ಮಾತು ಒಂದು ಕಲೆ – ಮುಳ್ಳಾಗದೆ, ಹೂವಿನಂತಿರಲಿ

Picture of RB NEWS

RB NEWS

Bureau Report


ಮಾತು ಮಾಣಿಕ್ಯದಂತಿರಬೇಕು. ಮಾತು ಮುತ್ತಿನಂತಿರಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಹಾಗಾಗಿ ಯಾರಲ್ಲೇ ಆಗಲಿ, ಮಾತು ಆಡುವಾಗ ಜಾಗ್ರತೆ ಮತ್ತು ಎಚ್ಚರಿಕೆ ಅತ್ಯಗತ್ಯ. ತಪ್ಪಿ ಆಡಿದ ಮಾತುಗಳು ಮನಸ್ಸಿಗೆ ಮಾಡುವ ನೋವು, ಉಂಟುಮಾಡುವ ಗಾಯಗಳನ್ನು ಯಾರೂ ಸಹ ಜೀವನಪರ್ಯಂತ ಮರೆಯುವುದಿಲ್ಲ. ಆದ್ದರಿಂದ ನಮ್ಮ ಮಾತಿನ ಮೇಲೆ ನಾವು ನಿಯಂತ್ರಣ ಸಾಧಿಸಬೇಕು; ನಮ್ಮ ಮಾತುಗಳಿಗೆ ನಾವೇ ಕಡಿವಾಣ ಹಾಕಿಕೊಳ್ಳಬೇಕು.
ಮಾತು ಮಧುರವಾಗಿದ್ದಾಗ ಅದು ಕೇಳಿದವರ ಮನಸ್ಸಿನಲ್ಲಿ ಅಮರವಾಗಿ ಉಳಿಯುತ್ತದೆ. ಮಧುರವಾದ ಮಾತು ಕೇಳಲು ಹಂಬಲಿಸದವರು ಯಾರಿದ್ದಾರೆ? ಯಾರೂ ಇಲ್ಲ. ಇಂಥ ಮಧುರ ಮಾತುಗಳಿಂದ ನೋವುಂಟಾಗುವುದಿಲ್ಲ, ಜಗಳವೂ ಹುಟ್ಟುವುದಿಲ್ಲ. ಮಧುರ ಮಾತುಗಳಿಂದಲೇ ಪ್ರೀತಿ, ಸ್ನೇಹ ಮತ್ತು ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.
ಮಾತು ಸಿಹಿಯಾಗದೇ ಇದ್ದರೂ ಪರವಾಗಿಲ್ಲ. ಚಪ್ಪೆಯಾಗಿದ್ದರೂ ತೊಂದರೆಯಿಲ್ಲ. ಆದರೆ ಅನಗತ್ಯವಾಗಿ ಕಹಿಯಾಗದಂತೆ ನೋಡಿಕೊಳ್ಳುವುದು ಬಹುಮುಖ್ಯ. ಮಾತು ಮುಳ್ಳಾಗಬಾರದು; ಹೂವಿನಂತಿರಬೇಕು.
ಮಾತು ಕೊಟ್ಟು ಉಳಿಸಿದವರು ಸಹಜವಾಗಿ ಗೌರವಕ್ಕೆ ಪಾತ್ರರಾಗುತ್ತಾರೆ. ಮಾತು ಕೊಟ್ಟು ಮರೆತವರು ಗೌರವ ಕಳೆದುಕೊಳ್ಳುತ್ತಾರೆ. ಮಾತಿನ ಮೌಲ್ಯ ತಿಳಿದವನು ಜೀವನವನ್ನೇ ಗೆಲ್ಲುತ್ತಾನೆ.
ಮಾತು ಮೆದುವಾಗಿರಲಿ, ಮೃದುವಾಗಿರಲಿ, ಮೆತ್ತಗಾಗಿರಲಿ. ಸುತ್ತಿಗೆಯಿಂದ ಹೊಡೆದಂತಿರದಿದ್ದರೆ ಸಾಕು. ಸುಂದರವಾಗಿರದಿದ್ದರೂ ಚಿಂತೆಯಿಲ್ಲ. ಸಹಜವಾದ, ಸರಳವಾದ ಮಾತಿಗೆ ಎದುರಿಗಿರುವವರು ಬಗ್ಗುತ್ತಾರೆ, ಬಾಗುತ್ತಾರೆ. ಆದರೆ ಮಾತು ಬೊಗಳುವಿಕೆಯಾಗಿದ್ದರೆ, ಕೆಲವೊಮ್ಮೆ ಎರಡು ಬಿಗಿಯುವುದೂ ಆಗುತ್ತದೆ!
ಮಾತನಾಡುವುದು ನಿಜಕ್ಕೂ ಒಂದು ಕಲೆ. ಗೆಳೆಯರಾಗಿದ್ದರೂ, ಕೆಲವೊಮ್ಮೆ ಮಾತುಗಳೇ ಕಲಹಕ್ಕೆ ಕಾರಣವಾಗಿ ಕೊಲೆಯಲ್ಲಿ ಅಂತ್ಯವಾಗುವುದೂ ಇರುತ್ತದೆ. ಅಣ್ಣ–ತಮ್ಮಂದಿರ ನಡುವೆ, ಅಕ್ಕ–ತಂಗಿಯರ ಮಧ್ಯೆ, ಗಂಡ–ಹೆಂಡತಿಯರೊಳಗೆ ಮಾತಿನ ಕಾರಣಕ್ಕಾಗಿಯೇ ಸಂಬಂಧಗಳಲ್ಲಿ ಬಿರುಕು ಮೂಡುವ ಉದಾಹರಣೆಗಳು ಅಸಂಖ್ಯ.
ಮಾತು ವೇಷವಾಗಬೇಕಾಗಿಲ್ಲ. ಮಾತು ಧ್ವೇಷವಾದರೆ ಅದು ಗಂಭೀರ ದೋಷ. ಈ ದೋಷವೇ ಮುಂದೆ ವಿಷವಾಗಿ ಪರಿಣಮಿಸಬಹುದು. ಹಾಗಾಗದಂತೆ ಮಾತಿನಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಹೀಗೆ ಜಾಗ್ರತೆ ವಹಿಸಿದರೆ ಜೀವನದಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.
ಮಾತಿನಲ್ಲಿ ದ್ವಂದ್ವ ಇರಬಾರದು, ವ್ಯಂಗ್ಯವೂ ಬೇಡ. ಅವಹೇಳನಕ್ಕೆ ಎಷ್ಟು ಮಾತ್ರಕ್ಕೂ ಅವಕಾಶ ಕೊಡಬಾರದು.
ಚಂದವಾಗಿ ಮಾತನಾಡಲು ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಆದರೆ ಯಾರ ಜೊತೆಗೇ ಇರಲಿ, ಯಾವ ಸಂದರ್ಭದಲ್ಲಿಯೇ ಆಗಲಿ, ಒಳ್ಳೆಯ ರೀತಿಯಲ್ಲಿ ಮಾತನಾಡಲು ಕಲಿಯುವುದು ಅತ್ಯಾವಶ್ಯಕ.
ಮಾತು ಒಂದು ಕಲೆ. ಅದನ್ನು ಕಲೆಗಾಗಿಯೇ ಉಳಿಸೋಣ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top