ರಾಜಕಾರಣಿ ಮತ್ತು ಸೆಲ್ಫೀ ಫೋಟೋ ಅಭಿಮಾನ
-ವಿ. ಕೆ. ವಾಲ್ಪಾಡಿ
ಮೊಬೈಲ್ ಕ್ಯಾಮೆರ ಸೌಲಭ್ಯ ಬರುವುದಕ್ಕೆ ಮುಂಚೆಯೂ ರಾಜಕಾರಣಿಗಳ ಜೊತೆ ಫೊಟೋ ತೆಗೆಯಿಸಿಕೊಳ್ಳುವ ಹುಚ್ಚು ಅಭಿಮಾನವಿತ್ತು. ಆ ರಾಜಕಾರಣಿಗೊ,ಚಲನಚಿತ್ರ ನಟನಿಗೆ ಅಥವಾ ಇನ್ಯಾರೇ ಸೆಲೆಬ್ರೆಟಿಗೆ ಫೊಟೋ ತೆಗೆಸಿಕೊಂಡವನ ಇತಿಹಾಸ ಗೊತ್ತಿರುವುದಿಲ್ಲ. ಆಗ ತಾನೆ ಯಾರಿಗೊ ಚೂರಿ ಇರಿದು ಕೈಯ ರಕ್ತವನ್ನೆಲ್ಲ ತೊಳೆದು ಸ್ವಚ್ಚ ಮಾಡಿಕೊಂಡು ಬಂದವನೂ ತನ್ನ ನೆಚ್ಚಿನ ನಾಯಕನ ಮುಂದೆ ನಿಂತು ಫೊಟೋ ತೆಗೆಸಿಕೊಳ್ಳುವುದಕ್ಕೂ ಉಚಿತ ಅವಕಾಶವಿದೆ.
ಮೊಬೈಲ್ ಕ್ಯಾಮೆರದಿಂದಾಗಿ ಸೆಲ್ಫೀ ತೆಗೆಯುವುದು ಹವ್ಯಾಸವೇ ಆಗಿದೆ. ಬಹುಶಃ ಮುಂದೆ ಸಂಕಟಗಳು ಎದುರಾಗಬಾರದೆಂದೇನೊ ಡಿ. ಕೆ. ಶಿವಕುಮಾರ್ ಅವರು ಪಕ್ಷದ ಅದೆಂಥ ಕಾರ್ಯಕರ್ತ ಅಭಿಮಾನಿಯ ಜೊತೆಗೂ ಸೆಲ್ಫಿಗೆ ಅವಕಾಶ ಕೊಡದಿರುವುದು.ಹೆಗಲು ಮುಟ್ಚಲು ಬಿಡದಿರುವುದು! ಅವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತಿರಬಹುದೇನೊ!
ಕಾರ್ಕಳದಲ್ಲಿ ಇದೀಗ ಸೆಲ್ಫೀ ಆರೋಪ ಪ್ರತ್ಯಾರೋಪ ಪ್ರಾರಂಭವಾಗಿದೆ. ಶಾಸಕ,ಮಾಜಿ ಸಚಿವ ವಿ. ಸುನಿಲ್ ಕುಮಾರ್ ಜೊತೆ ಸೆಲ್ಫಿ ತೆಗದುಕೊಂಡಿದ್ದ ಅವರ ಅಭಿಮಾನಿಯೊಬ್ಬನು ಕಳೆದ ವಾರ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಸಿಲುಕಿಕೊಂಡಿದ್ದಾನೆ.
ಅದು ಈಗ ಕಾರ್ಕಳದ ರಾಜಕೀಯ ಕೆಸರೆರೆಚಾಟದಲ್ಲಿ ಪ್ರಮುಖ ಸಂಗತಿಯಾಗಿದೆ. ಮೈಪರಚಿಕೊಳ್ಳುವ ವಿರೋಧವಾಗಿ ಕಾಣುತ್ತಿದೆ.
