ಸಂಭ್ರಮದ ಈದುಲ್ ಫಿತ್ರ್ -ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ

Picture of RB NEWS

RB NEWS

Bureau Report


ಜಾಗತಿಕ ಮುಸ್ಲಿಮರು ವರ್ಷದಲ್ಲಿ ಎರಡು ಹಬ್ಬಗಳನ್ನು ಆಚರಿಸುತ್ತಾರೆ. ಒಂದು ರಮಝಾನ್ ತಿಂಗಳ ಮೂವತ್ತು ದಿನಗಳ ಉಪವಾಸದ ಬಳಿಕ ಆಚರಿಸುವ ಈದುಲ್ ಫಿತ್ರ್. ಇನ್ನೊಂದು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಈದುಲ್ ಅಝ್ಹಾ. ಈದ್ ಎಂದರೆ ಅರಬಿ ಭಾಷೆಯಲ್ಲಿ ಹಬ್ಬ ಎಂದು ಅರ್ಥ. ಫಿತ್ರ್ ಎಂದರೆ ಮುಕ್ತಾಯ, ‘ದಾನಗಳ ಮುಕ್ತಾಯದ ಹಬ್ಬ’ ಎಂದಾಗಿದೆ.
ರಮಝಾನ್ ತಿಂಗಳಲ್ಲಿ ಮುಂಜಾನೆ ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು ಆಹಾರ ಸೇವಿಸಿದರೆ ಮತ್ತೆ ಸೂರ್ಯ ಮುಳುಗುವ ಹೊತ್ತಲ್ಲಿ ಉಪವಾಸ ತ್ಯಜಿಸುವುದು. ಮುಂಜಾವು ಹೊತ್ತಿನ ಈ ಆಹಾರಕ್ಕೆ ‘ಸಹರಿ’ ಅಥವಾ ‘ಅತ್ತಾಳ’ ಎಂದು ಹೆಸರು.


ಸಾಮಾನ್ಯವಾಗಿ ‘ರಮಝಾನ್ ಹಬ್ಬ’ ಎಂದು ಕರೆಯಲ್ಪಡುವ ಈ ಹಬ್ಬವು ಬರುವುದು ಶವ್ವಾಲ್ ತಿಂಗಳ ಒಂದರಂದು. ರಮಝಾನ್ ತಿಂಗಳ ಉಪವಾಸ ಕಳೆದ ಕೂಡಲೇ ಬರುವ ಹಬ್ಬವಾದ್ದರಿಂದ ಆ ಹೆಸರಿನಿಂದಲೇ ಗುರುತಿಸಲ್ಪಡುತ್ತದೆ. ರಮಝಾನ್ ಎಂದರೆ ‘ಸುಟ್ಟು ಬಿಡುವುದು’ ಎಂದು ಅರ್ಥವಿದೆ. ಅಂದರೆ ಕೆಟ್ಟದ್ದನ್ನು ಸುಟ್ಟು ಬಿಡುವುದು ಎಂದಾಗಿದೆ.
ರಮಝಾನ್ ತಿಂಗಳ ಮೂವತ್ತು ದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಹತ್ತು ದಿನಗಳು ಅನುಗ್ರಹದ ಭಾಗವಾಗಿ, ಎರಡನೇ ಹಂತ ದೋಷಗಳ ವಿಮೋಚನೆಯ ಭಾಗವಾಗಿ, ಮೂರನೇ ಹತ್ತು ದಿನಗಳ ಭಾಗವು ನರಕದಿಂದ ವಿಮೋಚನೆ ಹೊಂದಿ ಸ್ವರ್ಗ ಪ್ರವೇಶಿಸಲು ಪ್ರಾರ್ಥನೆಯ ಭಾಗವಾಗಿರುತ್ತದೆ.


