ಅವರ ಪಾಲಿಗೆ ಬಂದಿರುವುದು ಬರೇ ಹದಿನೆಂಟು ಕುರಿಗಳು ಮತ್ತು ಒಂದೂವರೆ ಎಕ್ರೆ ಭೂಮಿ.
ಇವತ್ತು ಅವರ ,ಮತ್ತವರ ಮಕ್ಕಳ ,ಮತ್ತವರ ಸೊಸೆಯರ ,ಮತ್ತವರ ಮೊಮ್ಮಕ್ಕಳ , ಮತ್ತವರ ಬೇನಾಮಿ ಹಣ ಬಂಗಾರ ಬೆಳ್ಳಿ ,ಇಡೀ ಕರ್ನಾಟಕದ ರಾಜಧಾನಿ ಮತ್ತು ಪಕ್ಕದ ಜಿಲ್ಲೆಗಳು,ಎಸ್ಟೇಟ್ ವಲಯಗಳ ಆಸ್ತಿ ಎಷ್ಟು ಇದೆ ಎನ್ನುವುದು ಆ ಸೂರ್ಯ ಮತ್ತು ಈ ಭೂಮಿಗೂ ಗೊತ್ತಿದೆ.
ಕೂಲಿ ಪಾಲಿ ಮಾಡಿ ದಿನಗಳೆಯುತ್ತಿದ್ದವರ ಮಗ ಕೋಟ ಶ್ರೀನಿವಾಸ ಪೂಜಾರಿಯವರ ಆಸ್ತಿ ಒಡವೆ ಮನೆ ಕುರಿತಾಗಿ ದಿನಾಲು ಮೌಲ್ಯ ಮಾಪನ ಮಾಡುತ್ತ ಜಾಲತಾಣದಲ್ಲಿ ಪ್ರಕಟಿಸುವುದು ಹಿತವೆನಿಸುವುದಿಲ್ಲ.
ರಾಜಕಾರಣಿಯಾದವನು ನಾಲ್ಕು ಕಾಸು ಸಂಪಾದಿಸದಿದ್ದರೆ ಮತ್ತೆ ಅವನಿಗೆ ಹೊಟೇಲು ಬಳಿಯೂ ಕರೆದು ಚಹ ಕುಡಿಸುವವರಿಲ್ಲ. ಮತ್ತೆ ನೀನೆಂತದು ಮಣ್ಣು ಹೊರುವುದಕ್ಕೆ ಮಂತ್ರಿ ಶಾಸಕನಾಗಿದ್ದಾ ಎಂದೂ ಕುಟುಕುತ್ತಾರೆ ,ಕುಟುಂಬದವರು ಸಮೇತ!

ಕೋಟ ಅವರದ್ದು ಕೈ ಗಿಡ್ಡ,ಯಾರಿಗೂ ಕಾಸು ಕೊಡುವವರಲ್ಲ,ಸಾರ್ವಜನಿಕ ಕಾಮಗಾರಿನೂ ಅಷ್ಟಕ್ಕಷ್ಟೇ ಅಂತೆಲ್ಲ ಜನಾರೋಪವಿದೆ. ನಾವು ನಮ್ಮ ಕೆಲವು ಮೀಡಿಯಾಗಳು ಹಣಕ್ಕಾಗಿ ಕೈ ಚಾಚುತ್ತ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿಯವರನ್ನೂ ಪರಮ ಭ್ರಷ್ಟಾಚಾರಿ ಎಂದು ಹೇಳುವುದಕ್ಕೂ ತಯಾರಾಗಿದ್ದವರು.
ಸದನದೊಳಗೆ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಗೆ ಹೇಗೆ ಮಾತಾಡುವುದಕ್ಕೂ ಸ್ವಾತಂತ್ರ್ಯವಿದೆ,ಅವರ ಮಾತಿಗೆ ಸಂವಿಧಾನದ ಟೈಮಿಂಗ್ಸ್ ಕೂಡಾ ಇದೆ.ಹಾಗಾಗಿ ನಿರರ್ಗಳವಾಗಿ ಮಾತಾಡುತ್ತಾರೆ,ರಾಜಕೀಯವಾಗಿ ಬೈಯುತ್ತಾರೆ, ಸದನದಲ್ಲಿ ಮೋದಿ ,ಮೋದಿಯವರ ಘನತೆ ಎನ್ನುವುದೇ ಮಾತಾಗಿರುತ್ತದೆ.
ಆದರೆ ಅಧಿಕಾರಿ ವರ್ಗ ಮಾತ್ರ ಕೋಟ ಅವರನ್ನು ಯಾರೋ ಉಳಿದವರ ಹಾಗೆ ಮಲ್ಟಿಸ್ಟೋರಿ ಬಿಲ್ಡಿಂಗಿಗೆ ,ವಿಧಾನಸೌಧ ಕಚೇರಿಗಳಿಗೆ ಬಂದು ಹೋಗುವ ಬಡ ಗಿರಾಕಿ ಎಂದೇ ತಿಳಿದುಕೊಂಡಿದ್ದಾರೆ ,ತಮ್ಮ ಸರಳವಾದ ಉಡುಗೆ ತೊಡುಗೆಯಿಂದಾಗಿ ಕಾಣುವುದಕ್ಕೆ ಹಾಗೇನೆ ಇದ್ದಾರೆ ಕೂಡ.
ಹಾಗಿರುವಾಗ ಅವರ ಕೆಲಸವಾಗುವುದಾದರೂ ಹೇಗೆ?ಆ IAS ಗಳು ಮುಖ್ಯಮಂತಿರಯನ್ನೇ ಯಾಮಾರಿಸುತ್ತಾರೆ ಹಾಗಿರುವಾಗ, ಕೋಟ ಯಾವ ಲೆಕ್ಕ?
