[t4b-ticker]

ಕರಾವಳಿ ವಿರೋಧಿ ಬಜೆಟ್ – ಸುನಿಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ : ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ ಒಟ್ಟಾರೆವಾಗಿ “ಬೃಹತ್ ಶೂನ್ಯ”ವಾಗಿದ್ದು, ಹೊಸ ಪದಪುಂಜಗಳನ್ನು ರೂಪಿಸುವುದಕ್ಕೆ ನೀಡಿದ ಆದ್ಯತೆಯನ್ನು ಹೊಸ ಯೋಜನೆಗಳ ಸೃಷ್ಟಿಗೆ ನೀಡಿಲ್ಲ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನ್ನು “11G” ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಹೇಳಿಕೊಂಡಿದ್ದರೂ, ಇಲಾಖಾವಾರು ವಿಶ್ಲೇಷಣೆ ನಡೆಸಿದಾಗ ಅದು “11G” ಬಜೆಟ್‌ ಅಲ್ಲ, “11 ಸುಳ್ಳುಗಳ ಬಜೆಟ್‌” ಎಂದು ಹೇಳಬಹುದಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಇತಿಹಾಸದಲ್ಲೇ ಕಾಣದಷ್ಟು ಸಾಲದ ಹೊರೆಯನ್ನು ಈ ಬಜೆಟ್ ಮೂಲಕ ಸರ್ಕಾರ ಹೊರಿಸಿದೆ. ಸುಮಾರು ₹1,32,000 ಕೋಟಿ ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ ₹8,24,389 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಬಂಡವಾಳ ವೆಚ್ಚವನ್ನು ₹74,682 ಕೋಟಿ ರೂ.ಗೆ ಇಳಿಕೆ ಮಾಡಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿದರು.

ಬಜೆಟ್‌ನ ಪ್ರತಿಪುಟವನ್ನು ಪರಿಶೀಲಿಸಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಯಾವುದೇ ಪ್ರಮುಖ ಯೋಜನೆ ಕಾಣುವುದಿಲ್ಲ. ಹೊಸ ವೈದ್ಯಕೀಯ ಕಾಲೇಜಿನ ಬೇಡಿಕೆ ಈಡೇರಿಲ್ಲ. ಪಶ್ಚಿಮ ವಾಹಿನಿ ಯೋಜನೆಗಳಿಗೆ ಅನುದಾನ ನೀಡಲಾಗಿಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರಿನಾಚೆಗೆ ಸಾಗದಿರುವುದು ಸರ್ಕಾರದ “ಬಿಯಾಂಡ್ ಬೆಂಗಳೂರು” ಯೋಜನೆಯ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.
ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್, ಪ್ರವಾಸೋದ್ಯಮಕ್ಕೆ ಉತ್ತೇಜನ, ಐಟಿ ಹೂಡಿಕೆ ಮೊದಲಾದ ವಿಚಾರಗಳಲ್ಲಿ ಸ್ಪಷ್ಟತೆ ನಿರೀಕ್ಷಿಸಿದ್ದೆವು. ಆದರೆ ಅವುಗಳಲ್ಲಿ ಯಾವುದೇ ಸ್ಪಷ್ಟತೆ ಕಾಣದಿರುವುದರಿಂದ ಈ ಬಜೆಟ್ ಕರಾವಳಿ ವಿರೋಧಿ ಬಜೆಟ್ ಆಗಿದೆ ಎಂದು ವಿ.ಸುನೀಲ್ ಕುಮಾರ್ ಆರೋಪಿಸಿದರು.
ಒಟ್ಟಾರೆಯಾಗಿ ಈ ಬಜೆಟ್ “playing to the gallery” ಎಂಬ ನಿಲುವಿನಂತೆ ಕಾಣುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top