ಕಾರ್ಕಳ : ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ನೀಡಿರುವ ಹೇಳಿಕೆಯೂ ರಾಜಕೀಯ ದುರುದ್ದೇಶ ಪೂರಿತವಾಗಿದೆ. ಸಂವಿಧಾನ ಅರಿತವರು ಯಾವುದೇ ಯೋಜನೆಗಳ ವಿರುದ್ಧ ಗದಾಪ್ರಹಾರ ನಡೆಸಲಾರರು ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನದಲ್ಲಿ ವಿಫಲವಾಗಿದ್ದು,ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸಿನ ಸೋಲು ನಿಶ್ಚಿತವಾಗಿದ್ದು ಆ ಬಳಿಕ ಗ್ಯಾರಂಟಿ ಯೋಜನೆ ಮುಂದವರಿಸದಿರುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬರಲಿದೆ ಎನ್ನುವ ಮುನ್ಸೂಚನೆಯೂ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಯವರ ಹೇಳಿಕೆಯಿಂದ ದೃಢಪಟ್ಟಿದೆ.
ಚುನಾವಣೆಯ ಕಾಂಗ್ರೆಸ್ ಸೋಲಿನ ಭೀತಿಯಿಂದ ಮತದಾರರನ್ನು ಹೆದರಿಸುವ ತಂತ್ರ ಅನುಸರಿಸುತಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ನ ಈ ರೀತಿಯ ಹೇಳಿಕೆ ಆಕ್ಷೇಪಾರ್ಹ ಮತ್ತು ಖಂಡನೀಯ.
ಸಂವಿಧಾನ ತಿದ್ದುಪಡಿ ಯಾವ ರೀತಿ ಮಾಡಬಹುದು ಯಾವಾಗ ಮಾಡಬಹುದು ಯಾವ ಯಾವ ವಿಷಯಗಳ ಬಗ್ಗೆ ಮಾಡಬಹುದು ಎನ್ನುವುದನ್ನು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವ ಪೂರ್ವದಲ್ಲಿ ಸಂವಿಧಾನದ ಎಲ್ಲಾ ಪರಿಚ್ಛೇದಗಳನ್ನು ಅಭ್ಯಸಿಸಲಿ ಎಂದಿದ್ದಾರೆ.





