ಬಹುಶಃ ಆರ್ ಎಸ್ ಎಸ್ ನವರು ರಾಯರ ಬೆನ್ನಲ್ಲಿದ್ದಿರಬೇಕು ಅದಕ್ಕೆ ಋಣ ಸಂದಾಯವಾಗಿ ಈ ಪೂಜಾರಿಯವರು ಕೂಡಾ ಆಗಾಗ ಕಚೇರಿಗೆ ಹೋಗಿ ಆರ್ ಎಸ್ ಎಸ್ ನವರ ಕೈ ಕುಲುಕಿ ಬರಿಗೈ ಮಾಡಿಕೊಂಡು ವಾಪಾಸು ಬರುವ ಸಂಪ್ರದಾಯ ,ಪದ್ಧತಿಯನ್ನೂ ಮಾಡಿಕೊಂಡಿರಬೇಕು.ಹಾಗೊಂದು ಸತ್ಯ ಮಾತನ್ನು ಕಟ್ಟಾ ಆರ್ ಎಸ್ ಎಸ್ ನವರೇ ನನ್ನ ಕಿವಿಗೆ ಇಟ್ಟಿದ್ದರು.
ಕೋಟ ಶ್ರೀನಿವಾಸ ಪೂಜಾರಿಯವರು ಬಹಳ ಪಾಪದ ಜನ ಹಾಗಂತ ,ನಾನು ಇವತ್ತಿಗೂ ಅವರ ಹತ್ತಿರ ಹೋಗಲಿಲ್ಲ ,ಹೋಗಲಾಗಲಿಲ್ಲ. ಅವರ ಎಲ್ ಎಚ್ ಕೊಠಡಿಯಲ್ಲಿ ಎಲ್ಲರೂ ಹೋಗಿ ಬಿದ್ದುಕೊಳ್ಳುವುದಂತೆ ,ಆ ಮನುಷ್ಯ ಕಾಲು ಕುತ್ತ ಮಾಡಿ ಕೂಲಿಕಾರ್ಮಿಕನ ಭಂಗಿಯಲ್ಲಿ ಮಲಕ್ಕೊಳ್ಳುವುದಂತೆ.ಅದೂ ಸಂತೋಷ ವಿಚಾರ.
ಕೋಟ ಶ್ರೀನಿವಾಸ ಪೂಜಾರಿ ಸೋಲಬೇಕು ಎಂದು ಮತದಾರ ಬಯಸುವುದಿಲ್ಲ ಆದರೆ ಅವರ ಕ್ಷೇತ್ರದ ಯಾವನೇ ಬಿಜೆಪಿ ಶಾಸಕ ಮಾಜಿ ಶಾಸಕನು ಕೂಡಾ ಪೂಜಾರಿ ಗೆದ್ದು ಬರಲಿ ಎಂದು ಪ್ರಾರ್ಥನೆ ಮತ್ತು ಆತ್ಮಸಾಕ್ಷಿಯ ಕೆಲಸ ಮಾಡುವುದಿಲ್ಲ,ಸಾಧ್ಯವಿಲ್ಲ ಕೂಡ! ಯಾಕೆಂದರೆ ಪೂಜಾರಿ ಬರೇ ಪರಿಷತ್ ಸದಸ್ಯನಾಗಿದ್ದುಕೊಂಡೇ ನಮ್ಮೆಲ್ಲರ ಹೆಡೆಯ ಮೆಟ್ಟಿ ಕುಣಿದಾಡಿದವನು.ಇನ್ನು,ಸಂಸತ್ತಿಗೆ ಪ್ರವೇಶಿಸಿದರೆ ಮತ್ತೆ ನಾವು ಸರಕಾರಿ ಬಸ್ಸಿನ ಚಾಲಕನಷ್ಟು ಮರ್ಯಾದೆಗೂ ಯೋಗ್ಯರಲ್ಲದವರಾಗುವುದು ನಿಘಂಟು ಎನ್ನುವುದೇ ಇವರೆಲ್ಲರ ತಲೆಬಿಸಿ.
ಅದೆಲ್ಲ ಚರ್ವಿತ ಚರ್ವಣ ಪುರಾಣ ಬೇಡ.ಆದರೆ ಕೋಟ ಶ್ರೀನಿವಾಸ ಪೂಜಾರಿಯವರನ್ನು ಜನ ಸೋಲಿಸಲಿಕ್ಕೆ ಅನಕೂಲವಾಗುವದಕ್ಕಾಗಿ ಅವರ ಆಸ್ತಿ ಮೌಲ್ಯಮಾಪನವನ್ನು ವಿರೋಧ ಪಕ್ಷದ ಬೆಂಬಲಿಗ ಮಂದಿಗಳು ಹಾಗೆ ಲೇವಡಿ ಮಾಡುವುದು ನನಗಂತೂ ಬೇಸರ.ನೀವೇನು ಬಯಕೆ ಇಟ್ಟುಕೊಂಡಿರುವಿರೊ ಅದನ್ನು ಮೇಲೆ ಹೇಳಿದವರೇ ಮಾಡುತ್ತಿದ್ದಾರೆ,ಸಾಕಲ್ಲವೇ?
ಪೂಜಾರಿಯವರಿಗೆ ನನ್ನ ಶುಭ ಹಾರೈಕೆಗಳು.
. –ವಿ.ಕೆ.ವಾಲ್ಪಾಡಿ


























