ಮಂಗಳೂರಿನಲ್ಲಿ ಐಷಾರಾಮಿ ಬೈಕ್ ಕಳ್ಳರ ಗ್ಯಾಂಗ್ ಪತ್ತೆ; ಮೂವರು ಅಪ್ರಾಪ್ತರು ಸೇರಿ 7 ಮಂದಿ ಬಂಧನ
RB NEWS
Bureau Report
ಮಂಗಳೂರಿನಲ್ಲಿ ಐಷಾರಾಮಿ ಬೈಕ್ ಕಳ್ಳರ ಗ್ಯಾಂಗ್ ಪತ್ತೆ; ಮೂವರು ಅಪ್ರಾಪ್ತರು ಸೇರಿ 7 ಮಂದಿ ಬಂಧನ
ಮಂಗಳೂರು: ನಗರದಲ್ಲಿ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಮಂಗಳೂರು ದಕ್ಷಿಣ (ಸೌತ್) ಠಾಣೆಯ ಪೊಲೀಸರು ಭೇದಿಸಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಆರು ಐಷಾರಾಮಿ ಬೈಕ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹4.50 ಲಕ್ಷ ಮೌಲ್ಯದ ಒಂಬತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿವರ ವಶಕ್ಕೆ ಪಡೆದವರಲ್ಲಿ ವಾಮಂಜೂರು ಮೂಡುಶೆಡ್ಡೆಯ ಶಿವನಗರ ನಿವಾಸಿ ಮೊಹಮ್ಮದ್ ಸಿಯಾಮ್ (19), ಬೈಕಂಪಾಡಿ ಜೋಕಟ್ಟೆ ನಿವಾಸಿ ಮೊಹಮ್ಮದ್ ನಾಸೀಫ್ ಅಲಿಯಾಸ್ ನಸೀಫ್ (19), ವಾಮಂಜೂರು ಮೂಡುಶೆಡ್ಡೆ ಶಿವನಗರದ ಮೊಹಮ್ಮದ್ ರಾಹೀಲ್ (18) ಹಾಗೂ ಮಂಗಳೂರು ತಿರುವೈಲಿನ ಕುಟ್ಟಿಪಲ್ಕೆ ನಿವಾಸಿ ನಿಖಿಲ್ (18) ಸೇರಿದ್ದಾರೆ. ಉಳಿದ ಮೂವರು ಅಪ್ರಾಪ್ತ ಬಾಲಕರಾಗಿದ್ದಾರೆ. ವೆಲೆನ್ಸಿಯಾ, ಜಪ್ಪು ಸೇರಿದಂತೆ ವಿವಿಧೆಡೆ ಬೈಕ್ ಕಳವು ಆರೋಪಿಗಳ ಗ್ಯಾಂಗ್ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಪ್ರದೇಶದ ಕೆಟಿಎಂ ಡ್ಯೂಕ್ ವಾಹನ, ಜಪ್ಪು ಮಾರ್ಕೆಟ್ನ ಯಮಹಾ ಎಫ್ಝಡ್, ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ಬಜಾಜ್ ಡಿಸ್ಕವರ್ ಹಾಗೂ ಹೊಯ್ಗೆಬಜಾರ್ನ ಅಪಾರ್ಟ್ಮೆಂಟ್ ಕೆಳಭಾಗದಲ್ಲಿದ್ದ ಕೆಟಿಎಂ ಡ್ಯೂಕ್ ಬೈಕ್ ಸೇರಿದಂತೆ ಒಟ್ಟು ನಾಲ್ಕು ದ್ವಿಚಕ್ರ ವಾಹನಗಳನ್ನು ಕಳವು ಮಾಡಿತ್ತು. ಇದಲ್ಲದೆ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆ ಬಳಿಯಿಂದ ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಕುಟ್ಟಾರ್ ಪಂಡಿತ್ ಹೌಸ್ ಬಳಿಯಿಂದ ಯಮಹಾ ಎಫ್ಝಡ್ ಬೈಕ್ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ನಾಲ್ಕು ಹಾಗೂ ಉಳ್ಳಾಲ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಐಷಾರಾಮಿ ಜೀವನಕ್ಕಾಗಿ ಕಳ್ಳತನ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸರಗಳ್ಳತನ ಸೇರಿದಂತೆ ಇತರ ಅಪರಾಧ ಕೃತ್ಯಗಳಲ್ಲಿಯೂ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದರೆಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕಳವು ಮಾಡಿದ ಬೆಲೆಬಾಳುವ ಬೈಕ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ತಿಳಿದುಬಂದಿದೆ. ವಶಕ್ಕೆ ಪಡೆದವರಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸ್ ತಂಡದ ಕಾರ್ಯಾಚರಣೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಮಾರುತಿ, ನವೀನ್ ಹಾಗೂ ರೇಖಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಲತೇಶ್ ನಾಯ್ಕ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್. ಹಾಗೂ ರೇಣುಕಾ ಎಂ. ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬೈಕ್ ಕಳವು ಪ್ರಕರಣಗಳನ್ನು ಭೇದಿಸಿದೆ.