ಎಲ್ಲ ಜಾತಿ ವರ್ಗವನ್ನು ಸಮಾನವಾಗಿ ಹಿಡಿದುಕೊಂಡಿದ್ದಿದ್ದರೆ ಕರಾವಳಿಯು ಬಿಜೆಪಿ ಸಾಮ್ರಾಜ್ಯವಾಗುತ್ತಲೇ ಇರಲಿಲ್ಲ -ವಿ. ಕೆ. ವಾಲ್ಪಾಡಿ

Picture of RB NEWS

RB NEWS

Bureau Report

ರಾಜ್ಯದ ಮಂಗಳೂರು ಲೋಕ ಸಭಾ ಚುನಾವಣೆಯು ನಾಡಿನ ಎಲ್ಲರ ಗಮನ ಸೆಳೆದಿದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಮತ್ತೆ ಸ್ಪರ್ಧಿಸುವುದಕ್ಕೆ ಪಕ್ಷ ನಿರಾಕರಿಸಿದೆ.ಚಂ ಚುಂ ಚಕಾರವಿಲ್ಲದೆನೆ ಆ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಎಪ್ಪತ್ತಕ್ಕೂ ಎಟಕಿರದ ರಾಜಕಾರಣಿಯೊಬ್ಬ ,ಪ್ರತಿ ಚುನಾವಣೆನಲ್ಲೂ ಗೆಲುವಿನ ಅಂತರವನ್ನು ಲಕ್ಷಗಳಿಗೆ ಏರಿಸಿಕೊಂಡು ಸತತ ಗೆಲುವು ಕಂಡ ಒಬ್ಬ ರಾಜಕಾರಣಿ ತಾನು ಇನ್ನೂ ಚುನಾಯಿಸಿಕೊಂಡೇ ಇದ್ದು ಉಳಿದವರ ಅವಕಾಶವನ್ನು ಕಿತ್ತು ತಿನ್ನಬೇಕು ಅಂತ ಯೋಚಿಸದೆ ಇದ್ದ ದೇಶದ ಏಕೈಕ ರಾಜಕಾರಣಿ ಎಂದು ನಳಿನ ಕುಮಾರ್ ಕಟೀಲ್ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಬೇಕು.

ಕಳೆದ ಏಳು ಅವಧಿಯಲ್ಲೂ ಬಿಜೆಪಿಯ ಕ್ಷೇತ್ರವೇ ಆಗಿ ಉಳಿದುಕೊಂಡು ಬರುತ್ತಿದ್ದ ಮಂಗಳೂರನ್ನು ಈ ಬಾರಿಯಾದರೂ ತನ್ನ ಕೈವಶ ಮಾಡಿಕೊಳ್ಳುವ ಸಹಜ ಆಸಕ್ತಿ ಕಾಂಗ್ರೆಸ್ ಪಕ್ಷದ್ದು. ಧರ್ಮ ರಾಜಕಾರಣ,ಹಲ್ಲೆ ,ಕೊಲೆಗಳ ಸಮೀಕರಣದಲ್ಲಿಯೆ ಮತ ಪಾಲಾಗುವುದಕ್ಕೆ ಕಾರಣವಾಗಿಸಿಕೊಂಡ ಇಲ್ಲಿನ ರಾಜಕೀಯವು ಸಕಾರಾತ್ಮಕವಾದ ಚಿಂತನೆಗಳ ಕೊರತೆಯಿಂದ ಕೊರಗಿ ಕೊಸರಾಡುತ್ತಿದೆ. ಬಿಜೆಪಿಯ ಧರ್ಮ ರಾಜಕಾರಣವನ್ನು ಹೇಗೆ ಬದಲಾಯಿಸಬಹುದು ಎನ್ನುವುದಕ್ಕೆ ಕಾಂಗ್ರೆಸ್ ಇನ್ನೂ ಕೂಡ ಧನಾತ್ಮಕವಾಗಿಯೊ,ವೈಚಾರಿಕವಾಗಿಯೋ ಚಿಂತಿಸದೆ ಸ್ವತಃ ತಾನೇ ಬುದ್ಧಿಗೇಡಿಯಾಗಿ ಸಮಯ ಬರುವಾಗೆಲ್ಲ ನಾಮಪತ್ರ ಹಾಕುತ್ತದೆ ಅಷ್ಟೆ.

