ಕಾಪು : ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದಲ್ಲಿ ನಡೆದ ದನ ಕಳವು ಪ್ರಕರಣವನ್ನು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಗೂಡ್ಸ್ ಟೆಂಪೋ ಹಾಗೂ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕಳತ್ತೂರು ಗ್ರಾಮದ ನಿವಾಸಿಗಳಾದ ಉಮರಬ್ಬ (64), ಮೊಹಮ್ಮದ್ ಶರೀಫ್ (31), ಶಂಸುದ್ದೀನ್ (57) ಹಾಗೂ ಮೊಹಮ್ಮದ್ ಅಸೀರ್ (24) ಎಂದು ಗುರುತಿಸಲಾಗಿದೆ. ಹಸುವನ್ನು ಹುಡುಕುತ್ತಿದ್ದಾಗ ಪತ್ತೆಯಾದ ಟೆಂಪೋ ಸೆಪ್ಟೆಂಬರ್ 19ರಂದು ಸಂಜೆ ಸುಮಾರು 4 ಗಂಟೆ ವೇಳೆಗೆ ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುಡ್ಡೆ ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರ ಐದು ಜಾನುವಾರುಗಳ ಪೈಕಿ ಎರಡು ವರ್ಷದ ಕಪ್ಪು ಬಣ್ಣದ ಹಸುವೊಂದು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಹಸುವಿನ ಹುಡುಕಾಟ ನಡೆಸುತ್ತಿದ್ದ ವೇಳೆ ಸಮೀಪದಲ್ಲಿ ಗೂಡ್ಸ್ ಟೆಂಪೋವೊಂದು ನಿಂತಿರುವುದು ಕಂಡುಬಂದಿದೆ. ವಾಹನವನ್ನು ಪರಿಶೀಲಿಸಿದಾಗ ಕಾಣೆಯಾಗಿದ್ದ ಹಸು ಸೇರಿದಂತೆ ಮತ್ತೊಂದು ಹಸುವನ್ನು ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಈ ವೇಳೆ ಟೆಂಪೋ ಬಳಿ ಉಮರಬ್ಬ ಸೇರಿದಂತೆ ನಾಲ್ವರು ವ್ಯಕ್ತಿಗಳು ಇದ್ದರೆನ್ನಲಾಗಿದೆ. ದೂರುದಾರರನ್ನು ಗಮನಿಸಿದ ಆರೋಪಿಗಳು ಟೆಂಪೋ ಸಹಿತ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ವಸಂತಿ ಸುನೀತಾ ಕ್ವಾಡ್ರಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಒಬ್ಬ ಆರೋಪಿ ಅದೇ ದಿನ ಬಂಧನ ತನಿಖೆ ಕೈಗೊಂಡ ಪೊಲೀಸರು ಸೆಪ್ಟೆಂಬರ್ 19ರಂದು ಪ್ರಮುಖ ಆರೋಪಿ ಎನ್ನಲಾದ ಉಮರಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನುಳಿದಂತೆ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶರೀಫ್, ಶಂಸುದ್ದೀನ್ ಹಾಗೂ ಮೊಹಮ್ಮದ್ ಅಸೀರ್ ಅವರನ್ನು ಸೆಪ್ಟೆಂಬರ್ 20ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಟೆಂಪೋ ವಾಹನ ಹಾಗೂ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿವಿಧ ಠಾಣೆಗಳ ಪೊಲೀಸರ ಕಾರ್ಯಾಚರಣೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಇಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಶಿರ್ವ ಪಿಎಸ್ಐ ಮಂಜುನಾಥ ಮರಬದ, ಪಡುಬಿದ್ರಿ ಪಿಎಸ್ಐ ಶಕ್ತಿವೇಲು ಇ., ಅನಿಲ್ ಕುಮಾರ್ ಟಿ. ನಾಯಕ್, ಹೆಬ್ರಿ ಪಿಎಸ್ಐ ಲೋಹಿತ್ ಕುಮಾರ್ ಸೇರಿದಂತೆ ಶಿರ್ವ, ಕಾಪು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಗಳ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.