ಬೈಲೂರು ಉಮಿಕಲ್ ಬೆಟ್ಟದ ಎತ್ತರದಿಂದಲೇ ಪ್ರಪಾತಕ್ಕೆ ಬಿತ್ತೇ ಕಾರ್ಕಳ ಕಾಂಗ್ರೆಸ್?
ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಹಣ ದುರ್ಬಳಕೆಯಾಗಿದೆ ಎನ್ನುವ ಒಂದೇ ಒಂದು ಕಾರಣ ಹಾಗೂ ಪರಶುರಾಮ ಮೂರ್ತಿಯನ್ನು ರಚಿಸುವಲ್ಲಿ ಕಂಚಿಗೆ ಬದಲು ಅರ್ಧ ಶರೀರಕ್ಕೆ ಪಿ. ಒ. ಪಿ. ಸಿಮೆಂಟ್ ಬಳಸಿದ್ದಾರೆ ಎನ್ನುವ ಗುರುತರವಾದ ಆರೋಪಗಳು ರಾಜ್ಯದ ಗಮನ ಸೆಳೆಸುವಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕೆಲಸ ಮಾಡಿದೆ.
ಜನಪ್ರತಿನಿಧಿ ಮತ್ತು ಸಾರ್ವಜನಿಕ ವ್ಯಕ್ತಿಗಳ ನಡುವಿನ ವಿರಸ ಮಾತ್ರವಷ್ಟೇ ಈ ಪ್ರಕರಣವನ್ನು ತುಂಬಾ ಗೋಜಲು ಮಾಡಿತು ವಿನಾ ,ಯೋಗ್ಯ ಚಿಂತನೆಯೊಂದು ಸರಿಯಾಗಿ ಸದ್ಬಳಕೆಯಾಗುತ್ತಿದ್ದರೆ ಕಾರ್ಕಳದ ಕಾಂಗ್ರೆಸ್ಸಿನ ರಾಜಕಾರಣಿಗಳು ತುಂಬಾ ಬುದ್ಧಿವಂತರು ಹಾಗೂ ವೈಚಾರಿಕ ಮನೋಭಾವವುಳ್ಳವರು ಎನ್ನುವ ಗತ ಹೆಗ್ಗಳಿಕೆಯು ಯಥಾಪ್ರಕಾರ ಮುಂದುವರಿಯುತ್ತಿತ್ತೇನೊ!
ಅಗೆಯುವ ರಸ್ತೆಯಿಂದ ಹಿಡಿದು ರೋಗಿಗೆ ಕೊಡುವ ಔಷಧಿ ತನಕವೂ ಭ್ರಷ್ಟಾಚಾರ ಇದೆಯೆನ್ನುವ ಸತ್ಯದ ಈ ಭ್ರಷ್ಟ ಸಮಾಜದಲ್ಲಿ ಪ್ರಾಮಾಣಿಕರು ಮತ್ತು ಪ್ರಾಮಾಣಿಕತೆಯ ಕುರಿತು ಮಾತನ್ನಾಡುವ ನೈತಿಕತೆ ಉಳ್ಳವರು ಯಾರೆನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಾಂಗ್ರೆಸ್ ನಾಯಕರೊಬ್ಬರ ಕುರಿತಾದ ಎರಡು ವಿಡಿಯೋ ಕ್ಲಿಪ್ಪಿಂಗ್ಸ್ ಗಮನಿಸಿದಾಗ ಹೀಗೆ ಬರೆಯಬೇಕೆನಿಸಿತು. ವೀರಪ್ಪ ಮೈೂಲಿ,ಗೋಪಾಲ ಭಂಡಾರಿ, ಕೆ. ಸದಾನಂದ ಕಾಮತ್ ಪ್ರಮುಖರ ನೇತೃತ್ವದಲ್ಲಿ ಗಟ್ಟಿಯಾಗಿ ಬೇರೂರಿ ಆಲದ ಮರದಂತೆಯೆ ಬೆಳೆದ ಕಾರ್ಕಳದ ಕಾಂಗ್ರೆಸ್ ಪಕ್ಷವು ಯಾವ ರೀತಿಯಲ್ಲಿ ಬುಡಮೇಲಾಗಿ ಬಿದ್ದುಬಿಟ್ಟಿತು ಅನ್ನುವ ವಿಷಾದವೇ ಈ ಬರೆಹದ ಸಾರಾಂಶ.