ಈಗಿನ ರಾಜಕೀಯ ಮತ್ತು ಸಮಾಜವೇ ಕ್ರಿಮಿನಲ್ ಆರೋಪಿಗಳ ಒಕ್ಕೂಟವೆನ್ನುವ ಅರ್ಥದಲ್ಲಿ ಕಾಣಿಸಿಕೊಳ್ಳುತ್ತಿದೆ. ಯಾರು ಯಾವಾಗ ಸ್ನೇಹಿತನಾಗುತ್ತಾನೆ,ವಿರೋಧಿಯಾಗುತ್ತಾನೆ,ಆರೋಪಿಯಾಗುತ್ತಾನೆ ಎನ್ನುವುದನ್ನು ಹೇಳುವುದಕ್ಕೇ ಸಾಧ್ಯವಿಲ್ಲ. ಒಬ್ಬನು ಮಾಡುವ ಅಪರಾಧ ಕೃತ್ಯಕ್ಕೂ ಆತನು ಕೆಲವರ ಮೇಲೆ ಇಟ್ಟುಕೊಂಡಿರುವ ವೈಯಕ್ತಿಕ ಅಭಿಮಾನಕ್ಕೂ ಏನೇ ಸಂಬಂಧವಿರುವುದಿಲ್ಲ.ಹಾಗಿರುವಾಗ ಜೊತೆಯಲಿ ನಿಂತು ಫೊಟೋ ತೆಗೆಸಿಕೊಳ್ಳುವುದಕ್ಕೆ ಯಾವ ಮಾನದಂಡವೂ ಇರುವುದಿಲ್ಲ. ಪ್ರಧಾನಿಯಿಂದ ಹಿಡಿದು ಅಧಿಕಾರಿ ವರ್ಗಗಳ ತನಕವೂ ಯಾರೇ ಆದರೂ ಸೆಲ್ಫೀ ಫೊಟೋ ತೆಗೆದುಕೊಳ್ಳುತ್ತಾರೆ.

ನೊಟೋರಿಯಸ್ ಎಂದುಕೊಂಡ ಆರೋಪಿಯೊಬ್ಬ ಹಿರಿಯ ಸಚಿವರನ್ನು ಭೇಟಿ ಮಾಡುತ್ತಾನೆ ಎಂದಾಗುವಾಗ ಆತನ ಕೃತ್ಯಕ್ಕೂ ಸಚಿವನಲ್ಲಿ ಮಾತಾನಾಡಬೇಕಾಗಿರುವ ಸ್ವಾತಂತ್ರ್ಯಕ್ಕೂ ಅನರ್ಥ ಕಲ್ಪಿಸಬೇಕಾಗಿಲ್ಲ.
ಸೆಲ್ಫೀ ಫೊಟೋಗೆ ಯಾವ ಅರ್ಹತೆಯೂ ಬೇಕಾಗಿಲ್ಲ, ಅದೊಂದು ಕೆಟ್ಟ ಅಪವಾದಕ್ಕೆ ಅರ್ಹವಾಗುವುದೂ ಇಲ್ಲ. ಸಾರ್ವಜನಿಕ ಜೀವನಕ್ಕೆ ತನ್ನನ್ನು ಮೀಸಲಿಟ್ಟುಕೊಂಡ ಶಾಸಕ ಅಥವಾ ಜನಪ್ರತಿನಿಧಿಯು ಯಾವನೇ ನಾಗರಿಕನನ್ನೂ ದೂರ ತಳ್ಳುವಂತಿಲ್ಲ . ಸೆಲ್ಫೀ ತೆಗೆಯಿಸಿಕೊಳ್ಳುವುದನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಕಾರಣ ಯಾರು ಯಾರ ಜೊತೆಗೂ ಫೊಟೋ ತೆಗೆಸಿಕೊಳ್ಳಬಹುದು ,ಅದೇನು ಮಹಾ ಸಂಗತಿಯಲ್ಲ ಎಂದಾಗಿಬಿಟ್ಚಿದೆ.
ಇನ್ನು ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗದಾಗ ಫೊಟೋ ಮಿಕ್ಸ್ ಮಾಡಿಕೊಂಡು ತಮ್ಮ ವಾಟ್ಸಪ್ ಡಿ ಪಿ ಮಾಡಿಕೊಳ್ಳುತ್ತಾರೆ. ಈ ರೀತಿಯ ಅಭಿಮಾನಗಳಿಗೆ ಯಾವ ನಾಯಕನ ಅನುಮತಿಯೂ ಬೇಡವಾದ್ದರಿಂದ ಅದೊಂದು ಗಣನೆಗೆ ಹಚ್ಚಿಕೊಳ್ಳುವ ಸಂಗತಿಯಾಗುವುದಿಲ್ಲ.
