ಕಾರ್ಮಿಕರು ಕಾನೂನು ಅರಿತುಕೊಳ್ಳಬೇಕು – ನ್ಯಾಯಾಧೀಶೆ ಗೀತಾ.ಡಿ
ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ, ಕಾರ್ಮಿಕ ಇಲಾಖೆ ಕಾರ್ಕಳ ಹಾಗೂ ಸ್ವಯಂ ಪ್ರಭಾ ಉದ್ಯಮ್ ಮತ್ತು ಕಂಪೆನಿ ಮೇಲ್ಪಡ್ಡು, ಕುಕ್ಕುಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಕುಕ್ಕುಂದೂರು ಸ್ವಯಂ ಪ್ರಭಾ ಕ್ಯಾಶ್ಯ ಫ್ಯಾಕ್ಟರಿ ನಲ್ಲಿ ಜರಗಿತು.
ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಗೀತಾ ಡಿ.ರವರು ಕಾರ್ಯಕ್ರಮ ಉದ್ಘಾಟಿಸಿದರು.
1886ರಲ್ಲಿ ಅಮೇರಿಕಾದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಅದರಂತೆ ಕಾರ್ಮಿಕರಿಗೆ ದಿನವೊಂದಕ್ಕೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿಮಾಡಬೇಕೆಂಬ ಆಗ್ರಹವು ಶುರುವಾಗಿ ಅದು ಯಶಸ್ವಿಯಾಯಿತು. 1923ರಲ್ಲಿ ಭಾರತದಲ್ಲಿ ಈ ದಿನಾಚರಣೆ ಆರಂಭವಾಗಿದೆ. ನೌಕರರಿಗೋಸ್ಕರ ಕನಿಷ್ಠ ವೇತನ ಕಾಯ್ದೆ, ಸಮಾನ ವೇತನ ಕಾಯ್ದೆ, ಕಾರ್ಮಿಕರ ಕಾಯ್ದೆ ಮೊದಲಾದ ಕಾಯ್ದೆಗಳು ಕಾರ್ಮಿಕರ ಹಿತಕ್ಕಾಗಿ ಜಾರಿಗೆ ಬಂದವು ಎಂಬ ಮಾಹಿತಿಯನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳ ನ್ಯಾಯವಾದಿಗಳ ಸಂಘ (ರಿ.)ನ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿಯವರು ಹಿಂದಿನ ಕಾಲದಲ್ಲಿ ಕಾರ್ಮಿಕರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಈಗ ಕಾರ್ಮಿಕರ ಪರವಾಗಿ ಹಲವಾರು ಕಾಯ್ದೆಗಳು ಬಂದ ಪರಿಣಾಮ ಕಾರ್ಮಿಕರನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿದ್ದು, ಕಾರ್ಮಿಕರಿಗೆ ಹೆಚ್ಚಿನ ಸಂಬಳ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ವಿಶೇಷ ಸವಲತ್ತುಗಳು ದೊರೆಯುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಕಳದ ನ್ಯಾಯವಾದಿ ದೀಪಿಕಾ ಡಿ. ಪೂಜಾರಿ, ಕಾರ್ಮಿಕರ ಕಾನೂನುಗಳು ಮತ್ತು ಕಾಮಿಕರ ಅವಶ್ಯಕತೆಗಳ ಬಗ್ಗೆ ವಿವರವಾಗಿ ತಿಳಿಯಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪಾಲುದಾರ ಬೋಳ ಅಜಿತ್ ಕಾಮತ್ ಮಾತನಾಡಿ, ಪಾಲುದಾರರು ಹಾಕಿದ ಬಂಡವಾಳಕ್ಕೆ ಸರಿಯಾದ ಫಲ ಬರಬೇಕಾದರೆ ಕಾರ್ಮಿಕರ ಅನಿವಾರ್ಯತೆಗಳನ್ನು ಸರಿಯಾಗಿ ಅರಿತುಕೊಂಡು ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದರೆ, ಒಂದು ಸಂಸ್ಥೆಯು ಚೆನ್ನಾಗಿ ಬೆಳೆಯುತ್ತದೆ. ಸಂಸ್ಥೆಗಳು ಚೆನ್ನಾಗಿ ಬೆಳೆದರೆ ಮಾತ್ರ ಸರಕಾರ ಮತ್ತು ಸಮಾಜವು ಅಭಿವೃದ್ಧಿ ಹೊಂದುತ್ತವೆಯೆಂದು ತಿಳಿಸಿದರು.
ಸಂಸ್ಥೆಯ ಮೇಲ್ವಿಚಾರಕಿ ಶರ್ಮಿಳಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಮಿಕ ನಿರೀಕ್ಷಕ ಸಿ.ಯಚ್. ನವೀನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿ, ವಂದನಾರ್ಪನೆಗೈದರು.






























