ಕಡುಬೇಸಿಗೆಯಲ್ಲಿ ಬೇಕಾಬಿಟ್ಟಿಯಾಗಿಲ ಕುಡಿಯುವ ನೀರುಪೋಲು : ಮಹತ್ವ ತಿಳಿಯದ ಇಲಾಖಾಧಿಕಾರಿಗಳು !
RB NEWS
Bureau Report
ರಾ.ಹೆ. 169 : ಸಾಣೂರಿನಲ್ಲಿ ಕಳಪೆ ಪೈಪ್ ಲೈನ್ ಅಳವಡಿಕೆ – ನಿರಂತರ ಕುಡಿಯುವ ನೀರಿನ ಸೋರಿಕೆ!
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಣೂರು ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ (NH) ಅಧಿಕಾರಿಗಳಿಂದ ಅಳವಡಿಸಲಾದ HD ಪೈಪ್ ಲೈನ್ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಯಿಂದ ನಿರ್ಮಿತವಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ ಪೈಪ್‌ಗಳಲ್ಲಿ ಅನೇಕ ಕಡೆ ಬಿರುಕುಗಳು ಉಂಟಾಗಿ, ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಸಾಣೂರು ಸೇತುವೆಯಿಂದ ಶೇಡಿಗುಡ್ಡೆ – ಯೇರ್ನಡ್ಕ ರಸ್ತೆ ಭಾಗದ ನಿವಾಸಿಗಳು ಕಳೆದ ಸುಮಾರು ಎರಡು ವಾರಗಳಿಂದ ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ. ಸಮಸ್ಯೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಮುಖತಾ ಹಾಗೂ ದೂರವಾಣಿ ಮೂಲಕ ತಿಳಿಸಿದರೂ, ಅವರು ಇದನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಪಂಚಾಯತ್ ಅವಧಿಯೂ ಮುಗಿದಿರುವ ಹಿನ್ನೆಲೆ, ಸಾರ್ವಜನಿಕರು ಸಮಸ್ಯೆಯನ್ನು ಯಾರಿಗೆ ತಿಳಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಪಂಚಾಯತ್ ಸದಸ್ಯರನ್ನು ಸಂಪರ್ಕಿಸಿದರೆ PDO ಗೆ ದೂರು ನೀಡುವಂತೆ ಸೂಚಿಸುತ್ತಾರೆ. ಮತ್ತೊಂದೆಡೆ PDO ಅವರು ಗುತ್ತಿಗೆದಾರರಿಗೆ ವಿಷಯ ತಿಳಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ. ಕಡು ಬೇಸಿಗೆಯ ಸಂದರ್ಭದಲ್ಲಿ ದಿನವಿಡೀ ಅಮೂಲ್ಯ ಕುಡಿಯುವ ನೀರು ಸೋರಿಕೆಯಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಿ, ತಕ್ಷಣ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಹಾನಿಗೊಳಗಾದ ಪೈಪ್ ಲೈನ್ ದುರಸ್ತಿ ಮಾಡಿಸಿ, ನೀರಿನ ಸರಬರಾಜನ್ನು ಪುನಃಸ್ಥಾಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.