ಯುವಕನ ಅಪಹರಿಸಿ, ರೂಂನಲ್ಲಿ ಥಳಿತ

Picture of RB NEWS

RB NEWS

Bureau Report

ಚಿತ್ರ: ಎ.ಐ

ಕಾಪು: ಯುವಕನೊಬ್ಬನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಮಣಿಪಾಲದಲ್ಲಿ ನಡೆದಿದ್ದು, ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು ಮೂಲದ ನಿಹಾಲ್ ಅಹ್ಮದ್ ಎಂಬವರು ಲ್ಯಾಂಡ್‌ಲಿಂಕ್ಸ್ ಕೆಲಸ ಮಾಡಿಕೊಂಡಿದ್ದು, ಅ.1ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಗೆಳೆಯನಾದ ಇಲ್ಯಾಸ್ ಹಸನಬ್ಬ ಎಂಬವರು ಸ್ವಿಫ್ಟ್ ಕಾರಿನಲ್ಲಿ ನಿಹಾಲ್ ಅವರ ಮನೆಗೆ ಬಂದಿದ್ದಾರೆ. ಮಾತನಾಡಲು ಇದೆ ಎಂದು ನಂಬಿಸಿ ನಿಹಾಲ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇಲ್ಯಾಸ್ ಹಸನಬ್ಬ ಅವರು ನಿಹಾಲ್ ಅವರ ಮುಖಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಳಿಕ ನಿಹಾಲ್ ಅವರನ್ನು ಮಣಿಪಾಲದ ಎಕ್ಸ್‌ಟ್ರೀಮ್ ಫಿಟ್ನೆಸ್ ಜಿಮ್‌ಗೆ ಕರೆದೊಯ್ದು, ಮೇಲ್ಮಹಡಿಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅದೇ ದಿನ ರಾತ್ರಿ ಸುಮಾರು 10.20ಕ್ಕೆ ಜಿಮ್‌ನಿಂದ ಕೆಳಗೆ ಕರೆತಂದ ನಿಹಾಲ್ ಅವರ ಎದೆ, ಕಿವಿ ಹಾಗೂ ಕಾಲಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ನಿಹಾಲ್ ಅವರು ತಾಯಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ್ದಾರೆ. ನಂತರ ಅವರನ್ನು ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಕುರಿತು ನಿಹಾಲ್ ಅವರ ಸಹೋದರ ಕಾಪು ಮಲ್ಲಾರಿಯ ಕೆ.ಎಸ್. ಮೊಹಮ್ಮದ್ ಹಮ್ಮಾರ್ಹ್ ಅವರು ಕಾಪು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top