ಇದೀಗ ಕಾಂಗ್ರೆಸ್ ಪಕ್ಷ ಒಂದು ಪ್ರಬಲ ಸಂಖ್ಯೆಯ ಸಮುದಾಯವನ್ನು ಬಲವಾಗಿ ಓಲೈಸುವ ಯತ್ನಕ್ಕೆ ಮುಂದಾಗಿದೆ.ಅದೇ ಸಮುದಾಯದವರು ಆ ಮೊದಲು ಎಷ್ಟು ಸಲ ಸೋತು ಧರಾಶಾಹಿಯಾಗಿದ್ದಾರೆ ಎಂದು ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ಶೂನ್ಯದ ಜೊತೆಗೆ ಸಮುದಾಯಕ್ಕೆ ಹೆದರಿಕೊಂಡಿರುವ ಬಗೆಯನ್ನು ಪ್ರದರ್ಶಿಸುತ್ತಿದೆ.

ಸುಮಾರು ನಾಲ್ಕು ಲಕ್ಷಕ್ಕೆ ಮೀರಿದ ಮತಗಳು ಆ ಸಮುದಾಯದಲ್ಲಿದೆ ಎಂಬ ಮಾತ್ರಕ್ಕೆ ಕಾಂಗ್ರೆಸ್ಸನ್ನು ಗೆಲ್ಲಿಸಲು ತಾಕತ್ತು ಇದೆ ಅನ್ನಲಾಗದು. ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಪಡೆದ ಗೆಲುವಿನ ಮತಗಳನ್ನು ಹೇಗೆ ಭಾಗಾಕಾರ ಮಾಡಿದರೂ ಅದೇ ಸಮೀಕ್ಷೆಯಡಿಯಲ್ಲಿ ಈ ಬಾರಿ ಬಿಜೆಪಿಯು ಕನಿಷ್ಠ ಒಂದು ಲಕ್ಷದ ಎಪ್ಪತ್ತೈದು ಸಾವಿರ ಮತಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಬೇಕು ಅಥವಾ ಕಾಂಗ್ರೆಸ್ ಕಸಿದುಕೊಳ್ಳಬೇಕು.

ಕಾಂಗ್ರೆಸ್ ಪಕ್ಷವು ಆ ಒಂದು ಲಕ್ಷದ ಎಪ್ಪತ್ತೈದು ಸಾವಿರ ಮತಗಳನ್ನು ಒಂದು ಸಮುದಾಯದವರಿಂದಲೇ ಪಡೆಯಬೇಕಾಗುತ್ತದೆ,ಆ ಸಮುದಾಯದವರು ಮತ ನೀಡಿದರೆ ಗೆಲುವು ಖಚಿತ ಎಂದು ಖಾಸಗಿಯಾಗಿ ಮಾತ್ರವಲ್ಲ ಬಹಿರಂಗವಾಗಿ ಪ್ರಚಾರಕ್ಕಿಟ್ಟಿದೆ. ಅದುವೇ ಕಾಂಗ್ರೆಸ್ಸಿಗರ ತಪ್ಪು ನಿರ್ಧಾರಗಳು ಮತ್ತು ಮತಗಳ ಮೀಸಲಾತಿ ಲೆಕ್ಕಾಚಾರಗಳು.