ಡಿಜಿಟಲ್ ಕಾಲದಲ್ಲಿ ಯಾರು ಯಾರೊಂದಿಗೂ ಇರುತ್ತಾರೆ/ಇರುವುದಕ್ಕೆ ,ಮಲಗುವುದಕ್ಕೆ ಸಾಧ್ಯ ಎನ್ನುವುದು ಲೋಕೋಕ್ತಿಯಾಗಿದೆ!
ರಾಜಕಾರಣಿ ಎಂದಾಗ ಆತ ಸಾರ್ವಜನಿಕ ಕೊಳದ ಹಾಗೆ ಇರುತ್ತಾನೆ/ಇರಬೇಕು. ಅದರ ನೀರನ್ನು ತೀರಾ ಬಡವರು ಕುಡಿಯುತ್ತಾರೆ,ಅಲ್ಲಿ ಬಟ್ಟೆ ಒಗೆಯುತ್ತಾರೆ,ಸ್ನಾನ ಮಾಡುತ್ತಾರೆ. ಭೂಮಾಲಿಕರು ತಮ್ಮ ತೋಟಕ್ಕೆ ಬಳಸಿ ಸ್ವಾರ್ಥ ಮೆರೆಯುತ್ತಾರೆ. ನೀರನ್ನು ಯಾವುದಕ್ಕೆಲ್ಲ ಬಳಸುತ್ತಾರೊ ಅದಕ್ಕೆಲ್ಲ ಬಳಕೆಯಾಗುತ್ತದೆ. ಯಾರು ಬಂದು ಕೊಳದಲ್ಲಿ ಕೈ ಅದ್ದಿಯೋ,ಮುಖಕ್ಕೆ ನೀರು ಚಿಮುಕಿಸಿಕೊಂಡು ಹೋಗಿದ್ದಾರೊ ಅನ್ನುವುದನ್ನು ಆ ಕೊಳ ತಿಳಿಯುವ ಪ್ರಯತ್ನ ಮಾಡುವುದಿಲ್ಲ ಯಾಕೆಂದರೆ , ತನ್ನದು ಸಾರ್ವಜನಿಕ ಸೇವೆ ಎನ್ನುವ ಒಂದೇ ಒಂದು ಆದರ್ಶ.
ಸುನಿಲ್ ಕುಮಾರ್ ಮಾತ್ರವಷ್ಟೇ ಅಲ್ಲ ದೇಶದ ಎಲ್ಲ ಪಕ್ಷದ,ವರ್ಗದ ನಾಯಕರು ಮಂತ್ರಿಗಳು ತಾವು ಎಲ್ಲರೊಂದಿಗೂ ಕಾಣಿಸಿಕೊಳ್ಳುವುದನ್ನೇ ಹೆಚ್ಚು ಬಯಸುತ್ತಾರೆ,ಪ್ರಚಾರಕ್ಕಾಗಿ ಹಾತೊರೆಯುತ್ತಾರೆ. ಭೂಮಿ ,ಆಕಾಶದಡಿಯಲ್ಲಿ ಸಾಲದೆ ಚಂದಿರನೊಂದಿಗೂ ಸೆಲ್ಫಿ ತೆಗೆಯಲಿಕ್ಕೆ ಎಟಕಿಸುತ್ತಾರೆ. ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಆರಂಭದ ವೈಭವದೊಡನೆ ಪಕ್ಷಾತೀತವಾಗಿ ಸೆಲ್ಫಿ ತೆಗೆದುಕೊಂಡವರೆಲ್ಲರನ್ನೂ ಈಗ ಅವರೇ ಮೂರ್ತಿ ಕದ್ದಿದ್ದಾರೆ,ಮಣ್ಣು ಸುರಿದಿದ್ದಾರೆ ಎನ್ನಲು ಸಾಧ್ಯವುಂಟೇ? ಛೇ..! ಛೇ…!!






















