
ಮಂಗಳೂರು :ಕೇವಲ ಹೊಟ್ಟೆಪಾಡಿಗಾಗಿ ಉತ್ತರ ಭಾರತದ ರಾಜ್ಯಗಳಿಂದ ಅಗಮಿಸಿ ನಿಕೃಷ್ಟ ಕೂಲಿಗೆ ದುಡಿಯುವ ಕಾರ್ಮಿಕ ವರ್ಗವನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಜಿಲ್ಲೆಯ ಭೂಮಾಫಿಯಾದ ರುವಾರಿಗಳು, ಬಿಲ್ಡರ್ ಗಳು,ಕಟ್ಟಡ ನಿರ್ಮಾಣ ಗುತ್ತಿಗೆದಾರರ ನಡೆ ತೀರಾ ಖಂಡನೀಯ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆ ತಿಳಿಸಿದ್ದಾರೆ.

ವಲಸೆ ಕಾರ್ಮಿಕರ ದಾಖಲೆಯನ್ನು ಮಾಡಬೇಕಾದ ಕಾರ್ಮಿಕ ಇಲಾಖೆ ಬಿಲ್ಡರ್ ಮಾಫಿಯಾದ ಎಂಜಲು ಕಾಸಿಗೆ ಕೈಯೊಡ್ಡಿ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತೆ ಮಾಡಿದೆ.ಕಾರ್ಮಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಬಿಲ್ಡರ್ ಗಳ ಹಾಗೂ ಗುತ್ತಿಗೆದಾರರಿಗೆ ಮೂಗುದಾರ ತೊಡಿಸಿ ಕಾರ್ಮಿಕ ಇಲಾಖೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕಾದ ದ.ಕ. ಜಿಲ್ಲಾಡಳಿತ ಬಾಯಿ ಮುಚ್ಚಿ ತೆಪ್ಪಗೆ ಕುಳಿತಿದೆ.ಈಗಾಗಲೇ ದ.ಕ. ಜಿಲ್ಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆದರೂ ಯಾರೂ ಬಾಯಿ ಬಿಡುತ್ತಿಲ್ಲ. ಹಾಗಾದರೆ ಇಲ್ಲಿ ಬಡವರ,ದುಡಿದು ತಿನ್ನುವವರ,ಅಮಾಯಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಅವರು ಜಿಲ್ಲಾಡಳಿವನ್ನು ಪ್ರಶ್ನಿಸಿದ್ದಾರೆ.



































