ಮುಂಬೈ ಟಾಟಾ ಮ್ಯಾರಥಾನ್‌ನಲ್ಲಿ ಸಾಧನೆ: ಸಂಜೀವ ಬಳ್ಕೂರು ಅವರಿಗೆ ಅಭಿನಂದನೆ

Picture of RB NEWS

RB NEWS

Bureau Report


ಉಡುಪಿ: ಅಜ್ಜರಕಾಡು ಸರಕಾರಿ ಜಿಮ್ಮಿನ ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರು ಅವರು ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜಿಮ್ಮಿನ ವತಿಯಿಂದ ಅಭಿನಂದನಾ ಸಮಾರಂಭವನ್ನು ಜ.28ರಂದು ಆಯೋಜಿಸಲಾಯಿತು.
ಮಾಸ್ಟರ್ ಅಥ್ಲೆಟಿಕ್ಸ್ ಹಾಗೂ ಮ್ಯಾರಥಾನ್ ಓಟಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಸಂಜೀವ ಬಳ್ಕೂರು ಅವರು, ಜ.18ರಂದು ದೇಶದ ಅತ್ಯುನ್ನತ ಹಾಗೂ ಹೆಸರಾಂತ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿ 42 ಕಿ.ಮೀ ದೂರವನ್ನು 4 ಗಂಟೆ 56 ನಿಮಿಷಗಳಲ್ಲಿ ಪೂರ್ಣಗೊಳಿಸಿ ಗಮನಾರ್ಹ ಸಾಧನೆ ಮಾಡಿದ್ದರು. ಈ ಸಾಧನೆಯ ಅಂಗವಾಗಿ ಜಿಮ್ಮಿನ ತರಬೇತುದಾರ ಉಮೇಶ್ ಮಟ್ಟು ಅವರು ಜಿಮ್ಮಿನ ಎಲ್ಲಾ ಸದಸ್ಯರ ಪರವಾಗಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತರಬೇತುದಾರ ಉಮೇಶ್ ಮಟ್ಟು ಅವರು, ಸಂಜೀವ ಬಳ್ಕೂರು ಅವರ ಸಾಧನೆ ಜಿಮ್ಮಿಗೆ ಹೆಮ್ಮೆಯ ವಿಷಯವಾಗಿದ್ದು, ಅವರು ಜಿಮ್ಮಿನ ಬಲಾಢ್ಯ ಹಾಗೂ ಪ್ರೇರಣಾದಾಯಕ ವ್ಯಕ್ತಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಜೀವ ಬಳ್ಕೂರು ಅವರು, ಜಿಮ್ಮಿನ ಸದಸ್ಯರೆಲ್ಲರೂ ಐಕ್ಯತೆ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ತಮ್ಮ ತಮ್ಮ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆಧುನಿಕ ಆಹಾರ ಪದ್ಧತಿಯಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದನ್ನು ಗಮನಿಸಿ, ಎಲ್ಲರೂ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಸರಕಾರದಿಂದ ನಡೆಸಲ್ಪಡುವ ಈ ಜಿಮ್ ಅತ್ಯುತ್ತಮ ಕ್ರೀಡೋಪಕರಣಗಳು ಹಾಗೂ ಅನುಭವೀ ತರಬೇತುದಾರರನ್ನು ಹೊಂದಿದ್ದು, ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಮ್ಮಿನ ಸದಸ್ಯರಾದ ಪ್ರಶಾಂತ್ ಕೋಟ್ಯನ್ (ಮಲ್ಪೆ), ಉದಯ್ ಕುಮಾರ್ ಕಲ್ಮಾಡಿ, ಪ್ರಶಾಂತ್ ಜತ್ತನ್, ಎಲ್ಐಸಿ ಹಿರಿಯ ಅಧಿಕಾರಿ ಆನಂದ್, ದೀಪಕ್ ಕಾಮತ್, ಸುದಾಕರ್ ಬಿಜೂರು, ಮಹಿಳಾ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top