ಕಾರ್ಕಳದ ವಿಖ್ಯಾತ ಶೆಟ್ಟಿ ಒಬ್ಬ ಸಮರ್ಥ ಸಂಘಟನೆಗಾರ ಅನ್ನುವುದಕ್ಕೆ ಅವರನ್ನು ಬಿಜೆಪಿ ಪಕ್ಷವು ಗುರುತಿಸಿಕೊಂಡದ್ದೆ ಸಾಕ್ಷಿ.ಅಂಥ ಹೊಳಪು ಆತನಲ್ಲಿರುವುದನ್ನು ಪ್ರತ್ಯಕ್ಷವಾಗಿ ಗಮನಿಸಿದಾಗಲೇ ,ಮೊದಲ ಭೇಟಿಯಲ್ಲೇ ತಿಳಿಯುತ್ತದೆ.
ಕಾರ್ಕಳದ ಭುವನೇಂದ್ರ ಕಾಲೇಜು ನಲ್ಲಿ ಪದವಿ ಓದುತ್ತಿರುವಾಗಲೇ ಎ. ಬಿ. ವಿ. ಪಿ. ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿಯೂ ಆಯ್ಕೆಯಾಗಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಸೇರಿಕೊಂಡದ್ದರಿಂದ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಳ್ಳುವುದು,ಪರಿಷತ್ತಿನ ನಿರ್ದೇಶನಗಳನ್ನು ಪಾಲಿಸಿ ಅನುಷ್ಠಾನಕ್ಕೆ ತರುವುದು ಆರಂಭದಲ್ಲಿಯೆ ದೊರೆತ ಜವಾಬ್ದಾರಿ.ಉದಾಸೀನ ಅಥವಾ ಸಾಕು ಬೇಡ ಅಂದುಕೊಳ್ಳದೆ ನಾಯಕತ್ವದ ರೂಪು ಲಕ್ಷಣವನ್ನೆಲ್ಲ ಹದಮಾಡಿಕೊಂಡು ,ಬೆಳೆಸಿಕೊಂಡು ಬಂದು ಇದೀಗ ಬಿಜೆಪಿ ಯ ರಾಜ್ಯ ಮಟ್ಟದ ಸಮಿತಿಯವರೆಗೂ ತಲುಪುವುದಕ್ಕೆ ಅವಕಾಶ ಮಾಡಿಕೊಂಡಂತಾಯಿತು.
ಕಾರ್ಕಳ ತಾಲೂಕು ಮಟ್ಟದ ಎ. ಬಿ. ವಿ. ಪಿ. ಸಂಚಾಲಕನಾಗಿ ನಿಯುಕ್ತಿಗೊಂಡ ಬಳಿಕ ಸಾರ್ವಜನಿಕ ವಲಯಗಳಲ್ಲಿಯೂ ಗುರುತಿಸಿಕೊಳ್ಳುವ ಅವಕಾಶ ದೊರೆತು ಕೆಲವೊಂದು ಸಂಘಟಿತ ಹೋರಾಟಗಳ ಮುತುವರ್ಜಿಯಲ್ಲಿ ಮತ್ತಷ್ಟು ಪರಿಚಯ ವಿಸ್ತರಿಸಿಕೊಂಡರು.
ಕಾಲೇಜು ದಿನಗಳಲ್ಲಿಯೇ ಕೆ. ಎಫ್. ಡಿ. ಸಂಘಟನೆಯ ವಿರುದ್ಧ ಜವಾಬ್ದಾರಿಯುತ ಹೋರಾಟ ಮಾಡಿರುವುದು,ಅಣ್ಣಾ ಹಜಾರೆಯವರ ಭಷ್ಟಾಚಾರ ವಿರೋಧಿ ಹೋರಾಟದಲ್ಲೂ ತೊಡಗಿಕೊಂಡದ್ದು,ಮಂಗಳೂರು ವಿಶ್ವ ವಿದ್ಯಾನಿಲಯದ ಧೋರಣೆಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಗಳಾಗಿದ್ದಾಗ ಎ. ಬಿ. ವಿ. ಪಿ. ಸಂಘಟನೆಯಲ್ಲಿ ಬಹುಸಂಖ್ಯೆಯಲ್ಲಿ ಪ್ರಬಲ ಹೋರಾಟ ಮಾಡಿದ ಒಬ್ಬ ಕ್ರಿಯಾಶೀಲ ಮುಂದಾಳು ವಿಖ್ಯಾತ ಶೆಟ್ಟಿ.