ಬಿಜೆಪಿಯನ್ನು ಈ ಕ್ಷೇತ್ರದಲ್ಲಿ ಬಹಿರಂಗವಾಗಿ ಬೆಂಬಲಿಸುವುದರಲ್ಲಿ ಸಮಾಜದ ಮುಸ್ಲಿಮ್ ಮತ್ತು ಕ್ರೈಸ್ತ ಹೊರತಾಗಿ ಬಾಕಿ ಎಲ್ಲ ವರ್ಗ ಹಾಗೂ ಜಾತಿ ಸಮುದಾಯ ಇದೆ. ಕಾಂಗ್ರೆಸ್ಸಿನವರು ಮಾತ್ರ ತಿಳಿದುಕೊಂಡದ್ದು ತಪ್ಪು ಲೆಕ್ಕಾಚಾರ.ಆ ಎಡವಟ್ಟಿಗೆ ಕಾರಣವಾಗಿದ್ದೂ ಹಿಂದೆ ಅದೇ ಪಕ್ಷ! ಒಂದೇ ಸಮುದಾಯಕ್ಕೆ ಹೆಚ್ಚಿನ ಕಡೆ ಮಣೆ ಹಾಕಿ ಉಳಿದ ವರ್ಗ,ಜಾತಿಯನ್ನು ಕಡೆಗಣಿಸಿದ್ದು.ಆ ವರ್ಗ ಭೇದವನ್ನು ಸಾರಾಸಗಾಟಾಗಿ ತಳ್ಳಿದ ಕೀರ್ತಿ ಬಿಜೆಪಿಯವರಿಗೆ ಸಲ್ಲುವುದು.ಅದನ್ನು ಕರಾವಳಿ ಜಿಲ್ಲೆಯ ನಾಗರಿಕರು ಒಟ್ಟಾಗಿ ಸ್ವಾಗತಿಸಿದ್ದಾರೆ.

ಗೌಡ ಸಮಾಜದವರು ಬಿಜೆಪಿ ಪರ ಮತ ಹಾಕುತ್ತಿದ್ದಾರೆ. ದ. ಕ. ಜಿಲ್ಲೆಯ ಅವರು ಯಾಕೆ ಕಾಂಗ್ರೆಸ್ಸಿಗೆ ಮತ ಹಾಕುವುದಿಲ್ಲ ಎನ್ನುವುದೂ ಬಹಳ ಸೂಕ್ಷ್ಮವಾದ ವಿಷಯ. ವಾಸ್ತವವಾಗಿ ಆ ಸಮಾಜವು ಕಾಂಗ್ರೆಸ್ ಮತ್ತು ಜನತಾ ಪಕ್ಷ ಕಡೆ ಒಲವಿನದ್ದು. ಆ ಸಮುದಾಯಕ್ಕೆ ಕಾಂಗ್ರೆಸ್ ಮೇಲಿನ ಒಂದೇ ಒಂದು ಸಿಟ್ಟು ಸುಳ್ಯ ಕ್ಷೇತ್ರವನ್ನು ಮೀಸಲಾತಿ ಮಾಡಿದ್ದು.ಅಷ್ಟು ವರ್ಷಗಳಾದರೂ ಕ್ಷೇತ್ರವನ್ನು ಬದಲಾಯಿಸಲಿಲ್ಲ.ಆ ಬೇಸರ ಸುಳ್ಯದ ಗೌಡ ಸಮುದಾಯದ ರಾಜಕಾರಣಿಗಳಲ್ಲಿ ಈಗಲೂ ಇದೆ.ಸುಳ್ಯವನ್ನು ಹಾಗೆ ಮಾಡಿದ್ದು ಯಾಕೆ ಮತ್ತು ಮಾಡಿಸಿದ್ದು ಯಾವ ಜಾತಿಯವರು ಅನ್ನುವುದನ್ನು ಇಲ್ಲಿ ವಿವರಿಸುವುದು ಸರಿಯಾಗಲಿಕ್ಕಿಲ್ಲ.

ಹಿಂದುಳಿದ ವರ್ಗ ಮತ್ತು ಹಿಂದುಳಿದ ಜಾತಿಯವರು ಮೂಲತಃ ಕಾಂಗ್ರೆಸ್ಸಿಗರೇ ಆಗಿದ್ದರೂ ಅವರಲ್ಲಿನ ಯುವ ಪೀಳಿಗೆಯವರು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಕಾ ಮತದಾರರಾಗಿದ್ದಾರೆ.ಅವರನ್ನು ಸರಿಯಾದ ರೀತಿಯಲ್ಲಿ ಕಾಂಗ್ರೆಸ್ ತನ್ನ ಜೊತೆ ಉಳಿಸಿಕೊಂಡಿಲ್ಲ.ಸರಕಾರದ ಮೀಸಲಾತಿಯನ್ನೇ ಹೈಲೈಟ್ ಮಾಡುತ್ತ ಬಂದಿರುವುದು ಹೊರತಾದರೆ ಆ ಸಮುದಾಯದವರಿಗೆ ಒಂದು ಶಾಲು ಕೊಟ್ಟು ಚಿಕ್ಕದಾದ ಹುದ್ದೆ ಕೊಟ್ಟಿಲ್ಲ ,ಈ ಕರಾವಳಿಯ ಕಾಂಗ್ರೆಸ್ ಪಕ್ಷ. ಒಂದರ್ಥದಲ್ಲಿ ಅವರನ್ನು ಪಕ್ಷದ ಜೀತದಾಳುಗಳನ್ನಾಗಿಯೇ ಮಾಡಿಕೊಂಡು ಬಂದಿದೆ ಕರಾವಳಿಯ ಕಾಂಗ್ರೆಸ್.

