[t4b-ticker]

ಅಜ್ಜಿಯ ಚಿನ್ನದ ಬಳೆ ಕಸಿದುಕೊಂಡ ಮೊಮ್ಮಗನ ಬಂಧನ: ರೂ.5 ಲಕ್ಷ ಮೌಲ್ಯದ ಚಿನ್ನ ವಶ

Picture of RB NEWS

RB NEWS

Bureau Report


ಬಂಟ್ವಾಳ: ಮನೆಯಲ್ಲಿ ಒಂಟಿಯಾಗಿದ್ದ 82 ವರ್ಷದ ವೃದ್ಧೆಯ ಎರಡು ಚಿನ್ನದ ಬಳೆಗಳನ್ನು ಅಪರಿಚಿತ ವ್ಯಕ್ತಿಯ ಸೋಗಿನಲ್ಲಿ ಬಂದು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮೊಮ್ಮಗನನ್ನೇ ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ತಾಲೂಕಿನ ತೆಂಕಕಜೆಕಾರು ನಿವಾಸಿ, ವೃದ್ಧೆ ಅವ್ವಮ್ಮ ಅವರ ಮೊಮ್ಮಗ ಶಬೀರ್ (33) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು ರೂ.5 ಲಕ್ಷ ಮೌಲ್ಯದ, 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆ.14ರಂದು ಘಟನೆ:1
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಉದ್ದದ ಗುಡ್ಡೆ ಎಂಬಲ್ಲಿ ಆ.14ರಂದು ಅವ್ವಮ್ಮ (82) ಅವರು ಮನೆಯಲ್ಲಿ ಒಂಟಿಯಾಗಿದ್ದರು. ಈ ಸಂದರ್ಭ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ, ವೃದ್ಧೆಯ ಎರಡೂ ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ.
ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದ ಪರಿಣಾಮ ವೃದ್ಧೆಯ ಕೈಗೆ ರಕ್ತಗಾಯವಾಗಿತ್ತು. ಘಟನೆ ಕುರಿತು ಸಾದಿಕ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 70/2026, ಕಲಂ 309(6) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯ ಪತ್ತೆಗೆ ಮುಂದಾಗಿದ್ದರು. ತನಿಖೆಯ ವೇಳೆ ವೃದ್ಧೆಯ ಮೊಮ್ಮಗ ಶಬೀರ್‌ನ ಪಾತ್ರ ಬೆಳಕಿಗೆ ಬಂದಿದ್ದು, ಆತನನ್ನು ಆ.16ರಂದು ಬಂಧಿಸಲಾಗಿದೆ. ವಿಚಾರಣೆ ನಡೆಸಿದ ವೇಳೆ ಆತನಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿ, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡದ ಕಾರ್ಯಾಚರಣೆ
ಈ ಪ್ರಕರಣದ ಪತ್ತೆಕಾರ್ಯವು ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ನಡೆದಿದ್ದು, ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣೆ ಪಿಎಸ್ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿಗಳಾದ ಎಎಸ್ಐ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್ ಮತ್ತು ಸತೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ಕೂಡ ತನಿಖೆಗೆ ತಾಂತ್ರಿಕ ಸಹಕಾರ ನೀಡಿದ್ದಾರೆ.

  1. ↩︎

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top