ಕಾಲೇಜು ಮುಗಿಸಿದ ಬೆನ್ನಲ್ಲೆ ಬಿ. ಜೆ. ಪಿ. ಯು ವಿಖ್ಯಾತ್ ಶೆಟ್ಟಿಯನ್ನು ನಗರ ಯುವ ಮೋರ್ಚಾ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದರಿಂದ ಅತ್ತ ಪಕ್ಷವೂ ಪ್ರಯೋಜನ ಪಡೆಯಿತು ಇತ್ತ,ವಿಖ್ಯಾತ್ ಶೆಟ್ಟಿಗೆ ನಾಯಕತ್ವ ವಿಕಸನಕ್ಕೆ ಒಳ್ಳೆಯ ಅವಕಾಶ ದೊರೆಯಿತು.
ಕಾರ್ಕಳ ಬಿ ಜೆ ಪಿಯ ಯುವಮೋರ್ಚಾ ನಗರ ಉಪಾಧ್ಯಕ್ಷನಾಾಗಿಯೂ ಅಹರ್ನಿಶಿ ಕೆಲಸ ಮಾಡಿದ್ದಾರೆ.ಯುವಕನ ಉತ್ಸಾಹ ಕೆಲವರಿಗೆ ಇರಿಸುಮುರಿಸಾಗುತ್ತಿದ್ದುದೂ ಉಂಟು.ಅನೇಕ ಸಂದರ್ಭಗಳಲ್ಲಿ ತಾನೇ ವಿಶೇಷ ಮುತುವರ್ಜಿಯಿಂದ ಕಾರ್ಯಕ್ರಮ,ಹೋರಾಟಗಳಿಗೆ ಮುಖಂಡನಾಗಿದ್ದೂ ಉಂಟು.ಹಾಗಂತ ಪಕ್ಷದ ಶಿಷ್ಟಾಚಾರ ಉಲ್ಲಂಘಿಸಿದ್ದಿಲ್ಲ. ಪಕ್ಷದ ಸದುದ್ದೇಶಗಳು ಜನಪರ ಹೋರಾಟಗಳನ್ನು ಸಾರ್ವಜನಿಕರಿಗೆ ಮನದಟ್ಟ ಮಾಡುವುದರಲ್ಲಿ ನಿಸ್ಸೀಮನಾಗತೊಡಗಿದರು.ಎಲ್ಲರಿಗೂ ಹಿತವಾಗತೊಡಗಿದರು.
ಯುವಕನ ಉತ್ಸಾಹದ ಮುನ್ನುಗ್ಗುವಿಕೆಗೆ ಬಿ ಜೆ ಪಿ ಯು ತಡೆ ದಂಡೆ ಕಟ್ಟದೆ ಇನ್ನೊಂದು ಎತ್ತರಕ್ಕೆ ಏರಿಸಿತು. ತಾಲೂಕು ಯುವ ಮೋರ್ಚ ಉಪಾಧ್ಯಕ್ಷ ಹುದ್ದೆ ಕಟ್ಟಿತು. ಹಾಗೆನೆ ಮತ್ತೆ ನಗರ ಯುವ ಮೋರ್ಚ ಅಧ್ಯಕ್ಷ ಹುದ್ದೆ ಕೊಟ್ಟು ಸಾರ್ವಜನಿಕ ಸೇವಾ ವ್ಯಕ್ತಿಯಾಗಿ ರಾಜಕೀಯದಲ್ಲಿ ಬೆಳೆಸಿಕೊಳ್ಳುವುದಕ್ಕೆ ಯಥೇಚ್ಚ ಅವಕಾಶವನ್ನು ಮಾಡಿಕೊಟ್ಟಿತು. ಆ ಎಲ್ಲ ಹುದ್ದೆಗಳು ನಿರಾಯಾಸವಾಗಿ ದೊರೆತಿಲ್ಲ, ವಿಖ್ಯಾತ್ ಶೆಟ್ಟಿಯ ನಿರಂತರ ಕೆಲಸ ಕಾರ್ಯ ಚಟುವಟಿಕೆಗಳನ್ನು ಹೊಂದಿಕೊಂಡಿತ್ತು. ತನಗೆ ಲಭ್ಯವಾದ ಹುದ್ದೆಗಳನ್ನು ಸರಿಯಾಗಿ ಬಳಸಿಕೊಂಡು ಪಾದರಸದಂತೆ ವಿಖ್ಯಾತ್ ಓಡಾಡಿದರು
