ಸಾಲಿಗ್ರಾಮ ಮೇಳದವರ ”ಶುಭಲಕ್ಷಣ”
ಸಾಲಿಗ್ರಾಮ ಮೇಳದವರ ಈ ಬಾರಿಯ ಯಕ್ಷಗಾನ ಪ್ರಸಂಗದಲ್ಲಿ ದೇವದಾಸ್ ಈಶ್ವರಮಂಗಲ ಅವರು ರಚಿಸಿರುವ ಕೃತಿ ”ಶುಭಲಕ್ಷಣ” ಪ್ರಸಂಗವು ಆ ಮೇಳಕ್ಕೆ ಮತ್ತು ಮೇಳದಲ್ಲಿನ ಎಲ್ಲ ಕಲಾವಿದರ ಇಡೀ ತಂಡಕ್ಕೆ ಯಶಸ್ಸಿನ ಶುಭಲಕ್ಷಣದ ಮುನ್ಸೂಚನೆಯನ್ನು ತೋರಿಸಿಕೊಟ್ಟಂತಾಗಿದೆ.
ಮೇಳದಲ್ಲಿನ ದೊಡ್ಡ,ಸಣ್ಣ ಎಲ್ಲ ಕಲಾವಿದರಿಗೂ ಪ್ರಭಾವ ಬೀರಿಕೊಳ್ಳುವುದಕ್ಕೆ ಬೇಕಾದಂತೆ ಪಾತ್ರಗಳನ್ನು ಹಂಚಿಕೊಡುವುದಕ್ಕೆ ಯೋಗ್ಯ ರೀತಿಯಲ್ಲಿ ರಚಿಸಲ್ಪಟ್ಚಿರುವ , ಯಕ್ಷಗಾನ ಕವಿ ದೇವದಾಸ್ ಈಶ್ವರಮಂಗಲ ಅವರ ಅದ್ಭುತ ಕೃತಿ
“ಶುಭಲಕ್ಷಣ”

ಗುಜರಾಥಿ ಭಾಷೆಯ , ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಪನ್ನಲಾಲ್ ಪಟೇಲ್ ಅವರ ಕಾದಂಬರಿ,ಮಲೇಲ ಜೀವ್( Malela Jeev) ಅದರ ಕತೆಯನ್ನಾಧರಿಸಿ ಪ್ರಸಂಗ ರಚಿಸಲಾಗಿದೆ. ಡಾ।ಶಿವರಾಜ್ ಕುಮಾರ್ ನಟಿಸಿರುವ “ ಜನುಮದ ಜೋಡಿ” ಚಿತ್ರದ ಕತೆಯೂ ಅದೇ ಕಾದಂಬರಿಯದ್ದು ಎನ್ನುವುದು ಗಮನಾರ್ಹ!








ಕೆಳಜಾತಿಯ ಯುವತಿಯಾಗಿರುವ ಲಕ್ಷಣ ಎಂಬಾಕೆಯನ್ನು ಶುಭಕರನು ಮದುವೆಯಾಗುವುದಕ್ಕೆ ಮುಂದಾಗುವುದರಿಂದ ಸಂಭವಿಸುವ ವಿಘ್ನ ಘಟನಾವಳಿಗಳೇ ಈ ಯಕ್ಷಗಾನ ಪ್ರಸಂಗದ ಓಟ.
