ಮಂಗಳೂರು, ಜು. 3: ಕಂಟೈನರ್ ಲಾರಿಯೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಭಾಗದಲ್ಲಿರುವ ವಿ.ಆರ್.ಎಲ್ ಕಚೇರಿ ಎದುರು ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಸದಾನಂದ ಶೆಟ್ಟಿಗಾರ್ (46) ಎಂದು ಗುರುತಿಸಲಾಗಿದೆ. ಮೃತರು ಕೊಟ್ಟಾರ ಭಾಗದಿಂದ ಉಡುಪಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ, ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿಯನ್ನು ಮಹಮ್ಮದ್ ಅಜರುದ್ದೀನ್ ಎಂಬವರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ದುಡುಕುತನದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದ್ದು, ಡಿಕ್ಕಿಯ ಪರಿಣಾಮ ಸ್ಕೂಟರ್ ಸವಾರನು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.