ಅಕ್ರಮ ಗೋಸಾಗಾಟ ಪತ್ತೆ – ಇಬ್ಬರ ಬಂಧನ
ಮೂಡುಬಿದಿರೆ, ಮೇ 15: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿರುವ ಘಟನೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಸಮೀಪ ನಡೆದಿದೆ.
ಬಂಧಿತ ಆರೋಪಿಗಳನ್ನು ಹಂಡೇಲಿನ ಮಹಮ್ಮದ್ ಆರೀಪ್ ಹಾಗೂ ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಪಿಎಸ್‌ಐ ಕೃಷ್ಣಪ್ಪ ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ದೊರಕಿತ್ತು. ಅದರಂತೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು.
ಈ ವೇಳೆ ಕೆಎ 19 ಎಂಕೆ 4265 ಸಂಖ್ಯೆಯ ಕಾರು ಬಂದಿದ್ದು, ಪೊಲೀಸರು ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಬೆನ್ನಟ್ಟಿ, ಗುಂಡುಕಲ್ಲು 5 ಸೈಂಟ್ಸ್ ರಸ್ತೆಯ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ವಾಹನ ನುಗ್ಗಿಸಿದ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದರು.
ಕಾರಿನ ತಪಾಸಣೆ ವೇಳೆ ಹಿಂಬದಿ ಸೀಟುಗಳನ್ನು ತೆಗೆದು, ನೀಲಿ ಪ್ಲಾಸ್ಟಿಕ್ ಹಾಸಿ, ಗಂಡು ಕರುವೊಂದನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.
ವಿಚಾರಣೆ ವೇಳೆ ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧೆಡೆಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡಿ, ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಎಂಬುವರ ಮನೆಯ ಬಳಿ ಸಂಗ್ರಹಿಸಿ ವಧೆ ಮಾಡಿ ಮಾಂಸ ಮಾರಾಟ ಮಾಡಲು ಅಥವಾ ಇತರರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕರು ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮಹಮ್ಮದ್ ಆರೀಪ್ ವಿರುದ್ಧ ಬಜಪೆ, ಬಣಕಲ್ ಹಾಗೂ ಮೂಡುಬಿದಿರೆ ಠಾಣೆಗಳಲ್ಲಿ ಜಾನುವಾರು ಹತ್ಯೆ ತಡೆ ಕಾಯ್ದೆ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ ಹಾಗೂ ಕಾರ್ಕಳ ನಗರ ಠಾಣೆಗಳಲ್ಲಿ ಎನ್‌ಡಿಪಿಎಸ್, ಕೆಪಿ ಆಕ್ಟ್ ಹಾಗೂ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.