ಇದೀಗ ಅದೇ ವಿಖ್ಯಾತ ಶೆಟ್ಟಿಯ ಕಾರ್ಯವೈಖರಿಗೆ,ಸಂಘಟನಾ ಸಾಮರ್ಥ್ಯಕ್ಕೆ,ಜನರ ನಡುವಿನ ಬಾಂಧವ್ಯಕ್ಕೆ,ಅಸಂಖ್ಯಾತ ಯುವಕರ ಸಂಪರ್ಕ ಗಳಿಸಿದ್ದಕ್ಕೆ ಬಿಜೆಪಿಯು ವಿಖ್ಯಾತ್ ಶೆಟ್ಟಿಯವರನ್ನು ರಾಜ್ಯ ಯುವ ಮೋರ್ಚ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಪಕ್ಷದ ಒಬ್ಬ ಆದರ್ಶ ಯುವಕನನ್ನು ರಾಜ್ಯ ಮಟ್ಚದಲ್ಲಿ ತಂದು ಕೂರಿಸಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರ.ಕಾರ್ಕಳದ ನಾಗರಿಕರಿಗೆ ಹೊಸದೊಂದು ಹೆಮ್ಮೆ!
ರಾಜಕೀಯ ಪಕ್ಷ ಯಾವುದೇ ಆಗಿರಬಹುದು ಇಂದಿನ ಯುವಕರಲ್ಲಿ ಸಂಘಟನೆ ಮತ್ತು ಸಂವಹನದ ಕೊರತೆ ಜಾಸ್ತಿ ಇರುವಾಗ ಅನೇಕ ಯುವಕರನ್ನು ಬಿಜೆಪಿಯು ಹುಡುಕಿ ಹೆಕ್ಕಿ ಅವರಿಗೆ ಯೋಗ್ಯವಾದ ಸ್ಥಾನಮಾನ ಕೊಡುತ್ತಿರುವುದು ಅದು ಶ್ಲಾಘನೀಯ ವಿಚಾರ.
ವಿಖ್ಯಾತ ಶೆಟ್ಟಿಯವರು ಪಾದರಸದ ರೀತಿಯಲ್ಲೇ ಓಡಾಡುವುದು.ಬಹಳ ಮೆತ್ತಗೆ ಮತ್ತು ಬೇಗನೆ ಆತ್ಮೀಯತೆ ಹುಟ್ಟುವ ರೀತಿಯ ಧ್ವನಿಯಲ್ಲಿ ಮಾತಾಡುವುದನ್ನೆ ಜನ ಮೆಚ್ಚುವುದು ಮತ್ತು ನಾಯಕನಾಗುವುದಕ್ಕೆ ಅವಕಾಶ ಕೊಡುವುದು.
ಮೂವತ್ಮೂರು (33)ವರ್ಷ ವಯಸ್ಸಿನಲ್ಲೇ ಬಹಳ ಎತ್ತರಕ್ಕೆ ಏರಿದ್ದಾರೆ,ಪಕ್ಷ ಕೊಂಡೊಯ್ದಿದೆ.ಯಾವುದೇ ಕೆಟ್ಟ ಆರೋಪ,ಅಪವಾದಗಳಿಲ್ಲದೆಯೆ ರಾಜಕೀಯದಲ್ಲಿ ಮುಂದುವರಿದುಕೊಂಡು ಬಂದಿರುವ ವಿಖ್ಯಾತ ಶೆಟ್ಟಿಯವರ ಹೆಸರಿನಲ್ಲೇ ಬಹುಖ್ಯಾತಿ ಯೋಗವಿದೆ! ಮೂರ್ತಿ ಚಿಕ್ಕದಾದರೂ ನಾಯಕತ್ವದ ಕೀರ್ತಿ ಉತ್ತುಂಗದಲ್ಲಿರುವುದು ಉಲ್ಲೇಖನೀಯ ವಿಚಾರ.
