



ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಹಕಾರಿ ಕ್ಷೇತ್ರಕ್ಕೆ ಕೊಡಲಿಯೇಟು !

ಕಾಮಗಾರಿ ಅವಾಂತರ : ಸಾಣೂರು ಸೊಸೈಟಿಗೆ ರಸ್ತೆ ಸಂಪರ್ಕ ಕಡಿತ: ಸಂಕಷ್ಟದಲ್ಲಿ ನಾಗರಿಕರು
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿರುವ ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಎದುರುಗಡೆ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾ.ಹೆ :169 ಸರ್ವಿಸ್ ರಸ್ತೆ ಕಾಮಗಾರಿಗೆ ಸಾರ್ವಜನಿಕರ ನಿರಂತರ ಒತ್ತಡದ ಬಳಿಕ ಚಾಲನೆ ದೊರೆತಿದ್ದು, ಇದೀಗ ಸರ್ವಿಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಾಣೂರು ಸೊಸೈಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಬೆಳವಣಿಗೆಯಿಂದಾಗಿ ಸಾಣೂರು, ಇರ್ವತ್ತೂರು, ರೆಂಜಾಳ, ಮಿಯ್ಯಾರು ಗ್ರಾಮದ ಸೊಸೈಟಿ ಸದಸ್ಯರು ತಮ್ಮ ದೈನಂದಿನ ವ್ಯವಹಾರಗಳಿಗೆ ಮತ್ತು ತಿಂಗಳ ಪಡಿತರ ಸಾಮಾಗ್ರಿಗಳು ಸಂಗ್ರಹಿಸಲು ತೀವ್ರ ಅಡಚಣೆ ಉಂಟಾಗಿದೆ. ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನದ ಕಾಮಗಾರಿಗೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ವಿಸ್ ರಸ್ತೆ ನಿರ್ಮಾಣಕ್ಕೆ ರಸ್ತೆ ಅಗೆಯುತ್ತಿರುವ ಸಂದರ್ಭದಲ್ಲಿಯೇ ಸಹಕಾರಿ ಸಂಘದ ಅಧ್ಯಕ್ಷ ಜಾನ್. .ಆರ್. ಡಿ’ಸಿಲ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಪೂಜಾರಿ ಮತ್ತು ನಿರ್ದೇಶಕರುಗಳು ಗುತ್ತಿಗೆದಾರ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಲ್ಲಿ ಸಮಾಲೋಚನೆ ನಡೆಸಿ ಸೊಸೈಟಿ ಕಟ್ಟಡದ ಮುಂಭಾಗದಲ್ಲಿರುವ ಆಲದ ಮರದ ಪಕ್ಕದಲ್ಲಿರುವ ವಿದ್ಯುತ್ ತಂತಿ ಕಂಬಗಳನ್ನು ಸುರಕ್ಷಿತ ಅಂತರಕ್ಕೆ ಸ್ಥಳಾಂತರಿಸಿ ಸರ್ವಿಸ್ ರಸ್ತೆಯಿಂದ ಆಲದ ಮರದ ಪಕ್ಕದಲ್ಲಿಯೇ ಅರ್ಧ ವೃತ್ತಾಕಾರದಲ್ಲಿ ವಾಹನಗಳು ಸುರಕ್ಷಿತವಾಗಿ ಮತ್ತು ಸರಾಗವಾಗಿ ಸಂಸ್ಥೆಯ ಗೋದಾಮಿನ ಹತ್ತಿರ ಬರುವಂತೆ ಅನುಕೂಲವಾಗುವ ರಸ್ತೆ ನಿರ್ಮಿಸಿ ಕೊಡಲು ವಿನಂತಿಸಿದ್ದರು.
ಈ ಬಗ್ಗೆ ಸಮ್ಮತಿ ಸೂಚಿಸಿದ್ದ ಗುತ್ತಿಗೆದಾರ ಕಂಪನಿಯವರು ಇದೀಗ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಿ 4 ದಿನಗಳಾದರೂ, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೇ, ಸಂಪರ್ಕ ರಸ್ತೆ ಕೂಡ ನಿರ್ಮಾಣ ಮಾಡಿಕೊಡದೆ ದ್ವಿಚಕ್ರ ಮತ್ತು ಕನಿಷ್ಠ ರಿಕ್ಷಾ ಗಳು ಕೂಡ ಸಹಕಾರಿ ಸಂಘದ ಸಮೀಪಕ್ಕೆ ಬಾರದ ಸ್ಥಿತಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆಗೀಡಾಗಿದ್ದಾರೆ.
.
Post Views: 183





































