ಇಷ್ಟು ಆತುರ ಏನಿತ್ತು ಗಂಗಣ್ಣ ನಿಮಗೆ..?
ಎಲ್ಲೇ ಕಾಣಲಿ…ಕಂಡೊಡನೆಯೇ ಅಣ್ಣಯ್ಯ ಎಂದು ಬಾಯ್ತುಂಬ ಕರೆದು ಅಕ್ಕರೆಯಿಂದ ಕಣ್ಣರಳಿಸಿ ಮಾತಾಡುತಿದ್ದವರು ಪುತ್ತೂರು ಗಂಗಣ್ಣ..
ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ನಾಲ್ಕು ದಶಕಕ್ಕೂ ಅಧಿಕ ನಿಷ್ಠಾವಂತ ಕಲಾವಿದನಾಗಿ ಸೇವೆಗೈದ ಅವರು ಪ್ರತಿಭಾವಂತ, ಸೃಜನಶೀಲ ಪ್ರತಿಭೆ.
ಮೇಳದ ಪಾಲಿಗೆ ಅನಿವಾರ್ಯ ಕಲಾವಿದ.
ನಿರ್ದಿಷ್ಟ ವೇಷಗಳಿಗೆ ಸೀಮಿತರಾಗದೇ ಯಾವ ವೇಷ ಕೊಟ್ಟರೂ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದ ಅವರು ಧರ್ಮಸ್ಥಳ ಮೇಳದಲ್ಲಿದ್ದ ಪ್ರಸಿದ್ದ ಕಲಾವಿದರ ನೆರಳಲ್ಲಿ ಅರಳಿದವರು. ಆದ್ದರಿಂದಲೇ ಆ ಶಿಸ್ತು, ಸಂಸ್ಕಾರ ಇವರೊಳಗೂ ಬೇರಿಳಿದಿತ್ತು..
ತನಗೆ ಯಾವ ಪಾತ್ರ ಒದಗಲಿ ಅದನ್ನು ಅವರು ಭಿನ್ನವಾಗಲು ಪ್ರಯತ್ನಿಸುತ್ತಿದ್ದರು. ಸೃಜನಶೀಲವಾಗಿ ಬಣ್ಣ ಬರೆಯುತ್ತಿದ್ದರು. ಇದಕ್ಕೆ ಅನೇಕಾನೇಕ ಉದಾಹರಣೆಗಳಿವೆ.
ಗಂಗಣ್ಣ ಸೌಮ್ಯ ಕಲಾವಿದ. ಧರ್ಮಸ್ಥಳ ಮೇಳದ ಹೊರತಾಗಿ ಮಳೆಗಾಲದ ನಿಡ್ಳೆ ತಂಡದಲ್ಲೂ ಅವರದ್ದು ಅನಿವಾರ್ಯ ಕಲಾವಿದನ ಪಾತ್ರ. ಯಾವುದೇ ಪಾತ್ರಕ್ಕೂ ಸೈ ಎನಿಸುವ, ಪಾತ್ರಪೋಷಿಸುವ ಪ್ರತಿಭೆ ಅವರದ್ದು…
ಇಂಥವರು ವಿರಳಾತಿವಿರಳ.
ಅವರೊಬ್ಭ ಉತ್ತಮ ಬಣ್ಣಗಾರ. ಚಂದದ ಚಿಟ್ಟಿ ಇಡುತ್ತಿದ್ದರು. ಸ್ತ್ರೀ ವೇಷಗಳಲ್ಲೂ ಸೈ …
ಮುಖವೆಂಬ ಕ್ಯಾನ್ವಾಸ್ ನಲ್ಲಿ ಪಾತ್ರಕ್ಕೆ ಪೂರಕವಾಗಿ ಬಣ್ಣಬರೆದು ಸೃಜನಶೀಲತೆಯನ್ನು ಪ್ರಕಟಿಸುತ್ತಿದ್ದ ಅವರ ಕಲಾನೈಪುಣ್ಯ ವಿಶಿಷ್ಟ…
ಆದರೆ ಅದು ವಿಶೇಷವಾಗಿ ಗುರುತಿಸಲ್ಪಡದೇ ಹೋದದ್ದು ದುರಂತ…!
