ಕಾರ್ಕಳದಲ್ಲಿ ಗ್ರಾಹಕ ಮಾಹಿತಿ ಕಾರ್ಯಕ್ರಮ
ಕಾರ್ಕಳ: ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ್ಯಕ್ರಮ ಜೂನ್ 22 ರಂದು ಕಾಲೇಜು ಆವರಣದಲ್ಲಿ ಜರುಗಿತು.
ಮುಖ್ಯ ಮಾಹಿತಿದಾರರಾಗಿ ದ. ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿ ರಾಯಿ ರಾಜಕುಮಾರ ಆಗಮಿಸಿದ್ದರು.
ಅವರು ತಮ್ಮ ಭಾಷಣದಲ್ಲಿ ಗ್ರಾಹಕರ ಹಕ್ಕು, ಜವಾಬ್ದಾರಿಗಳು ಇತ್ಯಾದಿಯ ಕುರಿತು ತಿಳಿಸಿದರು. ಗ್ರಾಹಕನಿಗೆ ತೊಂದರೆಗಳಾದಲ್ಲಿ ಪರಿಹಾರದ ಮಾರ್ಗೋಪಾಯಗಳ ಬಗ್ಗೆಯೂ ಮಾಹಿತಿ ನೀಡಿ ಹಲವಾರು ಉದಾಹರಣೆಗಳ ಮೂಲಕ ಮನದಟ್ಟು ಮಾಡಿಸಿದರು.

ಕಾಲೇಜಿನ ಪ್ರಾಂಶುಪಾಲೆ ಅಖಿಲಾ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎಲ್ಲ ಉಪನ್ಯಾಸಕರು ಹಾಜರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ವಿದ್ಯಾರ್ಥಿ ಸಂಘದ ನಾಯಕ ಹುಲಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕಿ ಅಶ್ವಿನಿ ಸ್ವಾಗತಿಸಿ, ನಿರ್ವಹಿಸಿದರು.





































