ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಸಾವಿಗೆ ಇದುವರೆಗೆ ನ್ಯಾಯ ಸಿಗದೇ ಮರೀಚಿಕೆಯಾಗಿದೆ. ನ್ಯಾಯಕ್ಕಾಗಿ ರಾಜ್ಯ ವ್ಯಾಪ್ತಿಯಲ್ಲಿ ಹಲವು ಹಂತಗಳಲ್ಲಿ ಹೋರಾಟಗಳು ನಡೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗೆಂದ ಮಾತ್ರಕ್ಕೆ ಹೋರಾಟ ನಿಲ್ಲಿಸಿಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಇನ್ನಷ್ಟು ಹೋರಾಟ ನಡೆಸುವುದಕ್ಕೆ ಅವಕಾಶಗಳಿವೆ. ಚುನಾವಣೆಯಲ್ಲೂ ಹೋರಾಟಕ್ಕೆ ಹಣಿಯಾಗಿದ್ದು ಮಂಗಳೂರು ಲೋಕಸಭಾ ಕ್ಷೇತ್ರವೊಂದರಲ್ಲಿಯೇ ಸುಮಾರು 1.50 ಲಕ್ಷದಿಂದ 2 ಲಕ್ಷಕ್ಕೂ ಮಿಕ್ಕಿ ನೋಟಾ ಮತ ಬೀಳುವ ಸಾಧ್ಯತೆಯಿದೆ ಎಂದು ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ನೋಟಾ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧ್ಯಾರ್ಥಿನಿ ಸೌಜನ್ಯ ಸಾವಿಗೆ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ ಈಗಾಗಲೇ ಈ ಕುರಿತು ರಾಜ್ಯದಾದ್ಯಂತ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದೇವೆ, ಈ ಹೋರಾಟದ ಮುಂದಿನ ಭಾಗವಾಗಿ ಈ ಬಾರಿ ನೋಟಾ ಅಭಿಯಾನವನ್ನು ಆರಂಭಿಸಿದ್ದೇವೆ ಎಂದರು.
ಈಗಾಗಲೇ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾ ಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನೋಟಾ ಮತವನ್ನು ಅತೀ ಹೆಚ್ಚು ಚಲಾಯಿಸುವ ಮೂಲಕ ನಮಗೆ ನ್ಯಾಯ ಪಡೆದುಕೊಳ್ಳುತ್ತೇವೆ. ಎಲ್ಲಿ ಹೆಚ್ಚು ನೋಟಾ ಮತ ಚಲಾವಣೆಯಾಗುತ್ತೋ ಆ ಕ್ಷೇತ್ರ ದೇಶದ ಗಮನ ಸೆಳೆಯುತ್ತೆ. ಸಮಸ್ಯೆಗೆ ಪರಿಹಾರವೂ ದೊರೆಯುತ್ತದೆ ಎನ್ನುವ ವಿಶ್ವಾಸವೂ ಎಂದರು.
ಈ ಬಾರಿ ಸುಮಾರು 1.50 ಲಕ್ಷದಿಂದ 2 ಲಕ್ಷಕ್ಕೂ ಮಿಕ್ಕಿ ನೋಟಾ ಮತ ಬೀಳುವ ಸಾಧ್ಯತೆಯಿದೆ ಎಂದರು. ಅಲ್ಲದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಂದೂ ಮುಖಂಡರನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಹಿಂದೂಗಳ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮಹೇಶ್ ತಿಮರೋಡಿ ಆರೋಪಿಸಿದ್ದಾರೆ.







