ಅವರ ಪ್ರತಿಭೆ ಮತ್ತು ಅನುಭವಕ್ಕೆ ತಕ್ಕ ಪ್ರಚಾರ,ಪ್ರಸಿದ್ದಿ ,ಮಾನ್ಯತೆ, ಪ್ರಶಂಸೆ ಸಿಗಲೇ ಇಲ್ಲ.!!
ಅವರದರ ಬೆನ್ನೇರಲೂ ಇಲ್ಲ. ಆದರೆ ದೇಶದಾದ್ಯಂತ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.
ಕಲಾಪ್ರೇಮಿಗಳ ಮನಗೆದ್ದಿದ್ದಾರೆ.
ಸವ್ಯಸಾಚಿ ಎಂಬ ಪದಕ್ಕೆ ಜೀವ ತುಂಬಿದ ಇಂಥ ಕಲಾವಿದರು ಮುಂದೆ ನಿರೀಕ್ಷಿಸುವುದೇ ಕಷ್ಟ…!
ಏನು ಆತುರವಿತ್ತು ಗಂಗಣ್ಣ…ನಿಮಗೆ?
ನಿಮಗಿನ್ನು ಅಂಗೀಕಾರದ, ಮಾನ್ಯತೆಯ ದಿನಗಳು ಬರುವುದಿತ್ತು. ಅದಕ್ಕೆಲ್ಲ ಕಾಯದೇ ಮೊದಲೇ ಹೋದಿರಾ..?
ಒಬ್ಬ ಕಲಾವಿದನಾಗಿ ನಿಮ್ಮದು ಬಣ್ಣ ತೆಗೆದ ಬೆನ್ನಲ್ಲೇ ಮುಗಿದ ವೇಷದಂತ ಬದುಕು!
ಅದೂ ಚೌಕಿಯಲ್ಲಿ!!
ಆ ಚೌಕಿಯಲ್ಲಿ ನಾವದೆಷ್ಟೋ ಬಾರಿ ಒಂದೇ ಪೆಟ್ಟಿಗೆಯಲ್ಲಿ ಕೂತಿದ್ದೇವೆ. ಒಂದೇ ಮನೆಯ ಅಣ್ಣ ತಮ್ಮಂದಿರಂತೆ ಹರಟಿದ್ದೇವೆ..
ನೀವೇ ಕೈಯ್ಯಾರೆ ಚಾ ತಂದು ಕೊಟ್ಟು ಕುಡಿಸುತ್ತಿದ್ದುದೆಲ್ಲ ಇನ್ನು ನೆನಪುಗಳಷ್ಟೇ..
ಅದೇ ಪೆಟ್ಟಿಗೆಯಲ್ಲಿ ಕುಳಿತು ವೇಷ ಕಳಚಿ, ಬಣ್ಣ ತೆಗೆಯುತ್ತಿದ್ದಂತೆಯೇ ಕಾಲ ನಿಮ್ಮನ್ನು ಕರೆದೊಯ್ಯಬೇಕೇ…??
ಇದು ಅರಗಿಸಲಾಗದ ಬೇಸರದ ವಿಷಯ.
ಒಟ್ಟಂದದಲ್ಲಿ ತೆಂಕುತಿಟ್ಟು ಯಕ್ಷಗಾನದ ಸವ್ಯಸಾಚಿ ಕಲಾವಿದರ ನಡುವೆ ಮಿಂಚಿನಂತೆ ಮಿನುಗಿ ಮರೆಯಾಗಿದ್ದೀರಿ. ಕಂಬನಿಯ ವಿದಾಯ.
ನಿಮ್ಮ ದಿವ್ಯಾತ್ಮಕ್ಕೆ ಸಾಯೂಜ್ಯ ಸಿಗಲಿ…






