ವ್ಯಕ್ತಿಗತ ದ್ವೇಷವನ್ನು ಸಾರ್ವಜನೀಕರಣಗೊಳಿಸುವ ಪ್ರಯತ್ನವಾಗಿ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕನ್ನು ಬಳಸಿಕೊಂಡು , ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ ಎಂದು ಹೇಳುತ್ತ ಆ ನಿರ್ಮಾಣವನ್ನೇ ನಿರ್ನಾಮ ಮಾಡಲು ಮುಂದಾಗಿರುವುದು ಕಾರ್ಕಳ ಕಾಂಗ್ರೆಸ್ಸಿನ ಭವಿಷ್ಯಕ್ಕೇ ದೊಡ್ಡ ಅಪಾಯವೆನ್ನಬೇಕು.
ಅಲ್ಲಿ ಎಷ್ಟು ಹಣ ಖರ್ಚಾಗಿದೆ,ಎಷ್ಟು ಅನುದಾನ ಮಂಜೂರಾಗಿದೆ ಇತ್ಯಾದಿಯಾಗಿ ಸ್ಪಷ್ಟ ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೇ ಒಪ್ಪಿಸಿ ಮನದಟ್ಟ ಮಾಡಲಿಲ್ಲ ಎನ್ನುವುದಕ್ಕೆ ಅವರು ಸದನದಲ್ಲಿ ತಪ್ಪಾಗಿ ಉಲ್ಲೇಖಿಸಿರುವುದೇ ಸಾಕ್ಷಿ. ಸಾರ್ವಜನಿಕ ಹಣದ ದುರುಪಯೋಗವಾಗಿದ್ದರ ಬಗ್ಯೆ ರಾಜ್ಯದ ಮುಖ್ಯಮಂತ್ರಿಯಾದವರು ಅಸಮಾಧಾನ ವ್ಯಕ್ತಪಡಿಸುವುದು ಸಹಜವೇ ಆಗಿದೆ. ಆ ಥೀಮ್ ಪಾರ್ಕ್ ಸಮರ್ಪಕವಾಗಿ ಅಭಿವೃದ್ಧಿಯಾಗಬೇಕು ಎನ್ನುವ ಮಾತನ್ನೂ ಸಿದ್ಧರಾಮಯ್ಯ ಹೇಳಿರುವುದನ್ನು ಕೂಡ ಕಾರ್ಕಳದ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಗಮನಿಸಬೇಕಾಗಿದೆ.

ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಹಂತದಲ್ಲಿ ಯಾವ್ಯಾವ ಹಂತದಲ್ಲಿ ಎಷ್ಟು ಮೊತ್ತಗಳು ಬಿಡುಗಡೆಯಾಗಿ ಖರ್ಚಾಗಿವೆ ಎನ್ನುವುದನ್ನೇ ಸರಿಯಾಗಿ ಬಹಿರಂಗಪಡಿಸಲಿಕ್ಕೆ ಸಾಧ್ಯವಾಗದೆ ಗಾಳಿಯಲ್ಲಿ ಗುದ್ದಾಡುವುದರೊಂದಿಗೆ ಕಾಂಗ್ರೆಸ್ ಪಕ್ಷವು ತನ್ನ ವರ್ಚಸ್ಸಿಗೇ ಕಳಂಕ ಹಚ್ಚಿಸಿಕೊಂಡಿರುವುದಂತೂ ಸತ್ಯ ವಿಚಾರ. ಪ್ರತೀ ಬಾರಿ ಜಿಲ್ಲೆಗೆ ಬಂದಾಗಲೂ ಪಾರ್ಕಿನ ಕುರಿತು ಧನಾತ್ಮಕವಾಗಿಯೇ ಮಾತನ್ನಾಡುವ ಜಿಲ್ಲಾ ಉಸ್ತುವಾರಿ ಸಚಿವೆಗೆ ತನ್ನ ಪಕ್ಷದವರ ಕೆಟ್ಟ ಹಠ ಧೋರಣೆಯೇನೆಂಬುದು ಮನದಟ್ಟಾದಂತಿದೆ.
