ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು
ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಹಾಗೂ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಜರಗಿತು.
ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್ ಸಮಾರಂಭವನ್ನು ಉದ್ಘಾಟಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ತಂಬಾಕು ಚಟಗಳಿಗೆ ದಾಸರಾಗದೇ ಅತ್ಯುತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಕಳ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಮಾತನಾಡಿ, ತಂಬಾಕು ಸಂಬಂಧಿ ಉತ್ಪನ್ನಗಳ ಸೇವನೆಯಿಂದಲೇ ಸಾವು ನೋವುಗಳು ಹೆಚ್ಚಾಗುತ್ತಿದ್ದು ತಂಬಾಕನ್ನು ನಿಷೇಧಿಸಬೇಕಿದೆ. ತಂಬಾಕನ್ನು ನಿಷೇಧಿಸಿ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ತಂಬಾಕು ನಿಷೇಧ ದಿನಾಚರಣೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪ್ರೇಮ ಕೆ. ಆಚಾರ್ಯ ಮಾತನಾಡಿ, ತಂಬಾಕು ಸೇವನೆಯ ವಿವಿಧ ಹಂತಗಳು, ತಂಬಾಕಿನಿಂದ ಆಗುವ ದುಷ್ಪರಿಣಾಮಗಳು ಮತ್ತು ತಂಬಾಕು ನಿಷೇಧ ಮಾಡಲು ಇರುವ ಹಲವು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಅಧ್ಯಕ್ಷ ಆನಂದ ರಾಯ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನ್ಯಾಯವಾದಿ ವಿಜಯರಾಜ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ದಿವಾಕರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಲಲಿತಾ ನಿರೂಪಿಸಿದರು.

































