ದರೋಡೆಗೆ ಹೊಂಚು ಹಾಕಿದ ಬಜರಂಗಿಗಳ ಬಂಧನ
ಮೂಡುಬಿದಿರೆ : ದರೋಡೆಗೆ ಹೊಂಚು ಹಾಕಿದ ಬಜರಂಗದಳದ ಸಕ್ರಿಯಾ ಕಾರ್ಯಕರ್ತರಿಬ್ಬರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಡಬಿದ್ರೆ ತಾಲೂಕು ಬಡಗ ಮಿಜಾರ್ ಗ್ರಾಮದ ಬೊಳ್ಳೆಚಾರ್ ಎಂಬಲ್ಲಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಬಜರಂಗದಳದ ಇಬ್ಬರು ಕಾರ್ಯಕರ್ತರು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದು, ಇತರ ಮೂವರು ಪರಾರಿಯಾಗಿದ್ದಾರೆ.
ಬಂಧಿತರು

ಜಗದೀಶ, ಪ್ರಾಯ: 29 ವರ್ಷ, ತಂದೆ: ಈರಣ್ಣ, ವಾಸ: ಸುಭಾಶ್ ನಗರ, ಮಾರ್ಪಾಡಿ ಗ್ರಾಮ, ಮೂಡಬಿದ್ರೆ ಅಂಚೆ ಮತ್ತು ತಾಲೂಕು.
ಪ್ರಶಾಂತ್ @ ಪಾಂತು, ಪ್ರಾಯ: 27 ವರ್ಷ, ತಂದೆ: ದಿ|| ವಾಸು ಶೆಟ್ಟಿ, ವಾಸ:ಅಂಗರ ಕರಿಯ, ಹೊಸಂಗಡಿ ಗ್ರಾಮ, ಪೆರಿಂಜೆ ಅಂಚೆ, ಬೆಳ್ತಂಗಡಿ ತಾಲೂಕು.
ಈ ಪ್ರಕರಣದ ಸಾರಾಂಶ
ಮೂಡಬಿದಿರೆ ಠಾಣಾಧಿಕಾರಿ ಪ್ರತಿಭಾ ಅವರು ಮೇ 29ರಂದು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನ ಸಂಖ್ಯೆ ಕೆಎ-19-ಜಿ-553 ನೇದರಲ್ಲಿ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಠಾಣಾ ಸರಹದ್ದಿನ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದರು.
ರಾತ್ರಿ ಸುಮಾರು 10.15 ಗಂಟೆಗೆ ಬಡಗ ಮಿಜಾರ್ ಗ್ರಾಮದ ಬೊಳ್ಳೆಚಾರ್ ಎಂಬಲ್ಲಿ 5 ಜನರು ಒಂದು ಕಾರಿನಲ್ಲಿ ಬಂದು ಗುಂಪು ಸೇರಿ ಯಾವುದೋ ದರೋಡೆ ಕೃತ್ಯವನ್ನು ನಡೆಸಲು ಹೊಂಚು ಹಾಕಿ ನಿಂತು ಕೊಂಡಿರುತ್ತಾರೆ ಎಂಬ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಕೆಎ-35-ಎಮ್-9299 ನಂಬರಿನ ಒಂದು ಇನ್ನೋವಾ ಕಾರಿನ ಬಳಿ 5 ಜನರು ಗುಂಪು ಸೇರಿ ನಿಂತಿರುವುದನ್ನು ಕಂಡು ಬಂತು. ಕೂಡಲೇ ಪೊಲೀಸರು ಆ ಕಾರನ್ನು ಸುತ್ತುವರಿದಿದ್ದರು. ಪೊಲೀಸರ ಸಮವಸ್ತ್ರ ಕಂಡ ಆರೋಪಿಗಳ ಪೈಕಿ ಮೂವರು ಪರಾರಿಯಾಗಿದ್ದರು.
ಜಗದೀಶ ಮತ್ತು ಪ್ರಶಾಂತ್ @ ಪಾಂತು ಎಂಬುವರನ್ನು ವಶಕ್ಕೆ ಪಡೆದುಕೊಂಡ ವ್ಯಕ್ತಿಗಳಲ್ಲಿ ಓಡಲು ಪ್ರಯತ್ನಿಸಿದ ಬಗ್ಗೆ ವಿಚಾರಿಸಿದಾಗ ‘ತಾವು 5 ಮಂದಿ ಜೊತೆ ಸೇರಿ ಕೆಎ-35-ಎಮ್-9299 ನೇ ನಂಬ್ರದ ಇನ್ನೋವಾ ಕಾರಿನಲ್ಲಿ ಇಲ್ಲಿಗೆ ಬಂದು ಕಾರಿನಲ್ಲಿ ಕಬ್ಬಿಣದ ತಲವಾರ್, ಖಾರದ ಪುಡಿ ಪ್ಯಾಕೇಟನ್ನು ಇರಿಸಿಕೊಂಡು ದಾರಿಯಲ್ಲಿ ಹಾದು ಹೋಗುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಹಾಗೂ ರಾತ್ರಿ ಸಮಯ ದ್ವಿ-ಚಕ್ರ ವಾಹನದಲ್ಲಿ ಓಡಾಡುವ ಜನರನ್ನು ನಿಲ್ಲಿಸಿ ಅವರಿಗೆ ಕಬ್ಬಿಣದ ತಲವಾರ್ ನ್ನು ತೋರಿಸಿ ಹೆದರಿಸಿ, ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಅವರಲ್ಲಿರುವ ಹಣ ಹಾಗೂ ಸೊತ್ತುಗಳನ್ನು ಬಲವಂತವಾಗಿ ದೋಚುವ ಉದ್ದೇಶದಿಂದ ಇಲ್ಲಿಗೆ ಬಂದು ‘ಸೇರಿ ಈ ಬಗ್ಗೆ ಸಮಾಲೋಚನೆ ಮಾಡುತ್ತಿದ್ದೆವು’ ಎಂಬುವುದಾಗಿ ತಿಳಿಸಿದ್ದಾರೆ.
ಅವರು ಬಂದಿರುವ ಕಾರನ್ನು ಪರಿಶೀಲಿಸಲಾಗಿ ಕಾರಿನ ಡಿಕ್ಕಿಯಲ್ಲಿ ತಲವಾರ್ ಹಾಗೂ ಖಾರದ ಪುಡಿ ಪ್ಯಾಕೇಟ್ ಇರುವುದು ಕಂಡು ಬಂದಿರುತ್ತದೆ.
ಪ್ರಶಾಂತ್ ಕೊಲೆಯತ್ನದ ಆರೋಪಿ
ಸುಹಾಸ್ ಶೆಟ್ಟಿಯನ್ನು ಬಜಪೆಯಲ್ಲಿ ದುಷ್ಕರ್ಮಿಗಳು ಬರ್ಬರ ರೀತಿಯಲ್ಲಿ ಹತ್ಯೆ ನಡೆಸಿದ್ದರು.
ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಮರುದಿನ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆನೀಡಿದ್ದರು.
ಆ ವೇಳೆಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೀನು ವ್ಯಾಪಾರಿಯ ಕೊಲೆಯತ್ನ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಪ್ರಶಾಂತ್ ಕೂಡ ಒಬ್ಬನೆಂಬ ಮಾಹಿತಿ ಲಭಿಸಿದೆ.
ಮತ್ತೊಬ್ಬ ಆರೋಪಿ ಜಗದೀಶ್ ನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ಇರುವ ಮಾಹಿತಿ ಲಭಿಸಿದೆ.






