ಬಿಲ್ಲವ ಸಮುದಾಯದವರನ್ನು ಅಲ್ಲದೆಯೆ ಬೇರೆ ಸಮುದಾಯವನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವ ಕೆಲಸ ಕಾರ್ಯ ಮಾಡಿಕೊಂಡೇ ಬಂದಿದ್ದರೆ ಬಹುಶಃ ಇವತ್ತು ಕರಾವಳಿಯಲ್ಲಿ ಅದರಲ್ಲೂ ದ. ಕ. ದಲ್ಲಿ ಬಿಜೆಪಿಗೆ ಸಿಗುತ್ತಿದ್ದ ಮತಗಳ ಪಾಲು ತೀರಾ ಕಡಿಮೆಯಾಗಿ ಕಾಂಗ್ರೆಸ್ ಎದ್ದೇಳುವುದಕ್ಕೆ ಖಂಡಿತ ಸಾಧ್ಯವಾಗುತ್ತಿತ್ತು.

ಆರು ತಿಂಗಳ ಹಿಂದೆ ಬರೆದಿದ್ದೆ, ಡಾ।ಯು. ಟಿ. ಇಫ್ತಿಕಾರ್ ಅವರಿಗೆ ಲೋಕಸಭಾ ಟಿಕೆಟ್ ನೀಡಿದ್ದಲ್ಲಿ ಅವರು ಗೆಲ್ಲುವ ಸಾಧ್ಯತೆ ಇದೆ ಎಂದು.ಮುಸ್ಲಿಮ್ ವ್ಯಕ್ತಿಗೆ ಅವಕಾಶ ಕೊಟ್ಟಾಗ ಹಿಂದೂಗಳು ರಿವೋಲ್ಟಾಗುತ್ತಾರೆ ಎನ್ನುವುದು ಕಾಂಗ್ರೆಸ್ಸಿನ ಕೆಳ ಮಟ್ಟದ ತಿಳುವಳಿಕೆ. ನಾನು ಯಾಕೆ ಆ ವ್ಯಕ್ತಿಯ ಹೆಸರು ಸೂಚಿಸಿದ್ದೆ ಎಂದರೆ ಆತ ಡಾ.ಜೀವರಾಜ ಆಳ್ವರ ಹಾಗೆ ಪಾದರಸದಂತಹ ರಾಜಕಾರಣಿಯೂ ಆಗಿದ್ದಾರೆ. ಅರೆ ಕ್ಷಣದ ಮಟ್ಟಿಗೆ ಅಮಿತ್ ಶಾ ಕೂಡಾ ಡಾ.ಇಫ್ತಿಕಾರ್ ಅವರನ್ನು ಶ್ಲಾಘಿಸಬಲ್ಲರು. !ಕರಾವಳಿಯ ಬಹುತೇಕ ಬಿಜೆಪಿಗರ ಓಟು ಆ ರಾಯರಿಗೆ ಸಿಕ್ಕಿಯೇ ಸಿಗುವುದು.ಅದರ ರಹಸ್ಯಕ್ಕೆ ಈ ಬರೆಹದಲ್ಲಿ ಅವಕಾಶ ಬೇಡ.

