ಆರ್. ಎಸ್. ಎಸ್. ಗುಂಪಿನೊಳಗೆ ಬಹಳ ಆತ್ಮೀಯರಾಗಿರುವ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿ ಕೇಳಿ ಕುರುಬಾಗಿಲಲ್ಲಿ ವಿಧಾನ ಸೌಧದ ಹೊಸ್ತಿಲು ದಾಟಿದವರು. ಜಾತಿಯ ಲೆಕ್ಕಾಚಾರಕ್ಕಾಗಿ ಪೂಜಾರಿಯವರನ್ನು ಎತ್ತಿ ತಂದು ಪರಿಷತ್ತಿನಲ್ಲಿ ಕೂರಿಸಿದ ಬಿಜೆಪಿಯು ಅವರಿಗೆ ಎತ್ತರದ ಮಣೆಯನ್ನು ಕೊಟ್ಟಿದ್ದರೆ ಅದಕ್ಕೆ ಸಂಘದ ಹಿರಿಯರ ಅಭಿಷೇಕವೂ ಇತ್ತು. ಪೂಜಾರಿಯವರನ್ನು ಜಾತಿ ಕಾರ್ಡಲ್ಲಿ ಬಳಸಿಕೊಳ್ಳುವ ಬುದ್ಧಿವಂತಿಕೆಯೂ ಅಡಗಿತ್ತು.
ಆದರೆ ಸಂಸತ್ ಸ್ಪರ್ಧೆಗೆ ಆರ್. ಎಸ್. ಎಸ್. ಒಲವು ತೋರಿಸಿರಲಿಕ್ಕಿಲ್ಲವೆನ್ನಬಹುದೇನೊ.ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗಿಗೆ ಬಿಲ್ಲವರ ಒಲವು ಸಿಗಲಿ ಎನ್ನುವ ಲೆಕ್ಕಾಚಾರದಲ್ಲಿ ಬಿ ಎಸ್ ವೈ ಆಡಿದ್ದು.
ಅರಳು ಹುರಿದಂತೆ ಮಾತನ್ನಾಡಬಲ್ಲ ಶ್ರೀನಿವಾಸ ಯಾರಿಗೂ ಒಲಿದಿರುವುದು ದಾಖಲೆಯಲ್ಲಿಲ್ಲ!ಅವರಿಂದ ನಮಗೆಂಥದೂ ಆಗೇ ಇಲ್ಲ ಎಂದವರೇ ಜಾಸ್ತಿ. ! ದ. ಕ. ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾಗಿದ್ದ ಎಮ್. ಸುದರ್ಶನ ಅವರ ಅವಧಿಯ ಕೊನೆಗಾಲದಲ್ಲಿ ಹೊಸತಾದ ಇನ್ನೊವಾ ವಾಹನವನ್ನು ಕೋಟ ಅವರೇ ಕೊಟ್ಟದ್ದು ಎಂದು ತಿಳಿದಿತ್ತು.ಅದು ಅಧ್ಯಕ್ಷರಿಗೇ ವೈಯಕ್ತಿಕ ಉಡುಗೊರೆ ಮಾಡಿದ್ದೋ ಪಕ್ಷದ ಕಚೇರಿಗೆಂದು ಕೊಟ್ಟದ್ದೊ ತಿಳಿದುಕೊಳ್ಳುವುದಕ್ಕೆ ನಾನು ಕೂಡಾ ಮುಂದಾಗಿಲ್ಲ,ಬಿಡಿ.
ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಿಂದಿನ ಬಾಗಿಲ ಶೂರ ಅನ್ನುವ ಉಪಮೆಯನ್ನು ತೆಗೆಯಿಸಿಕೊಂಡು ಗೆದ್ದು ಬಂದ ವೀರನಾಗಿ ಕಾಣಬೇಕೆಂದು ಭಾರೀ ದೊಡ್ಡ ಆಸೆಯಿತ್ತು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸ್ಪರ್ಧೆಗೆ ಇಳಿಯುವುದಕ್ಕೆ ಬಹಳ ಆಸಕ್ತರಾಗಿದ್ದರು. ಕಾರ್ಕಳದ ಕ್ಷೇತ್ರವನ್ನೂ ಕೇಳಿದ್ದರು ಎಂದರೆ ಕೇಳುಗರಿಗೆ ಅಚ್ಚರಿಯಾಗಬಹುದು.!ಗೆಲ್ಲುವ ಕುದುರೆಯಲ್ಲವೆಂದೋ,ಗೊಂದಲ ಬೇಡವೆಂದ ಅಥವಾ ಮೊದಲೇ ಕಮಿಟ್ ಮೆಂಟ್ ಮಾಡಿಕೊಂಡವರನ್ನು ಕೈ ಬಿಡುವುದು ಕಷ್ಟ ಮತ್ತು ಚೈತ್ರ ಕುಂದಾಪುರ ಮತ್ತು ಬಾಬಣ್ಣ ನಡುವಿನ ಹಣದ ವ್ಯವಹಾರಗಳು ಬಿರುಗಾಳಿಯಂತೆ ಬೀಸುತ್ತಿರುವಾಗ ಕೋಟರಿಗೆ ಸೀಟು ಕೊಟ್ಟು ಕಮಿಟಾದವ ಇನ್ನೊಬ್ಬ ಅಪಸ್ವರ ಎತ್ತಿ ಪಕ್ಷಕ್ಕೆ ಮಂಗಳಾರತಿ ಎತ್ತುವುದು ಬೇಡವೆಂದು ಪೂಜಾರ್ರನ್ನು ಸುಮ್ಮಗೆ ಕೂರಿಸಲೇಬೇಕಾಯಿತು.
ಜನರ ಮತ ಗಳಿಸಿ ಗೆದ್ದು ಬರಬೇಕೆಂಬ ಆಸೆಯ ಕುದುರೆಯನ್ನು ಕೋಟ ಶ್ರೀನಿವಾಸ ಪೂಜಾರಿಯವರು ಏರಿದ್ದಾಗಿದೆ. ಅವರನ್ನು ಒಂಟಿ ಕುದರೆ ಬೆನ್ನಲ್ಲೇ ಕೂರಿಸುತ್ತಾರೊ ಅಥವಾ ರಥದಲ್ಲಿ ಕುಳ್ಳಿರಿಸಿ ಸಾರಥಿ ಬಾಹುಕನಿಗಾಗಿ ಬೇರೆ ಯಾರಾದರೂ ಇದ್ದಾರೆಯೊ ಇನ್ನು ಗೊತ್ತಾಗಬೇಕು.! ಅಂಥ ಬಾಹುಕನಿದ್ದರೂ ಪೂಜಾರಿಯವರ ಲಗ್ನ ಕುಂಡಲಿಯಲ್ಲಿ (ಸಿ. ಟಿ. )ರವಿಯ ದೃಷ್ಠಿ ಹೇಗಿದೆಯೆನ್ನುವುದೂ ಸ್ಪುಟಕ್ಕಿಡಬೇಕಾಗಿದೆ!
ಪೂಜಾರಿಯವರಿಗೆ ಟಿಕೆಟ್ ಕೊಟ್ಟದ್ದರಲ್ಲಿಯೂ ಒಂದು ಇತ್ಯರ್ಥವಿದೆ.ಶೋಭ ಕರಂದ್ಲಾಜೆ ಮತ್ತು ಸಿ ಟಿ ರವಿ ಬಣದವರಿಗೆ ಮಾತೆತ್ತದ ಹಾಗೆ ಬ್ರೇಕ್ ಕೊಟ್ಟದ್ದೂ ಹೌದು.ಇನ್ನೊಂದು ವಿಚಾರವೆಂದರೆ ಶೋಭ ಕರಂದ್ಲಾಜೆಯನ್ನು ಸೋಲಿಸಿ ಮೂಲೆಗುಂಪು ಮಾಡುವುದಕ್ಕೆ ಪಕ್ಷ ಮತ್ತು ಸಂಘಟನೆಯವರಿಗೆೆ ಒಂಚೂರೂ ಆಸಕ್ತಿಯಿಲ್ಲ!ಉಡುಪಿಯಲ್ಲಿ ಆಯಮ್ಮ ಸೋಲುವುದು ಖಚಿತ ಲೆಕ್ಕಾಚಾರ ಮೇಲಿನವರಿಗೆ ಖಾತ್ರಿಯಾಗಿತ್ತು.
ಇನ್ನೊಂದು ಮುಖ್ಯ ವಿಚಾರವೆಂದರೆ ಬಿಲ್ಲವರಿಗೆ ಮಣೆ ಹಾಕಿ ಅವರ ಅಪಸ್ವರವನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದು.
