ಉಡುಪಿ -ಚಿಕ್ಕಮಗಳೂರು ಕ್ಷೇತ್ರ
ಬಿಜೆಪಿಯಲ್ಲಿ ಜಂಗಿಕುಸ್ತಿ : ಶೋಭಾ ವಿರುದ್ಧ ಬೀದಿಗಿಳಿದ ಕಾರ್ಯಕರ್ತರು
ಉಡುಪಿ: ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗುವ ಮುನ್ನವೇ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಜಂಗಿಕುಸ್ತಿ ಹೆಚ್ಚಾಗಿದೆ. ಕಾರ್ಯಕರ್ತರು ಸಂಸದೆಯ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. “ಗೋ ಬ್ಯಾಕ್ ಶೋಭಾ” ಘೋಷಣೆಗಳು ತೀವ್ರವಾಗಿ ಕೇಳಿಬರುತ್ತಿದ್ದು, ಇದರ ಹಿಂದಿರುವ ಧ್ವನಿಯ ಶಕ್ತಿ ಯಾರಾದೆಂಬ ಯಕ್ಷಪ್ರಶ್ನೆ ರಾಜಕೀಯ ವಲಯದಲ್ಲಿ ಕಾಡತೊಡಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಜಯಪ್ರಕಾಶ್ ಹೆಗ್ಡೆಯವರನು ಹಿಂದುಳಿದ ವರ್ಗಗಳ ಅಧ್ಯಕ್ಷರಾನ್ನಾಗಿ ಮುಂದುವರಿಸಲಾಗಿದೆ.
ಕಾಂಗ್ರೆಸ್ ನ ಅಭ್ಯರ್ಥಿ ಯಾರೆಂಬ ಲೆಕ್ಕಚಾರ ಆಗಿಲ್ಲ. ಹೀಗಿದ್ದರೂ ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಅವರನ್ನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿನ್ನಾಗಿ ಮಾಡಲಾಗುತ್ತದೆ. ಅದಕ್ಕಾಗಿ ಉನ್ನತ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂಬ ವದಂತಿಗಳು ದಟ್ಟವಾಗಿದೆ.

ಪ್ರಬಲ ಮುಂದಾಳು ಆಗಿರುವ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಬಿಜೆಪಿಯಲ್ಲಿ ತೆರೆಮರೆಯಾಗಿದ್ದು, ಅಲ್ಲಿ ಏನಿದ್ದರೂ ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಹೆಸರುಗಳು ಕೇಳಿಬರುತ್ತದೆ. ಸಿ.ಟಿ.ರವಿಯ ಹೆಸರು ಸಣ್ಣಧ್ವನಿಯಲ್ಲಿ ಕೇಳಿಬರುತ್ತದೆ.
2ನೇ ಬಾರಿ ಸಂಸದೆಯಾಗಿ, ಕೇಂದ್ರ ಮಂತ್ರಿಯೂ ಆಗಿರುವ ಶೋಭಾ, ತಮ್ಮ ಇಲಾಖೆಯ ಕೆಲಸಗಳಲ್ಲಿ ಡೆಲ್ಲಿಯಲ್ಲಿಯೇ ನಿರತರಾಗಿದ್ದು, ಉಡುಪಿ, ಚಿಕ್ಕಮಗಳೂರು ಕಡೆ ಬಂದದ್ದು, ಕಾರ್ಯಕರ್ತರನ್ನು ಭೇಟಿಯಾದದ್ದು ವಿರಳ. ವಿವಾದದ ಸಂದರ್ಭಗಳಲ್ಲಿ ಉಡುಪಿ ಅಗಮಿಸಿ ವಿವಾದಿತ ಹೇಳಿಕೆ ನೀಡುವ ಮೂಲಕ ತಮ್ಮ ಇರುವಿಕೆಯನ್ನು ಗೊತ್ತು ಪಡಿಸುತ್ತಾರೆ. ಏನ್ನಿದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಯಹಸ್ತ ನನ್ನ ತಲೆ ಮೇಲಿರುವುದರಿಂದ ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಆದರೂ ಟಿಕೇಟ್ ಗ್ಯಾರೆಂಟಿ ನೆಲೆಯಲ್ಲಿ ಆರಾಮದಲ್ಲಿದ್ದರು.
ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಅವರ ಮಗ ಮಾಜಿ ಸಚಿವ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಕಾಂಕ್ಷಿಯಾಗಿ ನಿರಾಸೆಗೊಂಡಿದ್ದರು.
