



ಕಾರ್ಕಳ ಮಾರಿಜಾತ್ರೆ : ಸುಡುಬಿಸಿಲು ಕ್ಷೀಣಿಸದ ಭಕ್ತಸಮೂಹ




ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಳದ ವಾರ್ಷಿಕ ಮಹೋತ್ಸವವು ಭರದಿಂದ ಸಾಗುತ್ತಿದೆ.
ಬೆಳಿಗ್ಗಿನ ಜಾವ ನಗರದ ಮೂರುಮಾರ್ಗದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಶ್ರೀ ಮಾರಿಯಮ್ಮ ಮೂರ್ತಿಯನ್ನು ವೈದಿಕರು ಪ್ರತಿಷ್ಠಾಪಿಸಿದರು. ಮಹಾಮಂಗಳಾರತಿ ಬೆಳಗಿಸಿದ ಬಳಿಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಮಧ್ಯಾಹ್ನ 12.30ರ ವೇಳೆಯಲ್ಲೂ ಸುಡುಬಿಸಿಲನ್ನು ಲೆಕ್ಕಿಸದೇ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆ ವೇಳೆಗೆ ಭಕ್ತರ ಸಂಖ್ಯೆ ದ್ವಿಗುಣಗೊಂಡು, ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಳ ರಸ್ತೆ ಹಾಗೂ ಮೂರುಮಾರ್ಗ ಪರಿಸರದಲ್ಲಿ ಅಪಾರ ಭಕ್ತಸಾಗರ ಕಂಡುಬಂತು. ಊರ ಹಾಗೂ ಪರವೂರಿನ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.
ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಲ್ಲಿಗೆಗೆ ಭಾರೀ ಡಿಮ್ಯಾಂಡ್ !
ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವರಿಗೆ ಮಲ್ಲಿಗೆ ಅಂದರೆ ಅಚ್ಚುಮೆಚ್ಚು. ಹೀಗಾಗಿ ಭಕ್ತಾದಿಗಳು ತಮ್ಮಇಷ್ಟಾರ್ಥವಾಗಿ ಮಲ್ಲಿಗೆ ಸಮರ್ಪಿಸುವ ವಾಡಿಕೆ ಇದೆ.
ಕಾರ್ಕಳ ನಗರದ ಹೂವಿನ ವ್ಯಾಪಾರಿಗಳು ಮಲ್ಲಿಗೆಗಳನ್ನು ಎಲ್ಲೆಲ್ಲಿಂದೊ ತರಿಸಿ ವ್ಯಾಪಾರ ಭರಾಟೆ ಹೆಚ್ಚಿಸಿಕೊಂಡರು.
ಮಲ್ಲಿಗೆ ದರ ಹೆಚ್ಚಳವಾಗಿದ್ದರೂ ಭಕ್ತಾದಿಗಳು ಅದ್ಯಾವುದಕ್ಕೂ ಲೆಕ್ಕಿಸದೇ ಇಷ್ಟ ದೇವತೆಯಾಗಿರುವ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಿಗೆ ಮಲ್ಲಿಗೆ ಹಾರ ಸಮರ್ಪಿಪಿಸಿದರು.
ಬಾವಿನೀರಿನ ಸೇವೆ ಕೈಗೊಂಡ ಸಾಮಾಜಿಕ ಕಾರ್ಯಕರ್ತ

ಸಾಮಾಜಿಕ ಕಾರ್ಯಕರ್ತ ಹಾಗೂ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಕಳೆದ ಏಳು ವರ್ಷಗಳಿಂದ ವಿನೂತನ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಕಾರ್ಕಳ ಪುರಸಭಾ ವ್ಯಾಪ್ತಿಯ ಸಿಗಡಿಕೆರೆ ಅಭಿವೃದ್ಧಿ ಕಾಮಗಾರಿ ಶಾಸಕ ಸುನೀಲ್ ಕುಮಾರ್ ಹಾಗೂ ಊರ ದಾನಿಗಳ ನೇತೃತ್ವದಲ್ಲಿ ನಡೆದಿತ್ತು. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಏರಿಕೆಯಾಗಿ ಸುತ್ತಮುತ್ತಲಿನ ಹಲವು ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿತ್ತು.
ಈ ಹಿನ್ನೆಲೆ ಮಾರಿಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳ ಬಾಯಾರಿಕೆ ನೀಗಿಸಲು ತಮ್ಮ ಬಾವಿ ನೀರನ್ನು ಸೇವೆಯಾಗಿ ನೀಡುವ ಸಂಕಲ್ಪ ಮಾಡಿಕೊಂಡಿದ್ದ ಪ್ರಕಾಶ್ ರಾವ್, ಅಂದಿನಿಂದ ಇಂದಿನವರೆಗೂ ಬಸ್ ನಿಲ್ದಾಣ ಪರಿಸರದಲ್ಲಿ ಬೆಲ್ಲದೊಂದಿಗೆ ಬಾವಿ ನೀರು ವಿತರಿಸುತ್ತಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಭಕ್ತಾದಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.



