ಶೋಭ ವಿರುದ್ಧ ಕಾರ್ಯಕರ್ತರನ್ನು ಎತ್ತಿ ಕಟ್ಚಿದ್ದಾರೆ ಎನ್ನುವ ಬಲವಾದ ಆರೋಪವು ಸಿ ಟಿ ರವಿಯವರನ್ನು ಪಕ್ಷ ಮತ್ತಷ್ಟು ದೂರವಿಡಲು ಅವಕಾಶ ಬಳಸಿಕೊಂಡಿತು. ಒಟ್ಟಿನಲ್ಲಿ ಇಬ್ಬರೂ ಕೂಡಾ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಮಟ್ಟಿಗೆ ಹಳಸಿಹೋಗಿದ್ದಾರೆ ಅನ್ನುವುದಕ್ಕೆ ಆಸೆಯ ಕುದುರೆ ಏರುವುದಕ್ಕೆ ಕಾಯುತ್ತಿದ್ದ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ಸೌಭಾಗ್ಯ ದೊರೆತಿರುವುದೇ ಸಾಕ್ಷಿ!
ಯಾವುದೇ ವಿವಾದ,ಭ್ರಷ್ಟಾಚಾರ,ಅಪಚಾರಗಳ ಆರೋಪವಿಲ್ಲದ ಸುಂದರ ದಂತ ಪಂಕ್ತಿಗಳ ಹಾಗೂ ಮೋಡಿಯಾಗುವ ಮಾತುಗಳಷ್ಚೇ ಬಂಡವಾಳ ಮಾಡಿಕೊಂಡಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಸಮರ್ಥ ಅಂತ ಜರೆಯುವುದಕ್ಕೆ ಸಾಧ್ಯವಿಲ್ಲ ಎಂಬುದಕ್ಕೆ ಅವರು ಸದನದಲ್ಲಿ ಮಾತೆತ್ತುತ್ತಿರುವುದೇ ನಿದರ್ಶನ.
ಶೋಭ ಕರಂದ್ಲಾಜೆ ಭಯ ಪಟ್ಚರೂ ಕೂಡ ತಾನು ಜಯಪ್ರಕಾಶ ಹೆಗ್ಡೆಯವರ ಪ್ರತಿಸ್ಪರ್ಧಿಯಾಗುವುದಕ್ಕೆ ಪೂಜಾರಿಯವರು ಅಪೇಕ್ಷೆ ಪಟ್ಟದ್ದನ್ನು ಒಬ್ಬ ಸಜ್ಜನ ರಾಜಕಾರಣಿಯ ಮೆಚ್ಚಬಹುದಾದ ಆತ್ಮಸ್ಥೈರ್ಯ ಎಂದು ಹೇಳಲೇಬೇಕು.
ಕೊನೆಯದಾಗಿ, ಪೂಜಾರಿ ಮತ್ತು ಹೆಗ್ಡೆ ಇಬ್ಬರೂ ಸಜ್ಜನರು,ಜನರ ಮನಗೆದ್ದವರು,ಜನರ ಒಡನಾಡಿಗಳು ಎಂಬುದರಲ್ಲಿ ಆಕ್ಷೇಪವಿಲ್ಲ.
ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ್ತೊಮ್ಮೆಅಭಿನಂದನೆಗಳು,ಶುಭಾಶಯಗಳು.
ಯೆಡಿಯೂರಪ್ಪ ಲೆಕ್ಕಾಚಾರ

ಉಡುಪಿ -ಚಿಕ್ಕಮಗಳೂರು ಸಂಸದ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ದಿಢೀರನೆ ಆಯ್ಕೆ ಮಾಡಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿಯ ಸುಪ್ರೀಮ್ ,ಬಿ. ಎಸ್. ಯೆಡಿಯೂರಪ್ಪನವರ ಬುದ್ಧಿವಂತಿಕೆ ಇದೆ.ಸಂಘ ಪರಿವಾರದವರಲ್ಲೂ ಒಪ್ಪಿಗೆ ಪಡೆದುಕೊಳ್ಳದೆ ಈ ನಿರ್ಧಾರಕ್ಕೆ ಬಂದಿರುವುದು ಅವರಿಗೂ ಅಸಮಾಧಾನವಿದೆ.ಒಂದು ಮಗ್ಗಲಲ್ಲಿ ಕೋಟ ಅವರನ್ನು ಸಂಸದ ಅಭ್ಯರ್ಥಿಯನ್ನಾಗಿಸುವುದು ಆರೆಸ್ಸೆಸ್ ಗೆ ಇಷ್ಟವೇ ಇರಲಿಲ್ಲ,ಪರಿಗಣಿಸಿದ್ದು ಕೂಡ ಇಲ್ಲ.
