ಕಾರ್ಕಳ : ಉದಯೋನ್ಮುಖ ಬರಹಗಾರರ ಅಮೂಲ್ಯ ಬರಹಗಳುಳ್ಳ 15 ಪುಸ್ತಕಗಳ ಬಿಡುಗಡೆ ಸಮಾರಂಭವು ಜು. 1ರಂದು ಬೆಳಿಗ್ಗೆ ಗಂಟೆ 11.30ಕ್ಕೆ ಕಾರ್ಕಳದ ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ ಜರಗಲಿದೆ ಎಂದು ಸಂಸ್ಥೆಯ ಪ್ರವರ್ತಕ ಅಶ್ವತ್ಥ್ ಎಸ್. ಎಲ್. ತಿಳಿಸಿದ್ದಾರೆ.

ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ ಪ್ರಕಟಗೊಂಡಿರುವ ಪುಸ್ತಕಗಳನ್ನು ಬರಹಗಾರ ಗಿರೀಶ್ ರಾವ್ ಹತ್ವಾರ್ (ಜೋಗಿ) ಬಿಡುಗಡೆಗೊಳಿಸಲಿದ್ದಾರೆ.

ನರೇಂದ್ರ ಪೈಯವರ ಸಾವಿರದೊಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು, ಸುಧಾ ನಾಗೇಶ್ ಅವರ ಹೊಂಬೆಳಕು, ವಾಣಿರಾಜ್ರವರ ಸವಿನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರ ಜೀವನಯಾನ, ಅನುಬೆಳ್ಳೆ ಅವರ ನಗುವ ನಯನ ಮಧುರ ಮೌನ, ರಾಮಕೃಷ್ಣ ಹೆಗಡೆಯವರ ಒಲವಧಾರೆ, ಲಕ್ಷ್ಮಣ ಬಜಿಲರ ನಿರ್ವಾಣ, ಅಶ್ವತ್ಥ್ ಎಸ್. ಎಲ್.ರ ಅರಿವಿನ ದಾರಿ, ರಾಜೇಂದ್ರ ಭಟ್ರ ರಾಜಪಥ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ, ಲಲಿತಾ ಮುದ್ರಾಡಿಯವರ ಅರ್ಥವಾಗದವರು, ದಿಗಂತ್ ಬಿಂಬೈಲ್ರ ಕೊಂದ್ ಪಾಪ ತಿಂದ್ ಪರಿಹಾರ, ಡಾ. ರಾಜಶೇಖರ್ ಹಳೆಮನೆ ಯವರ ಒಡಲುಗೊಂಡವರು, ಮಹೇಶ್ ಪುತ್ತೂರು ಬರೆದ ವರ್ಣ ಪುಸ್ತಕಗಳು ಅಂದು ಬಿಡುಗಡೆಯಾಗಲಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್, ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ಉಪಸ್ಥಿತಿ ಹೊಂದಲಿದ್ದಾರೆ.
ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ಪ್ರಖ್ಯಾತವಾಗಿರುವ ಪುಸ್ತಕ ಮನೆ ಸುಮಾರು 8ರಿಂದ 10ಸಾವಿರ ಪುಸ್ತಕಗಳನ್ನು ಹೊಂದಿದ್ದು, 15ಸಾವಿರದಷ್ಟು ಪುಸ್ತಕಗಳು ಈಗಾಗಲೇ ಮಾರಾಟಗೊಂಡಿವೆ.
ಪುಸ್ತಕ ಮನೆಯ ಮೊಬೈಲ್ ಬಿಡಿ ಪುಸ್ತಕ ಹಿಡಿ ಎನ್ನುವ ಯೋಜನೆಯಂತೆ ಸುಮಾರು ೫ಸಾವಿರ ಪುಸ್ತಕಗಳು ಕಾರ್ಕಳದ ಸರಕಾರಿ ಶಾಲೆಗಳು ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಒದಗಿಸಿ ಓದುವಂತೆ ಪ್ರೇರೆಪಿಸಲಾಗಿದೆ. ಜೋಯಿಡಾ ಘಾಟ್ ಪಂಗಡದ ಮಕ್ಕಳಿಗೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಲಾಗಿದೆ.

ಸುಮಾರು 7 ಜನ ಉಪನ್ಯಾಸಕರು ಸೇರಿ ಪ್ರಾರಂಭಿಸಿದ ಕ್ರಿಯೇಟಿವ್ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆ ಕಾಣುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರವರ್ತಕರಾದ ಗಣನಾಥ ಶೆಟ್ಟಿ, ಗಣಪತಿ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ನಿಶಾಂತ್ ಗೌಡ, ಪುಸ್ತಕ ಮನೆ ಮೇಲ್ವಿಚಾರಕ ಅನು ಬೆಳ್ಳೆ ಈ ಸಂದರ್ಭದಲ್ಲಿದ್ದರು.






