ಪುಂಡರೀಕ ಎಂಬಾತನ ಸಹೋದರಿ ಮಂದಾಕಿನಿಯು ತಾನು ಶುಭಕರನನ್ನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದರೂ ಅದನ್ನು ಶುಭಕರನೇ ಸ್ವತಃ ನಿರಾಕರಿಸಿ ಕೆಳ ಜಾತಿಯವಳಾದ ಲಕ್ಷಣಳನ್ನು ಮದುವೆಯಾಗುವುದಾಗಿ ಮುಂದಾಗುವಾಗ ಸಮಯ ಸಂದರ್ಭ ಬಳಸಿಕೊಂಡು ಪುಂಡರೀಕನು , ಲಕ್ಷಣಳನ್ನು ಅಪಹರಿಸಿ ತಂದು ಮನೆಯ ಕೆಲಸದಾಳುವಿಗೆ ಬಲಾತ್ಕಾರದ ಮದುವೆ ಮಾಡಿಸುತ್ತಾನೆ. ಆ ಲಕ್ಷಣಳನ್ನು ಮದುವೆಯಾಗಕೂಡದೆಂದು ವಿರೋಧಿಸಿ ಸಹೋದರ ಸಂಬಂಧವನ್ನೇ ಕಡಿಸಿಕೊಂಡಿದ್ದಾನೆ ಶುಭಕರನ ಅಣ್ಣ ಗುಣಕರ. ಅದು ,ಅತ್ತಿಂದ ಲಕ್ಷಣಳನ್ನು ಅಪಹರಣ ಮಾಡುವುದಕ್ಕೆ ಪುಂಡರೀಕನಿಗೂ ತುಂಬಾ ಧೈರ್ಯ ಕೊಡುತ್ತದೆ.
ಮದುವೆಯಾದರೂ ಮೈಮುಟ್ಚುವುದಕ್ಕೂ ಬಿಡದೆ ದಾಂಪತ್ಯಕ್ಕೆ ಬಲವಾಗಿ ವಿರೋಧ ಮಾಡುತ್ತಲೇ ಬರುವ ಲಕ್ಷಣಳು , ತಾನು ಪಡುತ್ತಿರುವ ಸಂಕಟ , ಗಂಡ ಮತ್ತು ಆತನ ಅಕ್ಕ ಮತ್ತು ಪುಂಡರೀಕನ ಕಿರುಕುಳದ ವ್ಯಥೆಯಿಂದ ದೂರವಾಗಲು ಹಾಲಿಗೆ ವಿಷ ಬೆರೆಸಿಟ್ಚು ಕುಡಿದು ಸಾಯುವುದಕ್ಕೆ ಸಿದ್ಧತೆ ಮಾಡಿಟ್ಟುಕೊಳ್ಳುತ್ತಾಳೆ. ತಂಬಿಗೆಯಲ್ಲಿದ್ದ ವಿಷಮಿಶ್ರಿತ ಹಾಲನ್ನು ಆಕೆಯ ಒಲ್ಲದ ಪತಿ ಮಾಂಕು , ಅದು ತನಗೆಂದೇ ಪತ್ನಿ ತಂದಿಟ್ಟಿರುವ ಹಾಲು ಎಂದುಕೊಂಡು ಕುಡಿದು ಸಾಯುತ್ತಾನೆ. ಮುಂದಿನ ದಿನದಲ್ಲಿ ಆಕೆಯು ಹುಚ್ಚಿಯಾಗಿ ದಾರಿ ಹಿಡಿಯುತ್ತಾಳೆ. ಯಾರ ನಿಯಂತ್ರಣಕ್ಕೂ ಸರಿಯಾಗದವಳಾಗುತ್ತಾಳೆ. ತಪ್ಪಿತಸ್ಥರಲ್ಲಿ ಒಬ್ಬಳಾದ ಮಂದಾಕಿನಿಯೇ ಹತ್ತಿರ ಬಂದು ಕ್ಷಮೆ ಯಾಚಿಸಿದರೂ ಲಕ್ಷಣ ಸಿಟ್ಟಾಗಿ ವಿರೋಧಿಸುತ್ತಾಳೆ, ಹಲ್ಲೆಗೆ ಮುಂದಾಗುತ್ತಾಳೆ.
ಲಕ್ಷಣಳನ್ನು ಬೇರೊಬ್ಬನಿಗೆ ಬಲಾತ್ಕಾರದ ವಿವಾಹ ಮಾಡಿದ್ದರಿಂದ ,ಆಕೆಗೂ ಶುಭಕರನ ಜೊತೆಗೆ ಮದುವೆ ಮಾಡಿಕೊಂಡು ಬಾಳಲು ಆಗದ್ದರಿಂದ , ಸ್ವಂತ ಅಣ್ಣನೇ ಮನೆಯಿಂದ ಹೊರಗಟ್ಟಿದ್ದರಿಂದ ಶುಭಕರನು ಹತ್ತಿರದ ದೇವರ ಗುಡಿಯನ್ನೇ ಮನೆ ಮಾಡಿಕೊಂಡಿರುತ್ತಾನೆ. ಅವನು ಕೂಡಾ ಗಡ್ಡ ಬೆಳೆಸಿಕೊಂಡು ಸಾಮಾನ್ಯರಂತೆ ಇದ್ದು ದಿನಗಳೆಯುತ್ತಾನೆ.