ಬಹಳ ಹಿಂದುಳಿದ ಗ್ರಾಮ ,ಪ್ರದೇಶಗಳನ್ನೆ ತುಂಬಿಕೊಂಡಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಭೌಗೋಳಿಕ ಚಿತ್ರಣವನ್ನು ಲಾಗಾಯ್ತಿನಿಂದಲೂ ಸರಕಾರಕ್ಕೆ ತೋರಿಸಿಕೊಟ್ಟವರೇ ಹೆಚ್. ಗೋಪಾಲ ಭಂಡಾರಿಯವರು ,ತನ್ನ ನಿರಂತರ ಓಡಾಟದೊಂದಿಗೆ . ಮೈೂಲಿಯವರು ಶಾಸಕನಾಗಿದ್ದರೂ ನೆಂಟನ ಹಾಗೆ ಕ್ಷೇತ್ರಕ್ಕೆ ಬರುತ್ತಿದ್ದರು ವಿನಾ ಕ್ಷೇತ್ರದ ಪ್ರತಿಯೊಂದು ಹುಲ್ಲು ಕಡ್ಡಿಯ ವಿವರಣೆ,ವ್ಯತ್ಯಾಸವನ್ನೂ ಭಂಡಾರಿಯವರೇ ಒಪ್ಪಿಸುತ್ತಿದ್ದುದು.
ಏನೇ ಆಗಿರಲಿ ಕ್ಷೇತ್ರದ ಅಭ್ಯುದಯಕ್ಕೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಅಪಾರವಾದುದು. ಪ್ರತಿ ಮೂಲೆಯಿಂದ ಮೂಲೆಗೂ ರಸ್ತೆ ನಿರ್ಮಾಣ,ಸರಕಾರಿ ಶಾಲೆ,ಹೈಸ್ಕೂಲ್ ತೆರೆಸಿದ ವೀರಪ್ಪ ಮೈೂಲಿಯ ಚಿಂತನೆಗೆ ಸಂಘಟಿತ ಕಾಂಗ್ರೆಸ್ ಪಕ್ಷವೇ ನೀರುಣಿಸಿದ್ದರಿಂದಲೇ ಕಾರ್ಕಳದ ಜನತೆ ಆ ಪಕ್ಷವನ್ನು ತುಂಬಾನೇ ಪ್ರೀತಿಸುತ್ತಿದೆ.
