೆಲಸವಲ್ಲ..
ಹಾವಿನ ರಕ್ಷಣೆ ಪರಿಸರ ಸಮತೋಲನಕ್ಕೆ ಅತ್ಯಗತ್ಯ!
ಆದರೆ ಸರಕಾರದಿಂದ ಹಾವು ಹಿಡಿಯುವುದಕ್ಕೆ ಮಾನ್ಯತೆಗಳೇ ಇಲ್ಲ!
ಎಲ್ಲಾದರೂ ಹಾವು ಹಿಡಿದವರಿಗೆ ಏನಾದರೂ ತೊಂದರೆಗಳಾದಲ್ಲಿ “ನಿನ್ನಲ್ಲಿ ಹಾವು ಹಿಡಿಯುವ ಉಸಾಬರಿಗೆ ಹೋಗಲು ಯಾರು ಹೇಳಿದ್ದಾರೆಂಬುದೇ ಅವರ ಪ್ರಶ್ನೆ…?!
ಹಾವು ಹಿಡಿಯುವವರಿಗೆ ಸರಕಾರೀ ಮಾನ್ಯತಾ ಪತ್ರ ಮತ್ತು ಉರಗ ಸಂರಕ್ಷಣಾ ಮಾಹಿತಿ ಜತೆ ಅಪಾಯಗಳುಂಟಾದರೆ ಚಿಕಿತ್ಸೆ, ಸಹಾಯ ಒದಗಿಸಬೇಕಾದುದು ಸರಕಾರಿ ಕರ್ತವ್ಯ ತಾನೇ??
ಪ್ರಕಾಶರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಇರುವ “ಶೌರ್ಯ ವಿಪತ್ತು ನಿರ್ವಹಣಾ ಘಟಕ”ದ ಕಾರ್ಯಕರ್ತ ಮತ್ತು ಬೆಳ್ತಂಗಡಿ ತಾಲೂಕಿನ ಮಾಸ್ಟರ್.
ಇವರ ಮಗಳು ಪ್ರಾಪ್ತಿ ಶೆಟ್ಟಿ ಕಲರ್ಸ್ ಕನ್ನಡ ವಾಹಿನಿಯ “ಎದೆ ತುಂಬಿ ಹಾಡಿದೆನು” ರಿಯಾಲಿಟಿ ಶೋದಲ್ಲಿ ಜನಮನ ಸೆಳೆದ ಗಾಯನ ಪ್ರತಿಭೆ. ಪುತ್ರ ಯಶಸ್ ಪಿ.ಯು. ವಿದ್ಯಾರ್ಥಿ.
ರಿಕ್ಷಾ ಬಾಡಿಗೆ ಜತೆ ಹಾವು ಹಿಡಿಯುವುದಷ್ಟೇ ಅಲ್ಲ, ಉತ್ತಮ ಚಾಲಕನೂ ಆದ ಪ್ರಕಾಶರು ಎಲ್ಲೇ ರನ್ನಿಂಗಿನಲ್ಲಿದ್ದರೂ ಹಾವು ಬಂದಿದೆ ಎಂಬ ಕರೆ ಸುನಿಶ್ಚಿತವಾಗಿ ಬರುತ್ತದೆ, ಬರುತ್ತಲೇ ಇರುತ್ತದೆ.
ಹೆಚ್ಚಿನ ಮಾಹಿತಿ ಜತೆ ಪ್ರಕಾಶರ ಸಹಾಯ ನಿಮಗೂ ಬೇಕಾದರೆ ಸಂಪರ್ಕಿಸಿ- 8722442221
- ಎಂ. ನಾ. ಚಂಬಲ್ತಿಮಾರ್






