ಶುಭಕರ ಮತ್ತು ಲಕ್ಷಣರಲ್ಲಿ ಪ್ರೀತಿ ಅಂಕುರವಾಗಿ ಅವರು ಪರಸ್ಪರ ಮದುವೆಯಾಗುವುದಕ್ಕೆ ನಿರ್ಧಾರ ಮಾಡಿದಾಗ ಲಕ್ಷಣಳ ಆಪ್ತಮಿತ್ರೆಯೊಬ್ಬಳು ಬಟ್ಟೆಯಲ್ಲಿ ಕುಸುರಿ ಕೆಲಸದಿಂದ “ಶುಭಲಕ್ಷಣ “ಎಂದು ಬರೆದುದನ್ನು ಇಬ್ಬರ ಸಮ್ಮುಖದಲ್ಲಿಯೇ ಕೊಡುಗೆಯಾಗಿ ನೀಡಿರುತ್ತಾಳೆ. ಅದು ಸದಾ ಶುಭಕರನ ಜೊತೆಯಲ್ಲೇ ಇರುತ್ತದೆ. ಹುಚ್ಚಿಯಾಗಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಲಕ್ಷಣಳನ್ನು ಅದೊಂದು ದಿನ ಶುಭಕರ ಕಂಡು ಉಪಚರಿಸಿದರೂ ಆಕೆಗೆ ಈತ ಯಾರೆನ್ನುವುದು ತಿಳಿಯದಾದಾಗ ತನ್ನಲ್ಲಿ ಜೋಪಾನವಾಗಿಟ್ಟುಕೊಂಡಿದ್ದ ಆ ಉಡುಗೊರೆ ಬಟ್ಟೆಯನ್ನು ಬಿಡಿಸಿ ಅದರಲ್ಲಿ ಬರೆದಿದ್ದ ಶುಭಲಕ್ಷಣವನ್ನು ತೋರಿಸಿದಾಕ್ಷಣವೇ ಆಕೆ ಶುಭಕರನನ್ನು ತಬ್ಬಿಕೊಳ್ಳುವುದರೊಂದಿಗೆ ಮಂಗಳವಾಗುತ್ತದೆ. ಉಡುಗೊರೆಯ ವಸ್ತುವೊಂದು ಹಳೆಯ ಸಂಬಂಧವನ್ನು ಮರುಜೀವಪಡಿಸುತ್ತದೆ.
ಕಾದಂಬರಿಯ ವಸ್ತು ವಿಷಯವನ್ನು ಯಕ್ಷಗಾನ ಕತೆ ನಿರೂಪಣೆಗೆ ತರುವಲ್ಲಿ ಕೃತಿಕಾರನ ಪ್ರತಿಭೆ ತುಂಬಾ ಶ್ಲಾಘನೀಯವಾಗಿದೆ.
ಕಲಾವಿದರಿಗೆ ದಣಿವರಿಯುವುದಕ್ಕೂ, ಸಾಕಷ್ಟು ಮಿಂಚುವುದಕ್ಕೂ ಎರಡೂ ಬಗೆಯ ಅನುಕೂಲವನ್ನು ಈ ಪ್ರಸಂಗದಲ್ಲಿ ಹೆಣೆದಿರುವುದು ಪ್ರೇಕ್ಷಕ ವರ್ಗಕ್ಕೆ ಆಟ ‘ಅಜ್ಜಮ್ಮ’ ಅಂತ ಅನಿಸಿಕ್ಳ್ಳಲು ಅವಕಾಶವೇ ಇಲ್ಲವಾಗಿದೆ.