ನಂತರದ ದಿನಗಳಲ್ಲಿ ಪ್ರಮೋದ್ ಮಧ್ವರಾಜ್ ತನ್ನ ಬಲಪ್ರದರ್ಶನವನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೂ ವಿಸ್ತರಿಸಿ ಪಂಚಾಯತ್ ಮಟ್ಟಕ್ಕೆ ಇಳಿದು ಸಾಕಷ್ಟು ಬೆವರು ಹರಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ನಮೋ ಆ್ಯಪ್ ನಲ್ಲಿ ಶಿಫಾರಸು ಮಾಡುವಂತೆ ಕೈ ಮುಗಿಯುತ್ತಿದ್ದಾರೆ. ತಮ್ಮ ಹಿಂದಿನ ಸಾಧನೆಗಳ ಬಗ್ಗೆ ಕಲರ್ ಫುಲ್ ಪುಸ್ತಕಗಳನ್ನು ಹಂಚುತ್ತಿದ್ದಾರೆ, ಬಿಜೆಪಿಯ ಅಭ್ಯರ್ಥಿಯಾಗಿ ಸಂಸದರಾಗಲೇ ಬೇಕೆಂಬ ಕನಸ್ಸು ಕಂಡಿರುವ ಅವರು ತಳ ಮಟ್ಟದ ಕಾರ್ಯಕರ್ತರಿಂದ ಹಿಡಿದು ಮೇಲ್ಮಟ್ಟದ ನಾಯಕರ ವರೆಗಿನವರನ್ನು ಸಂಪರ್ಕ ಸಾಧಿಸಿ ಹಣ ಖರ್ಚು ಭರಿಸುತ್ತಿದ್ದಾರೆ ಎಂಬ ಮಾತು ಸುಳ್ಳಲ್ಲ.
ಈ ಎಲ್ಲಾ ಬೆಳವಣಿಗೆಯಿಂದ ವಿಚಲಿತಗೊಂಡ ಶೋಭಾ ದೆಹಲಿಯಿಂದ ನೇರವಾಗಿ ಕೃಷ್ಣನ ನೆಲೆಬೀಡಾದ ಉಡುಪಿಯತ್ತ ಮುಖಮಾಡಿಕೊಂಡು ಸಭೆಗಳನ್ನು ಆಯೋಜಿಸಿ ಅಲ್ಲೂ ಮಿತಿ ಮೀರಿದ ಮಾತಿನಿಂದ ಎಡವಟ್ಟು ಮಾಡಿಕೊಂಡಿದ್ದಾರೆ.
ಉಡುಪಿಗೆ ಬಂದವರೇ ಬಿಜೆಪಿಯಲ್ಲಿ ಹಣ ಇದ್ದವರಿಗೆ ಟಿಕೇಟ್ ಸಿಗುವುದಿಲ್ಲ, ಹಾಗೇ ಸಿಗುತ್ತಿದ್ದರೇ ಟಾಟಾ ಬಿರ್ಲಾ ಅಂಬಾನಿ ಅವರಿಗೂ ಟಿಕೇಟ್ ಸಿಗುತ್ತಿತ್ತು, ಅವರೂ ಪ್ರದಾನಿಯಾಗುತ್ತಿದ್ದರು ಎಂದು ಪ್ರಮೋದ್ ವಿರುದ್ಧ ಗಟ್ಟಿಯಾಗಿ ಗುಟುರು ಹಾಕಿದ್ದಾರೆ.

ಅತ್ತ ಚಿಕ್ಕಮಗಳೂರಿನಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು “ಗೋ ಬ್ಯಾಕ್ ಶೋಭಾ” ಎನ್ನುತ್ತಿದ್ದಾರೆ. ಶೋಭಾ ವಿರುದ್ಧ ಪತ್ರಗಳನ್ನು ಬರೆದು ಬಿಜೆಪಿ ಹೈಕಮಾಂಡ್ ಗೆ ಪೋಸ್ಟ್ ಮಾಡಿದ್ದಾರೆ. ಇತ್ತ ಉಡುಪಿಯಲ್ಲಿಯೂ ಬಿಜೆಪಿಯ ಮಲ್ಪೆ ಭಾಗದ ಕಾರ್ಯಕರ್ತರು ಮೊನ್ನೆ ನಡೆದ ಸಭೆಯಲ್ಲಿ ಶೋಭಾ ಅವರ ವಿರುದ್ದ ಜೋರಾಗಿಯೇ ಮಾತನಾಡಿದ್ದಾರೆ.