ಮುಸಲ್ಮಾನರ ಮತಗಳೇ ಸುಮಾರು ಮೂರೂ ಕಾಲು ಲಕ್ಷಗಳಿವೆ.ಅದರಲ್ಲಿ ಶೇಕಡ ತೊಂಬತ್ತರಷ್ಟ ಮತಗಳನ್ನು ದಾನ ಮಾಡಿಸುವ ತಾಕತ್ತಿನ ಪಾದರಸ ಆತ ಇಫ್ತಿಕಾರ್.ಅದಾದ ಮೇಲೆ ಕ್ರೈಸ್ತರು ಮತ ಹಾಕುತ್ತಾರೆ. ಹಿಂದುಳಿದ ವರ್ಗ ಜಾತಿಯವರು ಮುಸಲ್ಮಾನ ವಿರೋಧಿಗಳಲ್ಲವೇ ಅಲ್ಲ. ಇನ್ನು ಕಾಂಗ್ರೆಸ್ಸಿನಲ್ಲಿರುವ ಅಸಲಿ ಕಾಂಗ್ರೆಸ್ಸಿಗರು ಯಾರ ಎಷ್ಟು ಎಂಬುದು ಬಹಿರಂಗವಾಗುತ್ತದೆ.

ಜಿಲ್ಲೆಯಲ್ಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳು ಅದು ರಾಜಕೀಯವಲ್ಲ ಬದಲಾಗಿ ಅದನ್ನು ಬಿಜೆಪಿ ನಗದೀಕರಿಸಿಕೊಳ್ಳುವುದು ಅಷ್ಟೆ.ಮುಸಲ್ಮಾನರ ಜೊತೆ ಹಿಂದೂಗಳು ಸಾಮರಸ್ಯದಿಂದಲೇ ಬದುಕುತ್ತಿದ್ದಾರೆ,ವ್ಯವಹರಿಸುತ್ತಿದ್ದಾರೆ. ಇವತ್ತಿಗೂ ಅನೇಕ ಶ್ರೀಮಂತ ಮುಸಲ್ಮಾನರು ಅನೇಕ ಬಡ ಹಿಂದೂ ಕುಟುಂಬಗಳನ್ನು ಪೋಷಿಸುತ್ತಿದ್ದಾರೆ. ಬ್ಯಾರಿಗಳು ಎಂಬ ಒಡಕಿನ ಧ್ವನಿ ಅವರಲ್ಲಿ ಇಲ್ಲವೇ ಇಲ್ಲ.

ಡಾ.ಇಫ್ತಿಕಾರ್ ಗೆ ಟಿಕೇಟು ಕೊಡಬೇಕಾಗಿತ್ತು ಎಂದು ಸಮರ್ಥನೆ ಮಾಡಿ ಬರೆದುದಲ್ಲ. ಅಂದು ಬಿ. ಜನಾರ್ದನ ಪೂಜಾರಿಯವರು ಒಮ್ಮೆ ಸೋತಾಗಲೇ ಮತ್ತೊಬ್ಬ ಬಿಲ್ಲವ,ಬಂಟ ಬೇರೆ ಯಾರನ್ನಾದರೂ ಚುನಾವಣೆಗೆ ನಿಲ್ಲಿಸಿದ್ದಿದ್ದರೆ ಧನಂಜಯ ಕುಮಾರರ ನಂತರದಲ್ಲಿ ಡಿ ವಿ ಸದಾನಂದ ಗೌಡರು ಗೆಲ್ಲವುದಕ್ಕೆೇ ಸಾಧ್ಯ ಇರುತ್ತಿರಲಿಲ್ಲ. ಜಿಲ್ಲೆಯ ಲೋಕಸಭಾ ಸ್ಥಾನ ಕೈ ವಶದಿಂದ ಕಿತ್ತು ಹೊಗುವುದಕ್ಕೆ ಬಿ ಜನಾರ್ದನ ಪೂಜಾರಿಯವರ ಹಠಮಾರಿತನವೂ ಪ್ರಮುಖ ಕಾರಣಗಳಲ್ಲೊಂದಾಗಿದೆ.