ಮೈೂಲಿ,ಭಂಡಾರಿಯವರ ಚಿಂತನೆಯ ಘಮಲುಗಳನ್ನೇ ಆಘ್ರಾಣಿಸಿಕೊಂಡು ಕೆಲಸ ಮಾಡಿದ್ದು ಶಾಸಕ,ಮಾಜಿ ಸಚಿವ ಸುನಿಲ್ ಕುಮಾರ್ ಅವರ ಬುದ್ಧಿವಂತಿಕೆ ಮತ್ತು ಬಹುಮುಖದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದಿನವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗವನ್ನು ಅಗೆದು ಹಾಳು ಮಾಡದೆ ಅದನ್ನು ವಿಸ್ತರಿಸುವುದು ಹಾಗೂ ಮುಂದುವರಿಸುವುದೇ ಕಾರ್ಕಳದ ನಿಜವಾದ ಅಭಿವೃದ್ಧಿ ಎಂದು ಅನುದಾನಗಳನ್ನು ತಂದು ಕ್ಷೇತ್ರದ ಉದ್ದಗಲಕ್ಕೂ ಹಬ್ಬಿಸಿದ , ಶಾಶ್ವತ ಕಾಮಗಾರಿಗಳಿಗೆ ಖುಶಿಗೊಂಡು ಜನತೆ ಶಾಸಕನಿಗೆ ತಲೆಬಾಗುತ್ತಿರುವಾಗ ಬಡವರ ಪಕ್ಷವಾದ ಕಾಂಗ್ರೆಸ್ಸು ಹೊಸ ಗಲಾಟೆ ಮಾಡಿ ನಾಗರಿಕರ ದಿಕ್ಕು ತಪ್ಪಿಸುವ, ವಾಸ್ತವ ಕಲ್ಯಾಣವನ್ನು ಕಡೆಗಣಿಸುವ ಕೆಲಸ ಮಾಡಲಿಕ್ಕೆ ಮುಂದಾಗಿದ್ದು ಬುದ್ಧಿ ಶೂನ್ಯತೆಗೆ ಸಾಕ್ಷಿಯಾದಂತಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಇನ್ನೊಬ್ಬ ಹೆಚ್. ಗೋಪಾಲ ಭಂಡಾರಿಯನ್ನು ಹುಡುಕಿ ತರುವಂತಹ ಯೋಗ್ಯ ಕೆಲಸವನ್ನು ಕಾರ್ಕಳ ಕಾಂಗ್ರೆಸ್ ಮಾಡಬೇಕಾಗಿದೆ. ಬದಲಿಗೆ ಪದಾಧಿಕಾರಿಗಳು ಅನಗತ್ಯ ವಿಚಾರಕ್ಕೆ ಕೊಂಬು ಕಹಳೆಯ ಗದ್ದಲ ಸೇರಿಸಿ ಪಕ್ಷದ ಅಸ್ತಿತ್ವಕ್ಕೇ ಮುಳುವಾಗುತ್ತಿದ್ದಾರೆ.
ಕಾರ್ಕಳ ಕ್ಷೇತ್ರದ ಉದ್ದಗಲದ ಯಾವ ರಸ್ತೆಯ ಹೊಂಡ,ಶಾಲೆಯ ಅಧ್ಯಾಪಕರ ಕೊರತೆ,ಪೊಲೀಸ್ ದೌರ್ಜನ್ಯ,ಮಹಿಳೆಯರಿಗೆ ಜೀವ ಭಯ,ಗೋಡೆಯಿಲ್ಲದ ತೆರೆದ ಬಾವಿ,ಸಂಕ,ಸೇತುವೆಯಿಲ್ಲದ ತೋಡು,ನದಿಯ ಬಗ್ಯೆ ಹುಡುಕಿ ಕ್ಷೇತ್ರದ ಶಾಸಕನೆದುರಿಗೇ ಮೈದಾನದಲ್ಲಿ ಬಹಿರಂಗವಾಗಿ ಪರಿಹಾರ ಕೇಳಬೇಕಾದ ಕಾಂಗ್ರೆಸ್ ಪಕ್ಷವು ಪರಶುರಾಮ ಥೀಮ್ ಪಾರ್ಕ್ ವಿಷಯದುರುಳಿಗೇ ಕೊರಳೊಡ್ಡಿ ನೇತಾಡುವ ಆಸಕ್ತಿಗೆ ಮಾರುಹೋಗಿರುವುದು ವಿಷಾದಕರ ಸಂಗತಿ. ರಾಷ್ಟ್ರೀಯ ಪಕ್ಷವೊಂದಕ್ಕೆ ಕ್ಷೇತ್ರದಲ್ಲಿ ಮಾಡುವುದಕ್ಕೆ ಯಾವ ಕೆಲಸವೂ ಇಲ್ಲವಾದ ದುಸ್ಥಿತಿ!