‘ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ, ಬಿಜೆಪಿಯಲ್ಲಿದ್ದವರು ಹೀಗೆ ಮಾಡುವವರಲ್ಲ, ಹೊರಗಿನಿಂದ ಬಂದವರದ್ದೇ ಕೆಲಸ ಇದು’ ಎಂದು ನೇರವಾಗಿ ಪ್ರಮೋದ್ ಅವರತ್ತ ಶೋಭಾ “ಕೈ”ತೋರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್, ‘ನನಗೆ ಉಡುಪಿ, ಚಿಕ್ಕಮಗಳೂರಿನಲ್ಲಿ ಸಂಚರಿಸುವಾಗ ಬಿಜೆಪಿ ಕಾರ್ಯಕರ್ತರ ಒಲವು ತನ್ನ ಕಡೆಗಿರುವುದು ಸ್ಪಷ್ಟವಾಗಿದೆ. ಮೀನುಗಾರರು ಕೂಡ ತಮ್ಮ ಸಮುದಾಯದ ವ್ಯಕ್ತಿ ಪಾರ್ಲಿಮೆಂಟ್ ಗೆ ಹೋಗಬೇಕು ಎಂದು ಬಯಸುತ್ತಿದ್ದಾರೆ. ಹೈಕಮಾಂಡ್ ತನ್ನನ್ನು ಪರಿಗಣಿಸುತ್ತದೆ’ ಎಂದು ತಮ್ಮ ಜಾತಿಯ ದಾಳ ಉರುಳಿಸಿದ್ದಾರೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಸಮುದಾಯದ ನಾಯಕರಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುವ ಸುದ್ದಿಗೋಷ್ಠಿಗಳನ್ನೂ ಮಾಡಿಸಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಅವರನ್ನು, ಡೆಲ್ಲಿಯ ಬಿಜೆಪಿಯ, ಆರೆಸ್ಸೆಸ್ಸ್ ಮುಖಂಡರನ್ನು ಭೇಟಿಯಾಗಿ ಟಿಕೇಟ್ ಗಾಗಿ ಟವೆಲ್ ಹಾಕಿ ಬಂದಿದ್ದಾರೆ, ಮೊನ್ನೆ ಆಯೋಧ್ಯೆಗೂ ಹೋಗಿ ಬಂದಿದ್ದಾರೆ, ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ ರಾರಾಜಿಸುವಂತೆ ಮಾಡಿದ್ದಾರೆ.
ಒಂದು ಕಡೆಯಲ್ಲಿ ಶೋಭಾ ಅವರ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿರುವ ಸಣ್ಣ ಅಸಮಾಧಾನವು ನಿಧಾನವಾಗಿ ಪ್ರಮೋದ್ ಅವರತ್ತ ಮುಖಮಾಡುವಂತಾಗಿದೆ.
ಆದರೇ ಬಿಜೆಪಿ ಕಾರ್ಯಕರ್ತರ ಒಂದು ಗುಣ ಇದೆ, ಅಭ್ಯರ್ಥಿ ಘೋಷಣೆ ಆಗುವ ತನಕ ತಾವು ಹೇಳಿದ್ದೇ ಸರಿ, ತಾವು ಹೇಳಿದವರಿಗೇ ಟಿಕೇಟ್ ಕೊಡಬೇಕು ಎಂದು ಹಾರಾಡುತ್ತಾರೆ, ಅತ್ತ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ಹೈಕಮಾಂಡ್ ಹೇಳಿದ್ದೇ ಸರಿ ಎಂದು ತೆಪ್ಪಗೇ ಪಕ್ಷದ ಅಭ್ಯರ್ಥಿಪರ ಪ್ರಚಾರಕ್ಕೆ ಹೊರಡುತ್ತಾರೆ.
ಇದು ಈಗಾಗಲೇ ಬಿಜೆಪಿಯಲ್ಲಿ ಚುನಾವಣೆ ಎದುರಿಸಿರುವ ಶೋಭಕ್ಕನಿಗೆ ಚೆನ್ನಾಗಿ ಗೊತ್ತಿದೆ. ಪ್ರಮೋದಣ್ಣನಿಗೆ ಮುಂದೆ ಗೊತ್ತಾಗಲಿದೆ.
ಛಲವಾದಿ ಯಡಿಯೂರಪ್ಪ ಅಭಯಹಸ್ತ ಇರುವ ವರೆಗೂ ಭಯ ಪಡಬೇಕಾದ ಅಗತ್ಯ ಇಲ್ಲ ಎಂಬ ಅತ್ಮಸೈರ್ಯವನ್ನು ಬೆಳೆಸುವ ಪ್ರಯತ್ನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಮುಂದಾಗಿದ್ದಾರೆ.






