ದ. ಕ. ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಜಾತ್ಯಾತೀತ ಮನೋಭಾವ ಯಾವತ್ತೋ ಕರಗಿ ಹೋಗಿದೆ. ಬಿಜೆಪಿಯವರನ್ನು ಮೇಲ್ವರ್ಗದವರ ಪಕ್ಷ ಎಂದು ದೂರುವ ಕಾಂಗ್ರೆಸ್ ಪಕ್ಷದ ನಡವಳಿಕೆ ನೋಡಿ ಬೇಸತ್ತವರೇ ಬಿಜೆಪಿಗೆ ಸೇರಿರುವುದು ಎಂಬ ಲೆಕ್ಕಾಚಾರ ದೊಡ್ಡದಿದೆ. ಕಾಂಗ್ರೆಸ್ಸಿನ ಆ ಮನೋಭಾವನೆಯನ್ನು ಸರಿಯಾಗಿ ಗಮನಿಸಿ ಅರ್ಥೈಸಿಕೊಂಡೇ ಬಿಜೆಪಿಯು ತನ್ನು ಅಂಗ ಸಂಘಟನೆಗಳ ಮುಖೇನ ಸಮಾಜದ ಶೋಷಿತ ವರ್ಗದವರ ಹೆಗಲಿಗೆ ಕೇಸರಿ ಶಾಲು ಹಾಕಿದ್ದು,ತಾವೇ ಪೇಟೆಯಿಂದ ಖರೀದಿಸಿ ಕೊಂಡೊಯ್ದ ಕೋಕ ಕೋಲವನ್ನು ದಲಿತರ ಮನೆಯೊಳಗೆ ಮುಚ್ಚಳ ಹಾರಿಸಿ ಗುಟುಕರಿಸಿದ್ದು.!ಅದೆಲ್ಲವೂ ಕಾಂಗ್ರೆಸ್ಸಿಗೆ ಅರಿವಾದುದು ಅದು ಪಂಚಾಯತಿ ಮಟ್ಟದಿಂದಲೇ ಸೋಲುತ್ತ ಬರುವಾಗ.

ಈ ಬಾರಿ ಮಂಗಳೂರಿನ ಕಾಂಗ್ರೆಸ್ ಪದ್ಮರಾಜ್ ಆರ್ ಅವರ ಉಮೇದುವಾರಿಕೆಯನ್ನು ವಿಶೇಷವಾಗಿ ಬಿಲ್ಲವ ಕ್ಯಾಂಡಿಡೇಟ್ ಎಂದು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿದೆ. ಅಲ್ಲಿ ಉಳಿದವರನ್ನು ಬದಿಗೆ ಸರಿಸಿ ಮಾತಾಡುತ್ತಿದ್ದಾರೆ ಅನ್ನುವ ಧಾಟಿ ಕೇಳಿ ಬರುತ್ತಿದೆ.ಬಿಲ್ಲವರ ಮತಗಳಿಗೇ ದಾಳಿ ಇಡಬೇಕೆಂಬ ಫರ್ಮಾನುಗಳ ಹೊರಡುತ್ತಿವೆ. ಅದು ಯಶಸ್ಸಾಗರೆ ಪದ್ಮರಾಜ್ ಗೆಲುವು ನಿಶ್ಚಿತ.
ಪದ್ಮರಾಜ್ ಅವರು ಗೆಲ್ಲುವುದೂ ಕೂಡ ಸಂತೋಷವೆ ಸರಿ.ಅವರು ಕೂಡ ತುಂಬಾ ಸರಳ,ಮೃದು ಸ್ವಭಾವದವರು, ಹಾಗೆ ಕೆಲವೆಲ್ಲ ಸಂಗತಿಗಳಿಂದ ಒಳ್ಳೆಯವರೆ ಆಗಿದ್ದಾರೆ.ಹಾಗಂತ ಅತ್ತ ಕಡೆಯ ಬಿಜೆಪಿ ಅಭ್ಯರ್ಥಿ ಕೂಡಾ ತುಂಬಾ ಸಾಧು ವ್ಯಕ್ತಿಯಾಗಿದ್ದಾರೆ,ಸಾರ್ವಜನಿಕರಿಗೆ ಸ್ಪಂದಿಸುತ್ತ ಬಂದಿರುವವರೆ ಆಗಿದ್ದಾರೆ. ಪಕ್ಷಾತೀತವಾಗಿ ಯೋಚಿಸುವ ಮತದಾರನಿಗೆ ಈ ಬಾರಿ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉಭಯ ಸಂಕಟವೇ ಸರಿ.

ಬಿಲ್ಲವರ ಸಂಘ ಸಂಸ್ಥೆಯವರಲ್ಲದೆ ಜಿಲ್ಲೆಯಲ್ಲಿ ಗುರುತಿಸಿಕೊಂಡ ಬಿಲ್ಲವ ಪ್ರಭಾವಿ ವ್ಯಕ್ತಿಗಳು ಕೂಡಾ ಈ ಬಾರಿ ಕಾಂಗ್ರೆಸ್ ಗೆ ವ್ಯಕ್ತಿಗತವಾಗಿ ಬೆಂಬಲಿಗರಾಗಿದ್ದಾರೆ.ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ ಸುರತ್ಕಲ್ ಅವರೀಗ ಬಹಿರಂಗವಾಗಿ ಕಾಂಗ್ರೆಸ್ಸಿನ ಪದ್ಮರಾಜರನ್ನು ಬೆಂಬಲಿಸುತ್ತಿದ್ದಾರೆ.ಮತ್ತೊಂದು ಕಡೆ ಮಂಗಳೂರಿನಲ್ಲಿ ಹುಲಿಯ ನೃತ್ಯತಂಡದ ಮೂಲಕರ್ತೃ ಯದ್ದು ಅವರು ಕೂಡಾ ಪದ್ಮರಾಜ್ ಬೆಂಬಲಕ್ಕೆ ಬಂದಿದ್ದಾರೆ.ಅವರ ಜಾತಿ ಬಲ ಸಂಖ್ಯೆ ಕಡಿಮೆಯಾದರೂ ಅವರ ಕೂಟ,ಸಂಪರ್ಕ ಬೆಂಬಲಿಗರು ಅಪಾರ ಇದೆ.ಇನ್ನೂ ಅನೇಕ ಪ್ರಭಾವಿಗಳು ಪದ್ಮರಾಜ್ ಅವರ ಬೆಂಬಲಕ್ಕೆ ಮುಂದಾಗಿದ್ದಾರೆ.

ಕೊನೆಯದಾಗಿ ಪ್ರಬಲವಾದ ಅಭಿಪ್ರಾಯವೇನೆಂದರೆ ,ಬಿಲ್ಲವ ಸಮಾಜ ಬಿಜೆಪಿಯಲ್ಲಿ ಸೇರಿಕೊಂಡದ್ದಲ್ಲ ಹಿಂದುತ್ವದಲ್ಲಿ ತಮ್ಮ ಸೇವೆಯನ್ನು ತೊಡಗಿಸಿಕೊಂಡಿದ್ದಾರೆ,ಹಿಂದೂ ಸೇವಕರಾಗಿದ್ದಾರೆ.ಅಂಥವರ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ತರುವುದು ಬಹಳ ಕಷ್ಟದ ವಿಚಾರ. ಬಿಲ್ಲವ ಸಮಾಜದ ಮತಗಳಲ್ಲಿ ಶೇಕಡಾ ಐವತ್ತರಷ್ಟನ್ನಾದರೂ ಪರಿವರ್ತಿಸಬೇಕಾಗುವುದು,ಅದೆಲ್ಲವೂ ಹಿಂದುತ್ವದ ಮತವೇ ಹೊರತು ಬಿಜೆಪಿಯ ಮತ ಅಲ್ಲ ಎನ್ನುವುದು ಗಮನಾರ್ಹ. ಕಾಂಗ್ರೆಸ್ಸಿನ ಮಹಾ ಭಕ್ತರೇ ಆಗಿದ್ದ ಬಿಲ್ಲವ ಸಮುದಾಯ ಬೇಷರತ್ತಾಗಿ ಬಿಜೆಪಿಯನ್ನು ಬೆಂಬಲಿಸುವುದಕ್ಕೆ ಕಾರಣವೇ ಕಾಂಗ್ರೆಸ್ಸಿನ ಧೋರಣೆ. ಬಿಲ್ಲವರ ಜೊತೆ ಎಲ್ಲ ಜಾತಿ ವರ್ಗವನ್ನು ಸಮಾನವಾಗಿ ಹಿಡಿದುಕೊಂಡಿದ್ದಿದ್ದರೆ ಕರಾವಳಿಯು ಬಿಜೆಪಿ ಸಾಮ್ರಾಜ್ಯವಾಗುತ್ತಲೇ ಇರಲಿಲ್ಲ.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top