ಉಡುಪಿ ಶ್ರೀಮಠದ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ” 2026ಕ್ಕೆ ಸಂಧ್ಯಾರಾಣಿ ಟೀಚರ್ ಆಯ್ಕೆ
RB NEWS
Bureau Report
ಉಡುಪಿ ಶ್ರೀಮಠದ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ” 2026ಕ್ಕೆ ಸಂಧ್ಯಾರಾಣಿ ಟೀಚರ್ ಆಯ್ಕೆ
ಕಾಸರಗೋಡು: ಗಡಿನಾಡಿನ ಕನ್ನಡ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ಕಾಸರಗೋಡು ಕನ್ನಡ ಭವನ ಹಾಗೂ ಸಮೂಹ ಸಂಸ್ಥೆಗಳ ಮುಖ್ಯಸ್ಥೆಯಾದ ಸಂಧ್ಯಾರಾಣಿ ಟೀಚರ್ ಅವರಿಗೆ 2026ನೇ ಸಾಲಿನ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ” ಪ್ರದಾನವಾಗಲಿದೆ. ಪರ್ಯಾಯ ಶಿರೂರು ಮಠ, ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ ಮತ್ತು ಕಥಾಬಿಂದು ಸಾಹಿತ್ಯ ವೇದಿಕೆ (ರಿ.)ಗಳ ಸಂಯುಕ್ತ ಆಶ್ರಯದಲ್ಲಿ, ಪಿ. ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಇದೇ ಏಪ್ರಿಲ್ 12ರಂದು ಉಡುಪಿಯ ರಜಾಂಗಣದಲ್ಲಿ ದಿನಪೂರ್ತಿ ನಡೆಯಲಿರುವ “ಕಥಾಬಿಂದು ಸಾಹಿತ್ಯ ಸಮ್ಮೇಳನ 2026” ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಡಿನಾಡಿನ ಜನಪ್ರಿಯ ಕನ್ನಡ ಸೇವಾ ಸಂಸ್ಥೆಯಾದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ , ಕನ್ನಡ ಭವನ ಪ್ರಕಾಶನ, ಉಚಿತ ವಸತಿ ಸೌಕರ್ಯ, ಉಚಿತ ಸಾರ್ವಜನಿಕ ವಾಚನಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಗಳ ಸ್ಥಾಪಕ ಸಂಚಾಲಕಿಯಾಗಿಯೂ, ಸಾರಥಿಯಾಗಿಯೂ ಸಂಧ್ಯಾರಾಣಿ ಟೀಚರ್ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ. ಸಮ್ಮೇಳನವನ್ನು ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಮಾಜಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಡಾ. ಹರಿಕೃಷ್ಣ ಪುನಃರೂರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಬಿರಾಮ ಉಡುಪ, ಜಯಾನಂದ ಪೆರಾಜೆ, ಡಾ. ಕೊಲಚಪ್ಪೆ ಗೋವಿಂದ ಭಟ್, ಡಾ. ವಾಮನ್ ರಾವ್ ಬೇಕಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಪಿ. ವಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ. “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ” ಸ್ವೀಕರಿಸಲಿರುವ ಸಂಧ್ಯಾರಾಣಿ ಟೀಚರ್ ಅವರಿಗೆ ಕನ್ನಡ ಭವನದ ಗೌರವಾಧ್ಯಕ್ಷರಾದ ಪ್ರದೀಪ್ ಬೇಕಲ್, ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಕಾರ್ಯದರ್ಶಿ ವಸಂತ್ ಕೆರೆಮನೆ, ರಾಜೇಶ್ ಕೋಟೆಕಣಿ ಸೇರಿದಂತೆ ಅನೇಕ ಅಭಿಮಾನಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.