ಮಿತಿ ಮೀರಿದ ಕ್ವಾಟರ್ ನಶೆ: ಅಂಜಲ್ ಮೀನಿನ ಆಸೆ
ಹೂವಾಡಿಗನಿಗೆ ಶುಕ್ರದೆಸೆ
ಕಾರ್ಕಳ: ಅಂಜಲ್ ಮೀನಿಗೂ-ಹೂವಿನ ವ್ಯಾಪಾರಿಗೂ ಎತ್ತಣ ಸಂಬಂಧ..
-ಇಂತಹದೊಂದು ಮಾತು ಪ್ರಚಲಿತವಾಗಿ ಕೇಳಿಬರುತ್ತಿರುವುದು ಕಾರ್ಕಳದಲ್ಲಿ…..
ಹೌದು ಆತ ನಗರದ ನಿವಾಸಿ… ಕುಲೀನ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಧಾರ್ಮಿಕ ಮನೋಭಾವದ ನಡುವೆ ಆತ ಅದ್ಯಾವುದೋ ಕಾರಣದಿಂದಾಗಿ ಕುಡಿತದ ಚಟಕ್ಕೆ ಬಲಿಬಿದ್ದ. ಕ್ವಾಟರ್ ನ ಆಸೆಗಾಗಿ ಅದ್ಯಾವುದೋ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದನೇನೋ? ಆ ದಿನ ಆತನ ಬಾಳಿಗೆ ಕಪ್ಪುಚುಕ್ಕಿಯಾಗಿತ್ತು. ಕಾರ್ಕಳದ ಮೀನುಮಾರುಕಟ್ಟೆಯಲ್ಲಿ ಮಾಡಬಾರದಾದ ಕೃತ್ಯದಲ್ಲಿ ತೊಡಗಿಸಿಕೊಂಡ. ಪರಿಣಾಮವಾಗಿ ಪೊಲೀಸ್ ಠಾಣೆ ಮೆಟ್ಟಲೇರಬೇಕಾದ ದುರ್ಯೋಗ ಆತನದಾಗಿತ್ತು.
ಜೂನ್ 9ರಂದು ಘಟನೆ….
ಜೂನ್ 9ರಂದು ಕಾರ್ಕಳ ಮೀನುಮಾರುಕಟ್ಟೆಯಲ್ಲಿ ಘಟನೆಯೊಂದು ನಡೆದು ಹೋಗಿತ್ತು.
ಮೀನು ಮಾರಾಟದ ಮಹಿಳೆಯೊಬ್ಬರು ಬೆಲೆಬಾಳುವ ಅಂಜಲು ಮೀನುಗಳನ್ನು ಮಾರಾಟಕ್ಕಾಗಿ ತಂದಿದ್ದು ಅವುಗಳನ್ನು ಶೀತಲೀಕರಣದಲ್ಲಿ ಇರಿಸಿ ಸಂಜೆ ವೇಳೆಗೆ ಮನೆಗೆ ಹೋಗಿದ್ದರು.
ಮುಂಜಾನೆ ಮೀನುಮಾರುಕಟ್ಟೆಗೆ ಬಂದಾಗ ಆಘಾತವಾಗಿತ್ತು. ಅಂಜಲ್ ಮೀನು ಮಾಯವಾಗಿತ್ತು. ಬರೋಬರೀ ಅದರ ಒಟ್ಟು ಮೌಲ್ಯ ರೂ. 6,500 ಆಗಿತ್ತು.
ಗಲಿಬಿಲಿಗೊಂಡಿದ್ದ ಮೀನುಮಾರಾಟ ಮಹಿಳೆಯು ಸಹೋದ್ಯೋಗಿಗಳ ಗಮನಕ್ಕೂ ತಂದಿದ್ದರು.
ಆದರೆ ಅದ್ಯಾಗೋ ಕಳವು ಪ್ರಕರಣ ಬಯಲುಗೊಂಡಿತ್ತು. ಕಾರ್ಕಳ ಮೀನು ಮಾರುಕಟ್ಟೆ ಪರಿಸರದಲ್ಲಿ ಬೀಡುಬಿಡುತ್ತಿದ್ದ ಸೂರಾಜ್ ಮದ್ಯದ ಚಟಕ್ಕೆ ಒಳಗಾಗಿ ರೂ.6,500 ಬೆಲೆಬಾಳುವ ಮೀನನ್ನು ತಡರಾತ್ರಿ ಕದ್ದು, ಅದನ್ನು ವಿಶಾಲ ಮನೋಭಾವದ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದನಂತೆ ಅದು ಬರೀ ರೂ.140ಕ್ಕೆ.