ಬೈಂದೂರಿನ ಮಾಜಿ ಶಾಸಕ ಸುಕುಮಾರ ಶೆಟ್ಟಿಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ದಿನದಂದೇ ಬಿ ಎಸ್ ಯೆಡಿಯೂರಪ್ಪನವರು ಶೋಭಾರನ್ನು ಉತ್ತರಮುಖಿಯಾಗಿ ನಡಯಲು ಹೇಳಿದ್ದಾರೆ.ಬೆಂಗಳೂರು ಉತ್ತರ ಕ್ಷೇತ್ರ ಕೊಡುವುದಾಗಿ ಖಾತ್ರಿ ಮಾಡಿದ್ದಾರೆ.
ಸುಕುಮಾರ ಶೆಟ್ಟಿಯವರ ಜನಪ್ರಿಯತೆ ಮತ್ತು ರಾಜಕೀಯ ಪ್ರಭಾವದಿಂದ ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಬಿ ವೈ ರಾಘವೆಂದ್ರ ಅವರಿಗೆ ಶೆಟ್ಟಿಯವರ ಕಡೆಯಿಂದ ಭಾರೀ ಮತಗಳು ಲಭಿಸಿತ್ತು. ಸುಮಾರು ಎಪ್ಪತ್ತು ಸಾವಿರ ಮತಗಳು ಲಭಿಸಿತ್ತು. ಈ ಬಾರಿ ಗೀತಾ ಶಿವರಾಜ ಕುಮಾರ್ ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಬಿಲ್ಲವರು,ಈಡಿಗರ ಮತ ಬಿಜೆಪಿಯಿಂದ ಸಾಕಷ್ಟು ಹೊರಹೋಗಬಹುದು ಎಂದು ಭಯದ ಲೆಕ್ಕಾಚಾರ ಬಿ ಎಸ್ ವೈಯವರ ಆರನೆಯ ಇಂದ್ರಿಯವನ್ನು ಎಚ್ಚರಿಸಿತು!

ಕೋಟ ಶ್ರೀನಿವಾಸ ಪೂಜಾರಿ ಗೆಲ್ಲಲೇಬೇಕು ಎನ್ನುವ ಅಪೇಕ್ಷೆ ಬಿ ಎಸ್ ವೈಗೂ ಇಲ್ಲ.ಸೋತರೂ ಅಡ್ಡಿ ಇಲ್ಲ ಪರಿಷತ್ತು ಸದಸ್ಯನ ಇರುವುದು ತಾನೆ? ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬೈಂದೂರು ಕೂಡಾ ಸೇರಿರುವುದರಿಂದ ಅಲ್ಲಿನ ಬಿಜೆಪಿ ಮತಗಳೆ ಬಿ ಎಸ್ ರಾಘವೇಂದ್ರರಿಗೆ ನಿರ್ಣಾಯಕ ಮತಗಳಾಗಲಿದೆ. ಅದನ್ನು ಉಳಿಸಿಕೊಳ್ಳುವರೆ ಬಿಲ್ಲವರ ಓಲಾಕೆಗೆ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬಳಸಿಕೊಂಡಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವಲ್ಲಿ ಸುಕುಮಾರ ಶೆಟ್ಟಿಯವರು ನಾಲ್ಕು ದಿನಗಳಷ್ಟು ಅವಸರ ಮಾಡಿದ್ದು ಬಿಜೆಪಿಯವರು ಉಡುಪಿ ಅಭ್ಯರ್ಥಿಯಾಗಿದ್ದ ಕರಂದ್ಲಾಜೆಯವರನ್ನು ಬದಲಾಯಿಸುವುದಕ್ಕೆ ಅನುಕೂಲವಾಯಿತು.ಶೋಭಾ ಕರಂದ್ಲಾಜೆಗೂ ಸಂತಸ ತಂದಿತು.
-ವಿ. ಕೆ. ವಾಲ್ಪಾಡಿ





