ವಿಖ್ಯಾತ್ ಶೆಟ್ಟಿಯಂಥವರು ನಮ್ಮಲ್ಲಿ ಕೆಲವೇ ಕೆಲವು ಮಂದಿ ಇರುವುದು.ಅದು ಯಾವ ರಾಜಕೀಯ ಪಕ್ಷವೇ ಆಗಿರಲಿ,ಸಂಘಟನೆಗಳಾಗಿರಲಿ ಯುವಕರಲ್ಲಿ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ.ಆದರ್ಶಗಳೇ ಇಲ್ಲದೆ ಪದಾಧಿಕಾರಿಗಳಾಗುತ್ತಾರೆ. ರಾಜಕೀಯ ಭ್ರಮನಿರಸನ ಯಾಕಾಗುತ್ತಿದೆ ಅನ್ನುವುದಕ್ಕೆ ಮುಖ್ಯ ಕಾರಣವೆಂದರೆ, ಯುವಕರನ್ನು ನಾಯಕತ್ವಕ್ಕೆ ಪ್ರಚೋದಿಸದಿರುವುದು,ಯೋಗ್ಯ ಯುವಕರನ್ನು ಹತ್ತಿರ ಬರಮಾಡಿಕೊಳ್ಳದಿರುವುದು. ಶಾಸಕ ,ಸಂಸದರ ಮಕ್ಕಳಿಗೆ ಸರಿಯಾದ ಮೂಗು ಮುಸುಡು ಶಿಕ್ಷಣ ಇಲ್ಲದಿದ್ದರೂ ಅವರನ್ನೆ ಎಲ್ಲ ಹುದ್ದೆಗಳಿಗೆ ಕೂರಿಸುವುದು.
ವಿಖ್ಯಾತ ಶೆಟ್ಟಿಯವರನ್ನು ಬಿ ಜೆ ಪಿ ಯ ರಾಜ್ಯ ಯುವ ಮೋರ್ಚ ಕಾರ್ಯದರ್ಶಿಯನ್ನಾಗಿ ಪಕ್ಷ ನೇಮಕ ಮಾಡಿರುವುದು ಇನ್ನೂ ಅನೇಕ ಯುವಕರಿಗೆ ರಾಜಕೀಯದಲ್ಲಿ ಬದ್ಧತೆ ಮತ್ತು ಕಠಿಣ ಪರಿಶ್ರಮದಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಹುಟ್ಟಿಸಿದಂತಾಗಲಿ.
ಸಮಾಜದ ಕಟ್ಟ ಕಡೆಯ ಮಂದಿಯನ್ನು ಗುರುತಿಸುವ,ಅವರ ಅಗತ್ಯವನ್ನು ತಿಳಿಯುವ ಅದನ್ನು ದೊರಕಿಸಿಕೊಡುವ ಹೋರಾಟಗಳು ಇವತ್ತಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ನಾಯಕತ್ವದ ಎಲ್ಲ ಯೋಗ್ಯತೆಗಳನ್ನು ಅಳವಡಿಸಿಕೊಂಡಿರುವ ಕಾರ್ಕಳದ ವಿಖ್ಯಾತ ಶೆಟ್ಟಿಗೆ ರಾಜಕೀಯವಾಗಿ ಉತ್ತರೋತ್ತರ ಏಳ್ಗೆೆ ದೊರೆಯಲಿ,ದೊರೆಯುತ್ತದೆ ಕೂಡ.ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಕೂಡಾ ಒಳ್ಳೆಯ ಬೆಂಬಲ ಕೊಟ್ಟು ಹುರಿದುಂಬಿಸುತ್ತಿರುವುದೂ ಕೂಡ ವಿಖ್ಯಾತ ಶೆಟ್ಟಿಯವರಿಗೆ ತುಂಬಾ ಬಲವಾದ ರೆಕ್ಕೆ ಬಂದಂತಾಗಿದೆ.ಯುವಕರನ್ನು ಆಕರ್ಷಿಸುವಲ್ಲಿ ,ಹೆಕ್ಕಿ ತರುವಲ್ಲಿಯೂ ಸುನಿಲ್ ಕುಮಾರ್ ರಾಜಕೀಯದ ಗಿಡುಗನೇ ಸರಿ.
-ವಿ. ಕೆ. ವಾಲ್ಪಾಡಿ


























