ಜಲ್ಲಿಗುಡ್ಡೆಯಲ್ಲಿ ದುರಂತದ ಮುನ್ಸೂಚನೆ: ತಕ್ಷಣ ಕ್ರಮಕ್ಕೆ ಡಿವೈಎಫ್ಐ ಒತ್ತಾಯ
RB NEWS
Bureau Report
ಜಲ್ಲಿಗುಡ್ಡೆಯಲ್ಲಿ ದುರಂತದ ಮುನ್ಸೂಚನೆ: ತಕ್ಷಣ ಕ್ರಮಕ್ಕೆ ಡಿವೈಎಫ್ಐ ಒತ್ತಾಯ
ಮಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ನಗರದ ಬಜಾಲ್ ವಾರ್ಡ್‌ನ ಜಲ್ಲಿಗುಡ್ಡೆ ಜಯನಗರ ಪ್ರದೇಶದಲ್ಲಿ ಮನೆಗೋಡೆ ಕುಸಿದ ಘಟನೆ ನಡೆದಿದೆ. ಜಯಪ್ರಕಾಶ್ ಎಂಬವರ ಮನೆಯ ಒಂದು ಭಾಗ ನಿನ್ನೆ ಕುಸಿದು ಬಿದ್ದಿದ್ದು, ಹತ್ತಿರದಲ್ಲಿರುವ ಸರಸ್ವತಿ ಎಂಬವರ ಮನೆ ಕೂಡ ಬಿರುಕು ಬಿದ್ದು ಕುಸಿಯುವ ಹಂತದಲ್ಲಿದೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಡಿವೈಎಫ್ಐ ಬಜಾಲ್ ಘಟಕದ ನಿಯೋಗವು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಪರಿಶೀಲಿಸಿತು. ತಕ್ಷಣ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ವಿಷಯವನ್ನು ತರಲಾಗಿದೆ ಎಂದು ತಿಳಿಸಲಾಗಿದೆ.
ಜಲ್ಲಿಗುಡ್ಡೆ ಜಯನಗರದ ಕೆಳಭಾಗದಲ್ಲಿ ರತ್ನಕ್ಕ ಎಂಬವರ ಮನೆಯಿಂದ ಜಯಪ್ರಕಾಶ್ ಹಾಗೂ ಸೀತಕ್ಕನ ಮನೆಯವರೆಗೆ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರೂ ಅದು ಪೂರ್ಣಗೊಂಡಿಲ್ಲ. ಮಣ್ಣಿನ ಗೋಡೆಯಿಂದ ನಿರ್ಮಿತ ಮನೆಗಳ ಅಡಿಪಾಯ ಗಟ್ಟಿ ಇರದ ಹಿನ್ನೆಲೆಯಲ್ಲಿ ಮಳೆಯಿಂದ ಮಣ್ಣು ಕೊಚ್ಚಿ ಹೋಗಿ ಮನೆಗೋಡೆ ಕುಸಿದಿದೆ.
ಇನ್ನೊಂದೆಡೆ, ಸರಸ್ವತಿ ಅವರ ಮನೆಗೆ ಸಮೀಪದಲ್ಲಿ ನಿರ್ಮಿಸಿದ ತಡೆಗೋಡೆ ಮತ್ತು ಮನೆಯ ಮಧ್ಯೆ ಉಂಟಾದ ಕಂದರಕ್ಕೆ ಮಣ್ಣು ತುಂಬದ ಕಾರಣ, ಆ ಮನೆಯ ಗೋಡೆ ಬಿರುಕು ಬಿದ್ದು ಅಪಾಯಕರ ಸ್ಥಿತಿಯಲ್ಲಿದೆ. ಜಯಪ್ರಕಾಶ್ ಅವರ ಮನೆ ಕುಸಿತದಿಂದ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದ್ದು, ಸರಸ್ವತಿ ಅವರ ಮನೆ ಕೂಡ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಳೆಗಾಲ ಸಹಾಯವಾಣಿ ತಂಡ ಹಾಗೂ ಎನ್‌ಡಿಆರ್‌ಎಫ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಂತ್ರಸ್ತರಿಗೆ ಮನೆ ದುರಸ್ತಿ ಸೇರಿದಂತೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಮುಖಂಡರಾದ ದೀಪಕ್ ಬಜಾಲ್, ಯಶ್ ರಾಜ್, ವರಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.