ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು : ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ತಿರುಪತಿ: ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇಂದು ತಿರುಪತಿ-ತಿರುಮಲ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ದರ್ಶನದ ಬಳಿಕ ದೇಗುಲದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಶ್ರೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದದಿಂದ ನಾನು ಮತ್ತೆ ಸಿಎಂ ಆಗಿದ್ದೇನೆ. ಈ ಹಿಂದಿನ ಸರ್ಕಾರದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ನಮ್ಮ ಸರ್ಕಾರದ ಶುದ್ದೀಕರಣ ಕಾರ್ಯ ಇಲ್ಲಿಂದಲೇ ಆರಂಭಿಸುತ್ತೇವೆ. ಇನ್ನು ಮುಂದೆ ನಾಯಕರು ಬಂದಾಗ ನೇತಾಡುವ ಪರದೆಗಳು ಮತ್ತು ಮರಗಳು ಇರುವುದಿಲ್ಲ. ತಿರುಮಲದಲ್ಲಿ ಗಾಂಜಾ, ಮದ್ಯ ಮುಕ್ತವಾಗಿ ಸಿಗುವಂತೆ ಮಾಡಲಾಗಿತ್ತು. ಇವುಗಳೆಲ್ಲವನ್ನೂ ಇದೀಗ ನಾವು ನಿರ್ಮೂಲನೆ ಮಾಡುತ್ತೇವೆ ಎಂದರು.



ಅಂತೆಯೇ ತಿರುಮಲದಿಂದಲೇ ಶುದ್ದೀಕರಣ ಆರಂಭವಾಗಬೇಕು. ಪ್ರಸಾದ ತಯಾರಿಕೆ ಮತ್ತು ವಿತರಣೆಯಲ್ಲಿನ ದೋಷಗಳು ಮತ್ತು ತಿರುಮಲದ ಶುಚಿತ್ವದ ಬಗ್ಗೆ ವಿಶೇಷ ಗಮನಹರಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಸಮಸ್ತ ಜನತೆಗೆ ಒಳಿತನ್ನು ಮಾಡುವುದೇ ಗುರಿಯಾಗಿದೆ. ಸರ್ಕಾರದ ಜತೆಗೆ ಜನರು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು.
ಕಳೆದುಹೋದ ಮತ್ತು ತೊಂದರೆಗೊಳಗಾದ ಸಮುದಾಯಗಳನ್ನು ನಾವು ಬೆಂಬಲಿಸಬೇಕು. ರಾಜಧಾನಿ ಅಮರಾವತಿ, ಪೋಲಾವರಂ ಯೋಜನೆ ಕುಸಿದಿದೆ. ಅವುಗಳನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ನಾನು ಕೆಲಸ ಮಾಡುತ್ತೇನೆ ಎಂದರು.






































