[t4b-ticker]

ಡೇವಿಡ್ ಮರ್ಡರ್ ಕೇಸ್ : ಭೂಗತ ಪಾತಕಿ ಹೇಮಂತ್ ಪೂಜಾರಿಯ ಸಹೋದರ ರೂವಾರಿ

Picture of RB NEWS

RB NEWS

Bureau Report

ಉಡುಪಿ: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದಾನಿ ಯುಪಿಸಿಎಲ್‌ನ ಗುತ್ತಿಗೆ ಕೈತಪ್ಪಿದ ಕಾರಣಕ್ಕಾಗಿ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ, ತನ್ನ ಸಹೋದರ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಶೂಟ್‌ಔಟ್ ಪ್ರಕರಣದ ಬೆಳವಣಿಗೆಯ ಕುರಿತ ವಿವರವಾದ ಮಾಹಿತಿಗಳನ್ನು ನೀಡಿದರು.

ಎರ್ಮಾಳಿನ ಪ್ರಾಜೆಕ್ಟ್‌ನ್ನು ಕಿಶೋರ್ ಪೂಜಾರಿಗೆ ನೀಡಬೇಕೆಂದು ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಇಂಟರ್‌ನೆಟ್ ಮೂಲಕ ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜಗೆ ಕರೆ ಬಂದಿತ್ತು. ಆದರೆ ಅವರು ಯಾರು ಇದಕ್ಕೆ ಒಪ್ಪಿರಲಿಲ್ಲ.

ಈ ಹಿನ್ನೆಲೆಯಲ್ಲಿ ಅದೇ ವ್ಯಕ್ತಿ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರಿಗೂ ಕರೆ ಮಾಡಿ ಮಾತುಕತೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಶೂಟರ್‌ಗಳು, ಅವರೊಂದಿಗೆ ಸಮನ್ವಯ ಸಾಧಿಸಿರುವ ಅನೂಜ್ ಜೊತೆಯೂ ಹೇಮಂತ್ ಪೂಜಾರಿ ಸಂಪರ್ಕದಲ್ಲಿದ್ದನು ಎಂಬುದು ಕಂಡು ಬಂದಿದೆ. ಹೀಗೆ ಇವರೆಲ್ಲರು ಸೇರಿ ಡೇವಿಡ್ ಡಿಸೋಜ ಕೊಲೆಗೆ ಆರು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು.

‘ಈ ಪ್ರಕರಣದಲ್ಲಿ ನನ್ನ ಅಣ್ಣ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆ ಎಂದು ಕಿಶೋರ್ ಪೂಜಾರಿ ಹೇಳಿದ್ದಾನೆ. ಅದೇ ರಾತ್ರಿ ಆತ, ನಾವಿಬ್ಬರು ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ ಎಂದು ಕೂಡ ತಿಳಿಸಿದ್ದಾನೆ. ಹಾಗಾಗಿ ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆಯೇ ಎಂಬುದು ಇನ್ನೂ ನಮಗೆ ಸ್ಪಷ್ಟತೆ ಸಿಕ್ಕಿಲ್ಲ. ಆ ಬಗ್ಗೆ ತನಿಖೆ ಮಾಡಬೇಕಾಗಿದೆ’ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಹೇಮಂತ್ ಪೂಜಾರಿ ಕಳೆದ 10ವರ್ಷಗಳಿಂದ ಯಾವುದೇ ಬೆದರಿಕೆ ಕರೆಗಳನ್ನು ಮಾಡಿರುವುದು ವರದಿಯಾಗಿಲ್ಲ. ಆತ ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಬಂಧಿತನಾಗಿಲ್ಲ. ಕಳೆದ 25ವರ್ಷಗಳಿಂದ ತಲೆಮರೆಸಿ ಕೊಂಡಿದ್ದಾನೆ. ಕಿಶೋ‌ರ್ ಪೂಜಾರಿ ವಿರುದ್ಧ ಎರಡು ಕೊಲೆ ಪ್ರಕರಣಗಳು ಕೂಡ ಇವೆ. ಹೇಮಂತ್ ಪೂಜಾರಿ ಜೊತೆ ಸೇರಿ ಕೆಲವು ಅಪರಾಧ ಎಸಗಿರುವುದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಮುಂಬೈನ ನಟೋರಿಯಸ್‌ ಗ್ಯಾಂಗ್‌ಸ್ಟಾರ್, ಬಿಹಾರ ರಾಜ್ಯದ ನಳಂದ ನಿವಾಸಿ ಅನುಜ್ ಪಾಟೀಲ್(35) ಎಂಬಾತನನ್ನು ಪೊಲೀಸರು ಇಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬಲ್ಲಿ ಬಂಧಿಸಿದರು.

ಆರೋಪಿಯನ್ನು ಉಡುಪಿಗೆ ಕರೆದುಕೊಂಡು ಬರುವಾಗ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಆತ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿದನು. ಬಳಿಕ ಕೊಲ್ಲೂರು ಠಾಣೆ ಎಸ್ಟ್ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದನು.

ಈ ವೇಳೆ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದರು. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈತ 2017ರಿಂದ ತಲೆಮರಿಸಿಕೊಂಡಿದ್ದು, ಈತನ ವಿರುದ್ಧ ಮಹಾರಾಷ್ಟ್ರ ದಲ್ಲಿ ಮೋಕಾ ಕಾಯ್ದೆ ದಾಖಲಾಗಿದೆ. ದಾಖಲಾದ ಒಟ್ಟು 11 ಪ್ರಕರಣಗಳಲ್ಲಿ 10 ಪ್ರಕರಣಗಳು ಸಶಸ್ತ್ರ ಕಾಯ್ದೆ ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ ನಾಲ್ಕು ಗುಜರಾತ್ ನಲ್ಲಿ ಐದು, ದಾಮನ್ ಮತ್ತು ದಿಯುನಲ್ಲಿ ಒಂದು, ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಆರಂಭದಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿ ಇದರ ಹಿಂದೆ ಇರುವ ಬಗ್ಗೆ ಸಂಶಯ ಮೂಡಿತ್ತು. ಅದೇ ರೀತಿ ಕೇರಳದ ಕಂಪೆನಿಯ ಜೊತೆಗೂ ಡೇವಿಡ್‌ಗೆ ಹಣಕಾಸಿನ ವೈಮನಸ್ಸು ಇತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಈ ಎರಡೂ ಕಂಪೆನಿಗಳು ಈ ಕೃತ್ಯಕ್ಕೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top