ರಮಝಾನ್ ಕೊನೆಯ ಹತ್ತು ದಿನಗಳ ಭಾಗದಲ್ಲಿ ಬರುವ ‘ಲೈಲತುಲ್ ಖದರ್’ ಎಂಬ ಆ ಒಂದು ದಿನವು ಸಾವಿರ ತಿಂಗಳುಗಳಿಗಿಂತಲೂ ಅಧಿಕ ಪುಣ್ಯದಾಯಕ ದಿನಕ್ಕೆ ಸಮವಾಗಿದೆ. ಆದರೆ ಆ ಪ್ರತ್ಯೇಕ ದಿನ ಯಾವತ್ತೆಂಬುದಾಗಿ ನಿಖರವಾಗಿ ತಿಳಿಸದೆ ಕೇವಲ ಕೊನೆಯ ಹತ್ತರ ಭಾಗದಲ್ಲಿ ಎಂದು ಮಾತ್ರವೇ ಉಲ್ಲೇಖಿಸಿದೆ. ಅಂದರೆ ಎಲ್ಲಾ ದಿನಗಳಿಗೂ ಪ್ರಾಮುಖ್ಯತೆ ನೀಡಿ ಆರಾಧನೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಆ ದಿನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ.
ರಮಝಾನ್ ನ ಉಪವಾಸ ದಿನಗಳಲ್ಲಿ ಆರಾಧನೆಗೆ ಅತೀ ಪ್ರಾಮುಖ್ಯತೆ ನೀಡಲಾಗಿದ್ದು, ಅ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಆರಾಧನೆಯ ಜೊತೆಗೆ ದಾನಧರ್ಮಗಳೂ ಅಧಿಕವಾಗಿರುತ್ತದೆ.


ಮುಸ್ಲಿಮರು ತಮ್ಮ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿ ಅದರ ಶೇ. 2.5 ಭಾಗವನ್ನು ಬಡವರಿಗೆ ಕಡ್ಡಾಯವಾಗಿ ದಾನ ಮಾಡಬೇಕೆಂಬುದು ಇಸ್ಲಾಂನ ಪಂಚ ಆಧಾರ ಸ್ತಂಭಗಳಲೊಂದಾಗಿದೆ. ಇದಕ್ಕೆ ‘ಝಕಾತ್’ ಎಂದು ಹೆಸರು. ಬಹುತೇಕ ಮುಸ್ಲಿಮರು ಈ ಝಕಾತ್ ನೀಡಲು ದುಪ್ಪಟ್ಟು ಪುಣ್ಯ ಲಭಿಸುವ ರಮಝಾನ್ ಮಾಸವನ್ನೇ ಆಯ್ಕೆ ಮಾಡುತ್ತಾರೆ. ತಮ್ಮ ಆದಾಯದ ಝಕಾತ್ ಪಾಲನ್ನು ಉಳ್ಳವರು ಅರ್ಹ ಬಡವರನ್ನು ಹುಡುಕಿಕೊಂಡು ನೀಡುತ್ತಾರೆ. ಇದರಿಂದ ಆರ್ಥಿಕ ಸಮತೋಲನ ಉಂಟಾಗುತ್ತದೆ.


ಹೀಗೆ ರಮಝಾನ್ ತಿಂಗಳ ಮೂವತ್ತು ದಿನಗಳನ್ನು ದಾನ, ಧರ್ಮ, ಆರಾಧನೆಗಳಿಂದ ಪಾವನಗೊಳಿಸಿದ ಮುಸ್ಲಿಮನಿಗೆ ದೇವನು ನೀಡುವ ಉಡುಗೊರೆಯೇ ಈ ಈದುಲ್ ಫಿತ್ರ್. ಅರ್ಥಾತ್ ರಮಝಾನ್ ಹಬ್ಬ.
ಆ ದಿನ ಸೂರ್ಯೋದಯವಾಗುವಾಗಲೇ ಮಸೀದಿ ಗೋಪುರಗಳಿಂದ ‘ಅಲ್ಲಾಹು ಅಕ್ಬರ್’ ಎಂಬ ತಕ್ಬೀರ್ ಘೋಷಣೆ ಮೊಳಗುತ್ತಿರುತ್ತವೆ. ಪುರುಷರು ಸಾಮೂಹಿಕ ಪ್ರಾರ್ಥನೆಗಾಗಿ ಮಸೀದಿ ಅಥವಾ ಈದ್ಗಾ ಮೈದಾನದಲ್ಲಿ ಸೇರುತ್ತಾರೆ. ಹಿಂದಿನ ದಿನವೇ ಹೆಂಗೆಳಯರು ಮದರಂಗಿ ಇಡುವುದರಲ್ಲಿ ಮತ್ತು ತುಪ್ಪದನ್ನ, ಸಿಹಿ ತಿಂಡಿ ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ.
ಹಬ್ಬದ ದಿನ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ(ಈದ್ ನಮಾಝ್) ಗೆ ಮಸೀದಿಗೆ ಹೋಗುವ ಮೊದಲು ಮನೆಯ ಯಜಮಾನ ಪ್ರತಿಯೊಬ್ಬ ಸದಸ್ಯನ ಹೆಸರಿನಲ್ಲಿ 2 ಕಿಲೋ 700 ಗ್ರಾಂ ಅಕ್ಕಿಯನ್ನು ಬಡವರ ಮನೆಗೆ ತಲುಪಿಸುತ್ತಾನೆ. ಈ ಅಕ್ಕಿ ದಾನಕ್ಕೆ ಫಿತ್ರ್ ಝಕಾತ್ ಎಂದು ಹೆಸರು. ಈ ದಾನದಿಂದ ಉಪವಾಸ ಆಚರಣೆಯಲ್ಲಿ ಬಂದಿರಬಹುದಾದ ಕುಂದುಕೊರತೆಗಳು ನಿವಾರಣೆಯಾಗುತ್ತವೆ.