ಶಾಸಕ,ಮಾಜಿ ಸಚಿವ ಸುನಿಲ್ ಕುಮಾರ್ ಅವರಿಗೂ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರಿಗೂ ಮಧ್ಯೆ ಇರುವ ವ್ಯಾವಹಾರಿಕ ಅಥವಾ ರಾಜಕೀಯ ಬಿಕ್ಕಟ್ಟು ಅದು ಸಾರ್ವಜನಿಕ ಹಿತಾಸಕ್ತಿ ದೂರು (ಪಿ. ಐ. ಎಲ್)ಅರ್ಜಿಯ ಮೂಲಕವೇ ಬಗೆಹರಿದುಕೊಳ್ಳುತ್ತ ಇಬ್ಬರೂ ಹೊಡೆದಾಡಿಕೊಳ್ಳಬೇಕಾಗಿತ್ತೇ ಹೊರತು ಆ ಸಂಗತಿಯನ್ನು ಕಾಂಗ್ರೆಸ್ ಪಕ್ಷದ ಮೂಲಕ ಹೀಯಾಳಿಸುವುದಕ್ಕೋ, ಸಾಮಾಜಿಕ ಉದ್ದೇಶಿತ ಹೋರಾಟ ಎಂದು ಪರಿವರ್ತಿಸುವುದಕ್ಕೋ ಮುಂದಾಗಿರುವ ಕಾರ್ಕಳದ ಕಾಂಗ್ರೆಸ್ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿಚಾರ ಮಟ್ಟ ಪ್ರಶ್ನಾರ್ಹವಾಗಿದೆ. ಇನ್ನಾದರೂ ತಮ್ಮ ಬುದ್ಧಿಗೆ ಅರ ಹಿಡಿಯಬೇಕಾಗಿದೆ.
ಕಾರ್ಕಳದ ಬ್ಲಾಕ್ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಗತ ವೈಭವವನ್ನು ಮತ್ತೆ ಬೆಳೆಸುವ ಸಾಹಸಕ್ಕೆ ಇಳಿಯುವ ಆವಶ್ಯಕತೆಯಿದೆ. ಮೇಲ್ವರ್ಗದವರ ,ಬಂಡವಾಳ ಶಾಹಿಗಳವರ ಬೆಂಬಲದ ಪಕ್ಷವಾಗಿರುವ ಬಿಜೆಪಿಯೊಂದಿಗೆ ಈ ಕ್ಷಣದವರೆಗೂ ,ಮುಂದೆಯೂ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಳ್ಳದೆ ಇರುವ ವೀರಪ್ಪ ಮೈೂಲಿಯವರು ನಿರಂತರ ಆರು ಬಾರಿ ಪ್ರತಿನಿಧಿಯಾಗಲು ಬೆಂಬಲಿಸಿದ್ದ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಪಕ್ಷವು ಬಂಡವಾಳಶಾಹಿ ಧೋರಣೆಯವರ ಕಪಿ ಮುಷ್ಠಿಯಿಂದ ಹೊರಬರಬೇಕಾಗಿದೆ. ಪರಶುರಾಮ ಥೀಮ್ ಪಾರ್ಕ್ ಮುಂದಿಟ್ಟುಕೊಂಡು ಕಿಚಾಯಿಸುವುದಕ್ಕಿಂತ ತಮಗೆ ಅಸ್ತಿತ್ವ ಕೊಟ್ಟಿರುವ ಪಕ್ಷವನ್ನು ಬಚಾವು ಮಾಡುವ ಶಪಥ ಹಾಕಬೇಕಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿಗೆ ಇನ್ನೊಬ್ಬ ಹೆಚ್. ಗೋಪಾಲ ಭಂಡಾರಿ ಸಿಗದ ಹೊರತು ಪಕ್ಷಕ್ಕೆ ಏಳಿಗೆಯಿಲ್ಲವಾಗಲಿದೆ.
- –ವಿ. ಕೆ. ವಾಲ್ಪಾಡಿ
(ಲೇಖಕರ ವೈಯಕ್ತಿಕ ಅಭಿಪ್ರಾಯವೇ ಹೊರತು ಆರ್. ಬಿ. ನ್ಯೂಸ್ ನದ್ದಾಗಿರುವುದಿಲ್ಲ)





















