
ಮನೆಯಲ್ಲೇ ಉರಿದ ಬೆಂಕಿಯ ಜ್ವಾಲೆ :
ಎಎಸ್ಐ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

ಮಂಗಳೂರು : ಮನೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಯು ಎಎಸ್ಐ ಒಬ್ಬರನ್ನು ಮೈ ಪೂರ್ತಿ ಸುಟ್ಟು, ಗಂಭೀರ ಗಾಯಗಳನ್ನಾಗಿರಿಸಿದ ಘಟನೆ ನಗರದ ಕದ್ರಿ ವ್ಯಾಸನಗರದಲ್ಲಿ ನಡೆದಿದೆ.
ಪಾಂಡೇಶ್ವರ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ.ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದವರಾದ ಹರಿಶ್ಚಂದ್ರ ಅವರು ದಕ್ಷಿಣ ಕನ್ಬಡ, ಉಡುಪಿ ಜಿಲ್ಲೆಯಲ್ಲಿ ಕಳೆದ 27 ವರ್ಷಗಳಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಒಂದು ವರ್ಷದ ಹಿಂದೆ ಎಎಸ್ಐ ಆಗಿ ಭಡ್ತಿ ಪಡೆದಿದ್ದರು. ಹಿಂದೆ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯದಲ್ಲಿದ್ದ ಇವರು ಇತ್ತೀಚೆಗೆ ಪಾಂಡೇಶ್ವರ ಠಾಣೆಗೆ ಬಂದಿದ್ದರು.
ಮೂರು ವರ್ಷಗಳ ಹಿಂದೆ ಕದ್ರಿ ವ್ಯಾಸನಗರದಲ್ಲಿ ಹೊಸ ಮನೆ ಮಾಡಿ ನೆಲೆಸಿದ್ದರು.ಪತ್ನಿ ಮತ್ತು ಮಕ್ಕಳು ರಜೆಯ ಕಾರಣ ನಿನ್ನೆ ಊರಿಗೆ ತೆರಳಿದ್ದರು. ಇಂದು ಬೆಳಗ್ಗೆ ಸಹಜವಾಗಿಯೇ ಇದ್ದ ಹರಿಶ್ಚಂದ್ರ ಅವರು ದೇವರಿಗೆ ಹೂ ಇಡಲು ಹೊರಗಿನಿಂದ ಹೂ ಕೊಯ್ಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಬೆಳಗ್ಗೆ 10.30ರ ವೇಳೆಗೆ ಹಠಾತ್ ಮನೆಯ ಹೊರಗಡೆ ಎದುರು ಭಾಗದಲ್ಲಿ ಬೆಂಕಿ ಹತ್ತಿಕೊಂಡು ಬೊಬ್ಬೆ ಕೇಳಿದ್ದು ಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಮೈಯಲ್ಲಿದ್ದ ಅಂಗಿ ಸಹಿತ ಮೈ ಪೂರ್ತಿ ಸುಟ್ಟು ಹೋಗಿದೆ. ಕೂಡಲೇ ಮಾಹಿತಿ ಪಡೆದು ಕದ್ರಿ ಪೊಲೀಸರು ಮತ್ತು ಆಂಬುಲೆನ್ಸ್ ಬಂದಿದ್ದು ಅವರನ್ನು ಎ.ಜೆ.ಶೆಟ್ಟಿ ಆಸ್ಪತ್ರೆಗೆ ಸೇರಿಸಲಾಗಿದೆ.



ಪೆಟ್ರೋಲ್ ತುಂಬಿದ ಬಾಟಲ್ ಪತ್ತೆ?!
ಮನೆಯ ಹೊರಗಡೆ ಬಿಸ್ಲೇರಿ ನೀರಿನ ಬಾಟಲಿವೊಂದು ಪತ್ತೆಯಾಗಿದ್ದು, ಅದು ಅರ್ಧ ಸುಟ್ಟು ಹೋದ ಸ್ಥಿತಿಯಲ್ಲಿತ್ತು. ನೀರು ಹಾಕಿದ್ದರಿಂದ ಕರಟಿ ಹೋದ ಬಾಟಲಿ ಸಹಿತ ಅದರಲ್ಲಿ ಅರ್ಧದಷ್ಟು ಪೆಟ್ರೋಲ್ ಉಳಿದಿದೆ. ಪೆಟ್ರೋಲ್ ಸುರಿದುಕೊಂಡ ಸಂದರ್ಭದಲ್ಲಿ ಎದುರು ಮನೆಯ ತಗಡು ಶೀಟಿಗೂ ಬಿದ್ದಿದೆ. ಬೆಂಕಿ ಅದಕ್ಕೂ ತಗಲಿದ್ದು ಶೀಟ್ ಸಹಿತ ಮನೆಯ ಫೈಬರ್ ಪೈಪ್ ಸುಟ್ಟು ಹೋಗಿದೆ. ನೆಲಹಾಸಿನ ಮ್ಯಾಟ್ ಕೂಡ ಸುಟ್ಟು ಹೋಗಿದೆ. ಇದು ಅಕಸ್ಮಿಕವೇ ಅಥವಾ ಪೂರ್ವನಿರ್ಧಾರವೇ ? ಅನುವುದು ಕಾದುನೋಡಬೇಕಷ್ಟೇ.






































