ಆಟೋದಲ್ಲೇ ಕಾಶ್ಮೀರ ಸುತ್ತಿಬಂದ ಮಂಗಳೂರಿನ ನಾಲ್ವರು ಯುವಕರು!
RB NEWS
Bureau Report
ಆಟೋದಲ್ಲೇ ಕಾಶ್ಮೀರ ಸುತ್ತಿಬಂದ ಮಂಗಳೂರಿನ ನಾಲ್ವರು ಯುವಕರು!
15 ಸಾವಿರ ಅಡಿ ಎತ್ತರದ ಹಿಮಾಚ್ಛಾದಿತ ಪರ್ವತ ಪ್ರದೇಶದಲ್ಲಿ ಆಟೋ ಓಡಿಸಿ ಕನಸು ನನಸಾಗಿಸಿದ ದೇರಳಕಟ್ಟೆಯ ಸ್ನೇಹಿತರು
ಗೇರ್ ಜಾಮ್, ಕೊರೆಯುವ ಚಳಿ, ವಸತಿ ಸಮಸ್ಯೆ ಸೇರಿ ಹಲವು ಸವಾಲುಗಳನ್ನು ಎದುರಿಸಿ ಸಾಹಸಯಾತ್ರೆ ಪೂರ್ಣ
ಮಂಗಳೂರು: ಜೀವನೋಪಾಯಕ್ಕೆ ಆಸರೆಯಾಗಿರುವ ಆಟೋರಿಕ್ಷಾದಲ್ಲೇ ಸಾವಿರಾರು ಕಿಲೋಮೀಟರ್ ದೂರದ ಕಾಶ್ಮೀರದವರೆಗೆ ಪ್ರಯಾಣಿಸುವ ಮೂಲಕ ಮಂಗಳೂರಿನ ನಾಲ್ವರು ಸ್ನೇಹಿತರು ತಮ್ಮ ಬಹುದಿನಗಳ ಕನಸನ್ನು ನನಸಾಗಿಸಿದ್ದಾರೆ. ಊರಿನ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸುತ್ತಿದ್ದ ಆಟೋವನ್ನು ಹಿಮಾಚ್ಛಾದಿತ ಪರ್ವತಗಳ ನಡುವಿನ ಕೊರೆಯುವ ಚಳಿಯಲ್ಲೂ ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಓಡಿಸಿ ಸಾಹಸ ಮೆರೆದಿದ್ದಾರೆ. ದುರ್ಗಮ ಹಾದಿಗಳಲ್ಲಿ ಆಟೋ ಚಲಾಯಿಸಿ ಗುರಿ ಮುಟ್ಟಿ ಮರಳಿರುವ ಈ ಯುವಕರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಾಹಸಕ್ಕೆ ಕೈಹಾಕಿರುವವರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಲ್ವರು ಯುವಕರಾದ ಸಾದಿಕ್, ಅರೀಮ್, ಹಸನ್ ಮತ್ತು ಹಫೀಝ್. ಸುಮಾರು ಆರೇಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅಕ್ಟೋಬರ್ 10ರಂದು ಚಾಲನೆ ನೀಡಿದ್ದರು. ಐಷಾರಾಮಿ ವಾಹನದ ಬದಲಿಗೆ ಸಾಮಾನ್ಯ ಆಟೋರಿಕ್ಷಾವನ್ನೇ ಆಯ್ಕೆ ಮಾಡಿಕೊಂಡ ಈ ನಾಲ್ವರು ಸ್ನೇಹಿತರು ತಮ್ಮ ಕನಸಿಗೆ ಅದನ್ನೇ ಸಾರಥಿಯನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ನಾಲ್ವರೂ ಆಟೋರಿಕ್ಷಾ ಚಾಲನೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಸಾದಿಕ್ ವೈಫೈ ತಂತ್ರಜ್ಞರಾಗಿ, ಅರೀಮ್ ಮತ್ತು ಹಸನ್ ವೆಲ್ಡಿಂಗ್ ಕ್ಷೇತ್ರದಲ್ಲಿ ಹಾಗೂ ಹಫೀಝ್ ಕ್ರಾಫ್ಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಆಟೋರಿಕ್ಷಾದಲ್ಲೇ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಯಾಣಿಸಿದ್ದರು. ಕಾಶ್ಮೀರದವರೆಗೂ ಇದೇ ರೀತಿಯಲ್ಲಿ ತೆರಳಬೇಕೆಂಬ ಆಸೆ ಹಲವು ಬಾರಿ ಮೂಡಿದ್ದರೂ ವಿವಿಧ ಕಾರಣಗಳಿಂದ ಯೋಜನೆ ಮುಂದೂಡಿಕೆಯಾಗುತ್ತಿತ್ತು. ಸಾದಿಕ್ ಅವರ 2017ರ ಮಾದರಿಯ ಆಟೋರಿಕ್ಷಾವನ್ನು ಈ ಪ್ರಯಾಣಕ್ಕೆ ಸಿದ್ಧಪಡಿಸಲಾಗಿತ್ತು. ವಾಹನದ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ದೀರ್ಘ ಪ್ರಯಾಣಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕ ಯಾತ್ರೆ ಆರಂಭಿಸಿದ್ದರು. ಪ್ರವಾಸಕ್ಕಾಗಿ ಸುಮಾರು 1.5 ಲಕ್ಷ ರೂ. ಅಂದಾಜು ವೆಚ್ಚ ಮಾಡಿಕೊಂಡಿದ್ದ ಸ್ನೇಹಿತರು, ಬಹುದಿನಗಳ ಕನಸನ್ನು ನನಸಾಗಿಸಿ ಇದೀಗ ಮಂಗಳೂರಿಗೆ ಮರಳಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ದೆಹಲಿ ಮಾರ್ಗವಾಗಿ ಕಾಶ್ಮೀರ ತಲುಪಿದ ಯುವಕರು, ಅಲ್ಲಿ ನಾಲ್ಕು ದಿನಗಳ ಕಾಲ ತಂಗಿದ್ದರು. ಬಳಿಕ ಲಡಾಖ್ನಲ್ಲಿ ಎರಡು ದಿನಗಳನ್ನು ಕಳೆದ ಅವರು ಅಲ್ಲಿಂದ ಮನಾಲಿಯತ್ತ ಪ್ರಯಾಣ ಬೆಳೆಸಿದರು. ನಂತರ ರಾಜಸ್ಥಾನ ಮಾರ್ಗವಾಗಿ ಊರಿಗೆ ಮರಳಿದ್ದಾರೆ. 15 ಸಾವಿರ ಅಡಿ ಎತ್ತರದಲ್ಲಿ ಗೇರ್ ಜಾಮ್ ಸವಾಲು! ಪ್ರವಾಸದ ವೇಳೆ ಯುವಕರಿಗೆ ಎದುರಾದ ಅತ್ಯಂತ ದೊಡ್ಡ ಸವಾಲು ಆಟೋರಿಕ್ಷಾದ ಗೇರ್ ಜಾಮ್ ಸಮಸ್ಯೆ. ಲಡಾಖ್ ಪ್ರದೇಶದ ಎತ್ತರದ ಪರ್ವತ ಮಾರ್ಗಗಳಲ್ಲಿ ಸಂಚರಿಸುವಾಗ ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ವಾಹನದ ಗೇರ್ ಜಾಮ್ ಆಗಿತ್ತು. ಇದರಿಂದ ಮುಂದಿನ ಪ್ರಯಾಣಕ್ಕೆ ತೀವ್ರ ತೊಂದರೆಯಾಯಿತು. ಒಂದು ದಿನದ ಪ್ರಯಾಣವೇ ವ್ಯರ್ಥವಾಯಿತು. ಕೆಲವು ಪ್ರದೇಶಗಳಲ್ಲಿ ವಾಹನ ದುರಸ್ತಿಗೆ ಮೆಕ್ಯಾನಿಕ್ಗಳು ಲಭ್ಯವಾಗದಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು. ತುರ್ತು ಪರಿಸ್ಥಿತಿಯನ್ನು ಎದುರಿಸಲು ಸುಮಾರು 20 ಲೀಟರ್ ಪೆಟ್ರೋಲ್ನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೂ ಎತ್ತರದ ಪ್ರದೇಶಗಳಲ್ಲಿ ವಾಹನದ ತಾಂತ್ರಿಕ ಸಮಸ್ಯೆ ಎದುರಾದಾಗ ಸ್ಥಳೀಯವಾಗಿ ಅಗತ್ಯ ಸೌಲಭ್ಯಗಳು ಸಿಗದೆ ಪರದಾಡಬೇಕಾಯಿತು ಎಂದು ಯುವಕರು ತಿಳಿಸಿದ್ದಾರೆ. ಏಳು ಗಂಟೆಗಳ ಪ್ರಯಾಣದ ಬಳಿಕವೂ ವಸತಿ ಸಮಸ್ಯೆ! ಕಾಶ್ಮೀರದತ್ತ ಪ್ರಯಾಣಿಸುವಾಗ ಜಮ್ಮು ಪ್ರದೇಶದಲ್ಲಿ ರಾತ್ರಿ ತಂಗಲು ಕೊಠಡಿ ಸಿಗದೆ ಸ್ನೇಹಿತರು ಪರದಾಡುವಂತಾಗಿತ್ತು. ಸುಮಾರು ಏಳು ಗಂಟೆಗಳ ಕಾಲ ನಿರಂತರ ಪ್ರಯಾಣಿಸಿ ತೀವ್ರ ಆಯಾಸಗೊಂಡಿದ್ದರೂ, ಮುಂದಿನ ಸುಮಾರು 200 ಕಿ.ಮೀ. ಪ್ರಯಾಣದ ಬಳಿಕವಷ್ಟೇ ಕೊಠಡಿ ಸಿಗುವ ಪರಿಸ್ಥಿತಿ ಎದುರಾಗಿತ್ತು. ಅನಿವಾರ್ಯವಾಗಿ ಕೆಲವು ದಿನ ಪೆಟ್ರೋಲ್ ಬಂಕ್ಗಳಲ್ಲೇ ರಾತ್ರಿ ಕಳೆಯಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರಯಾಣದ ಆರಂಭದ ದಿನಗಳಲ್ಲಿ ರಾತ್ರಿ 10 ಅಥವಾ 11 ಗಂಟೆಯವರೆಗೂ ಸಂಚರಿಸಿ ಬಳಿಕ ಹೋಟೆಲ್ಗಳಲ್ಲಿ ತಂಗುತ್ತಿದ್ದರು. ಆದರೆ ಕಾಶ್ಮೀರ ಭಾಗದಲ್ಲಿ ವಿಪರೀತ ಚಳಿ ಹಾಗೂ ಹವಾಮಾನ ವೈಪರೀತ್ಯದ ಕಾರಣ ಸಂಜೆ 7 ಗಂಟೆಯೊಳಗೇ ಪ್ರಯಾಣ ನಿಲ್ಲಿಸಿ ಹೋಟೆಲ್ಗಳಲ್ಲಿ ತಂಗಬೇಕಾಯಿತು. ಎಕ್ಸ್ಪ್ರೆಸ್ವೇ ಬಿಟ್ಟು ಸರ್ವಿಸ್ ರಸ್ತೆಗಳಲ್ಲಿ ಸಂಚಾರ! ಆಟೋರಿಕ್ಷಾ ಆಗಿರುವುದರಿಂದ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವ ಬದಲು ಸರ್ವಿಸ್ ರಸ್ತೆಗಳನ್ನು ಬಳಸಿಕೊಂಡು ಪ್ರಯಾಣ ಮುಂದುವರಿಸಿದ್ದರು. ಇದರಿಂದ ಪ್ರಯಾಣದ ಅವಧಿ ಹೆಚ್ಚಾದರೂ ವಾಹನಕ್ಕೆ ಅನುಕೂಲವಾಗುವ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದರು. ದುರ್ಗಮ ಪರ್ವತ ಮಾರ್ಗಗಳು, ಕೊರೆಯುವ ಚಳಿ, ವಾಹನದ ತಾಂತ್ರಿಕ ತೊಂದರೆ, ವಸತಿ ಸಮಸ್ಯೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರೂ ನಾಲ್ವರು ಸ್ನೇಹಿತರು ಧೈರ್ಯ ಕಳೆದುಕೊಳ್ಳದೆ ತಮ್ಮ ಗುರಿ ಸಾಧಿಸಿದ್ದಾರೆ. ಯುವಕರು ಧೈರ್ಯದಿಂದ ಹೊಸ ಅನುಭವಗಳನ್ನು ಪಡೆಯಲು ಮುಂದಾಗಬೇಕು. ಆದರೆ ಧೈರ್ಯದ ಜೊತೆಗೆ ಸೂಕ್ತ ಸಿದ್ಧತೆ, ವಾಹನದ ಸ್ಥಿತಿಯ ಪರಿಶೀಲನೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಎದುರಾಗುವ ಪ್ರತಿಯೊಂದು ಸವಾಲೂ ಹೊಸ ಅನುಭವ ನೀಡುತ್ತದೆ ಎಂಬುದನ್ನು ತಮ್ಮ ಸಾಹಸಯಾತ್ರೆಯ ಮೂಲಕ ಈ ನಾಲ್ವರು ಯುವಕರು ಸಾಬೀತುಪಡಿಸಿದ್ದಾರೆ.