ರೂ.6,500 ಮೌಲ್ಯದ ಅಂಜಲ್ ಮೀನನ್ನು ಬರೀ ರೂ.140ಕ್ಕೆ ಮಾರಾಟ ಮಾಡಿರುವುದೇ ಅಂದರೆ ಇಲ್ಲಿ ನಂಬಲೇ ಬೇಕಾದ ವಿಚಾರ. ಯಾಕೆದೆಂದರೆ ಕುಡಿತದ ವ್ಯವಸನಕ್ಕೊಳಗಾದ ಆತನಿಗೆ ಕ್ವಾಟರ್ ಕುಡಿಯಲೇ ಬೇಕಿತ್ತು. ಅದಕ್ಕೆ ಅಗುವಷ್ಟೇ ಮೊತ್ತಕ್ಕೆ ಆತ ಕದ್ದ ತದ್ದ ಅಂಜಲು ಮಾರಿದ್ದಾನೆ.

ಬಯಲಿಗೆ ಬಂದ ವಿಚಾರ…
ಮಾರುಕಟ್ಟೆಯಲ್ಲಿ ಅಂಜಲು ಮೀನು ಕಳವು ಆಗಿರುವ ವಿಚಾರಕ್ಕೆ ದಿನದಿಂದ ದಿನಕ್ಕೆ ರೆಕ್ಕೆ ಪುಕ್ಕ ಬೆಳೆಯಲು ಶುರುವಾಗಿತ್ತು.
ಇತ್ತ ಮಾರುಕಟ್ಟೆ ಪರಿಸರದಲ್ಲಿ ಬೀಡು ಬಿಟ್ಟಿದ್ದ ಸೂರಾಜ್ನ ಮೇಲೆ ಮೀನುಮಾರಾಟಗಾರಿಗೆ ಅದ್ಯಾಕೋ ಅನುಮಾನಗಳು ಕಾಡತೊಡಗಿತ್ತು. ಮದ್ಯದ ನಶೆಯಲ್ಲಿದ್ದ ಆತ ಎಳೆ ಎಳೆಯಾಗಿ ಕಳವು ವಿಚಾರವನ್ನು ಬಯಲುಗೊಳಿಸಿದ್ದಾನೆ. ಅಂಜಲ್ ಅನ್ನು ರಾತ್ರಿ ಕದ್ದು ಬೆಳಿಗ್ಗೆ ಹೂವಿನ ವ್ಯಾಪಾರಿ ವಿಶಾಲ್ಗೆ ಮಾರಾಟ ಮಾಡಿದ್ದೇನೆ. ಅದು ರೂ.140ಕ್ಕೆ ಎಂಬ ಮಹತ್ವದ ಅಂಶವನ್ನು ಖುದ್ದಾಗಿ ಸುರಾಜ್ ಬಾಯಿ ಬಿಟ್ಟಿದ್ದಾನೆ. ಅಷ್ಟೊಂದು ದೊಡ್ಡ ಮೊತ್ತದ ಅಂಜಲನ್ನು ಅಷ್ಟು ಕಡಿಮೆ ದರದಲ್ಲಿ ನೀಡಲು ನಿನಗೆ ಬೇಜಾರು ಆಗಲಿಲ್ಲವೇ ಎಂಬ ಪ್ರಶ್ನೆಯನ್ನು ಮೀನು ಕಳಕೊಂಡ ಮಹಿಳೆ ಪ್ರಶ್ನಿಸಿದಲ್ಲದೇ, ಕಾಸು ಕೇಳಿದ್ದಾಗೆಲ್ಲ ನಾವು ಕೊಟ್ಟಿದ್ದೇವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಇವೆಲ್ಲ ವಿಚಾರವು ಕಳವುಗೈದ ಸೂರಾಜ್ ನ ಹೇಳಿಕೆಯನ್ನು ಮೀನುಮಾರಾಟಗಾರರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

ಪೊಲೀಸ್ ಠಾಣೆಗೂ ದೂರು
ಈ ಕುರಿತು ಜೂನ್ 16ರಂದು ಉಡುಪಿ ಕಾಪು ನಿವಾಸಿ ದಿಕ್ಷೀತ್ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





















