ಬಾಂಗ್ಲಾದೇಶದ ಪ್ರಜೆ ಎಂದು ಭಾರತೀಯ ನಾಗರಿಕನ ಕೊಲೆಗೆ ಯತ್ನ

Picture of RB NEWS

RB NEWS

Bureau Report

ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ ಕೂಳೂರು ಗ್ರಾಮದ ನಿವಾಸಿಗಳಾದ ರತೀಶ್ ದಾಸ್ ಅಲಿಯಾಸ್ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಕರಣದ ವಿವರ:
ಜನವರಿ 11 ರಂದು ಸಂಜೆ ಸುಮಾರು 6.05 ಕ್ಕೆ ನಾಲ್ವರು ಆರೋಪಿಗಳು ಜಾರ್ಖಂಡ್‌ನ ವಲಸೆ ಕಾರ್ಮಿಕ ದಿಲ್ಜಾನ್ ಅನ್ಸಾರಿ ಎಂಬುವವರನ್ನು ತಡೆದಿದ್ದಾರೆ. ಈ ವೇಳೆ ಅವರು ಹಿಂದೂವೋ ಅಥವಾ ಮುಸ್ಲಿಮನೋ ಎಂದು ಪ್ರಶ್ನಿಸಿ ಕೋಮು ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆತ ಬಾಂಗ್ಲಾದೇಶಿ ಎಂದು ಆರೋಪಿಸಿ, ಅಶ್ಲೀಲವಾಗಿ ಬೈದು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ, ಜನವರಿ 12 ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ವಿವಿಧ ಸೆಕ್ಷನ್‌ಗಳಡಿ (126(2), 352, 351(3), 353, 109, 118(1) ಮತ್ತು 3(5)) ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೋಮವಾರ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top