ಅದೆಲ್ಲ ಮುಗಿಸಿ ಮಸೀದಿಗೆ ಹೋದಾಗ ಅಲ್ಲಿ ಖತೀಬ್ ನೇತೃತ್ವದಲ್ಲಿ ಈದ್ ಸಂದೇಶ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಏನಾದರೂ ಮನಸ್ತಾಪ ಇದ್ದವರು ಅಂದು ಪರಸ್ಪರ ಹಸ್ತಲಾಘವ ನೀಡಿ ಹಳೆಯದನ್ನೆಲ್ಲಾ ಮರೆತು ಒಂದಾಗುತ್ತಾರೆ. ಆ ಬಳಿಕ ಎಲ್ಲರೂ ನೆರೆಕರೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಾರೆ.
ಕೆಲವರು ಅಂದು ಮಕ್ಕಳಿಗೆ ಉಡುಗೊರೆಯಾಗಿ ಹಣ ನೀಡುತ್ತಾರೆ. ಅದನ್ನು ಸಂಗ್ರಹಿಸುವ ಮಕ್ಕಳು ಯಾರಿಗೆ ಹೆಚ್ಚು ಹಣ ಸಿಕ್ಕಿದೆ ಎಂದು ಎಣಿಸುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.


ಮೂವತ್ತು ದಿನಗಳು ಅರಿಷಡ್ವರ್ಗಗಳನ್ನು ಮನಸ್ಸಿನಿಂದ ದೂರ ಮಾಡಿ ಕೆಟ್ಟದ್ದನ್ನು ಆಡದೆ, ನೋಡದೆ, ಮಾಡದೆ ಮನಸ್ಸು ಹಾಗೂ ಹೃದಯವನ್ನು ಶುದ್ಧಿ ಮಾಡಿಕೊಂಡು, ಆ ಸತ್ಸ್ವಭಾವವನ್ನು ಜೀವನ ಪರ್ಯಂತ ಅಳವಡಿಸಿಕೊಂಡರೆ ಈ ಬದುಕಿನ ತರಬೇತಿಯ ದಿನಕ್ಕೆ ನಿಜವಾದ ಅರ್ಥ ಬರುತ್ತದೆ.


ಕೆಟ್ಟ ಸ್ವಭಾವವನ್ನು ದೂರ ಮಾಡಿ ನೆರೆಕರೆ ಹಾಗೂ ಸಂಬಂಧಿಕರರೊಂದಿಗೆ ಕಲೆತು ಹಬ್ಬವನ್ನು ಆಚರಿಸುವುದರಿಂದ ಗೆಳೆನತ ಮತ್ತು ಕುಟುಂಬ ಸಂಬಂಧ ಗಟ್ಟಿಯಾಗುತ್ತದೆ. ಹೀಗೆ ಪರಸ್ಪರ ಸ್ನೇಹ, ಉಲ್ಲಾಸ, ಸಡಗರದಿಂದ ಅಚರಿಸುವ ಈದುಲ್ ಫಿತ್ರ್ ಲೋಕದ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಹಬಾಳ್ವೆಯ ಅನುಭೂತಿಯನ್ನು ನೀಡಲಿ. ಇದೇ ಈ ಹಬ್ಬದ ಸಂದೇಶವಾಗಿದೆ.

✍️ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ

ಅನಿಲಕಟ್ಟೆ ವಾಚ್ ವರ್ಕ್ಸ್
ವಿಟ್ಲ, ದ.ಕ

9448625980

aboobakkeranilakatte2@gmail.com

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top