ಕೆಲವೇ ಕೆಲವು ತಿದ್ದುಪಡಿಗಳನ್ನು ಸ್ವಯಂಪ್ರೇರಿತವಾಗಿ ಮಾಡಿಕೊಂಡು ಪಾತ್ರ ನಿರೂಪಣೆ ಮಾಡಿಕೊಳ್ಳುವುದಕ್ಕೂ ತುಂಬಾ ಅವಕಾಶವಿದೆ. ಆ ಎಲ್ಲವನ್ನೂ ಸಾಬೀತುಪಡಿಕೊಂಡಲ್ಲಿ ಬಹುಶಃ #ಶುಭಲಕ್ಷಣ ಯಕ್ಷಗಾನವು ಅದಾಗಲೇ ಹುಟ್ಟಿ ಪಸರಿಕೊಂಡಿರುವ ಯಶಸ್ಸಿನ ನಿರೀಕ್ಷೆಯನ್ನೂ ಮೀರಲಿದೆ.
ಯಕ್ಷಗಾನದ ಬಡಗುತಿಟ್ಟು ಮೇಳಗಳಲ್ಲಿ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಯಕ್ಷ ಕಲಾಮಾತೆಯ ಎರಡು ಕಣ್ಣುಗಳಂತೆ ಇವೆ. ಲಾಗಾಯ್ತಿನಿಂದಲೂ ತಮ್ಮದೇ ವೈಶಿಷ್ಟ್ಯಗಳೊಂದಿಗೆ ವಿಭಿನ್ನವಾದ ಪ್ರದರ್ಶನವನ್ನು ಸಾಮಾಜಿಕ ಕಥಾನಕಗಳಲ್ಲಿ ತೋರಿಸಿಕೊಂಡು ಬಂದಷ್ಟೇ , ಯಕ್ಷಗಾನದ ಚೌಕಟ್ಟನ್ನು ಮೀರಿಸದೆನೆ ಪೌರಾಣಿಕ ಪ್ರಸಂಗಗಳನ್ನೂ ಪ್ರದರ್ಶಿಸುತ್ತ ಬಂದಿವೆ. ಒಂದರ್ಥದಲ್ಲಿ ಪ್ರತಿಸ್ಪರ್ಧಿಗಳ ಹಾಗೆನೆ ಬಲಾಢ್ಯ ಕಲಾವಿದರನ್ನು ಕಟ್ಟಿಕೊಂಡು ಯಕ್ಷಗಾನ ಕಲಾಪ್ರೇಮಿಗಳಿಗೆ ಯಾವ ಮೇಳವನ್ನೂ ಹೀಗಳೆಯುವುದಕ್ಕೆ ಆಗದಂತೆಯೆ ಆ ಎರಡೂ ಮೇಳಗಳ ಯಜಮಾನರುಗಳು(ಪಿ. ಕಿಶನ್ ಹೆಗ್ಡೆ,ಸಾಲಿಗ್ರಾಮ; ವೈ. ಕರುಣಾಕರ ಹೆಗ್ಡೆ, ಪೆರ್ಡೂರು) ಆಸಕ್ತಿಯಿಂದ ಯಕ್ಷ ಕಲಾಮಾತೆಯ ಸೇವೆ ಮಾಡುತ್ತ ಬಂದಿರುವುದು ಕೂಡಾ ಅತ್ಯಂತ ಶ್ಲಾಘನೀಯ ಸಂಗತಿ.
ಇಂದು ಪೆರ್ಡೂರಿನಲ್ಲಿ ಸಾಲಿಗ್ರಾಮ ಮೇಳದವರ ಯಕ್ಷಗಾನ “ಶುಭಲಕ್ಷಣ”ದ ಇಪ್ಪತ್ತೈದನೆಯ ಯಶಸ್ವೀ ಪ್ರದರ್ಶನವಿರುವುದು ವಿಶೇಷವೂ ಯೋಗಾಯೋಗವೂ ಆಗಿದೆ.
-ಚಿತ್ರ, ಬರೆಹ : ವಿ. ಕೆ. ವಾಲ್ಪಾಡಿ





















