ಪತ್ರಿಕಾ ಏಜೆಂಟ್ ಕಾರ್ಕಳ ಗಣಪತಿ ಭಟ್ ನಿಧನ
ಒಬ್ಬ ವ್ಯಕ್ತಿ ಕೇಳಿದ್ದರು,
ಪೇಪರ್ ಮಾರಾಟ ಮಾಡಿಯೇ ಭಟ್ರು ಮನೆ ಕಟ್ಟಿದರಲ್ವಾ…ಭಯಂಕರ!
ಆ ಮಾತಿನಲ್ಲಿ ವಿಭಿನ್ನ ಧ್ವನಿಯಿತ್ತು,ಇರಲಿ.
ಬ್ರಾಹ್ಮೀ ಮುಹೂರ್ತಕ್ಕೂ ಮೊದಲು ಕಾರ್ಕಳ ಬಸ್ಟೆೇಂಡಿಗೆ ಬಂದು ಪತ್ರಿಕೆಗಳ ಮೂಟೆಯನ್ನು ತೆಗೆದುಕೊಳ್ಳುವುದು ಕ್ಷುಲ್ಲಕ ಮಾತಲ್ಲ.ಹಾಗೆ ಬಂದು ದುಡಿಮೆ ಮಾಡಿದ್ದರಿಂದ ಭಟ್ರು ಮನೆಯ ಮಾಡಿಗೆ ಸಿಮೆಂಟಿನ ಮುಚ್ಚಿಗೆ ಮಾಡಿಸಿದರು ಅಷ್ಟೆ. ಆ ವ್ಯಕ್ತಿಗೆ ಕೊಟ್ಟ ಪ್ರತ್ಯುತ್ತರ.
ಮಧ್ಯರಾತ್ರಿಯ ಮೂರು ಘಂಟೆ ವೇಳೆಗೆ ಕಾರ್ಕಳ ಬಸ್ ನಿಲ್ದಾಣಕ್ಕೆ ಬಂದು ಪತ್ರಿಕೆಗಳ ಕಟ್ಟು ತಗೊಂಡು ಅವನ್ನೆಲ್ಲ ಬಿಚ್ಚಿಟ್ಟು ವಿಂಗಡನೆ ಮಾಡಿ, ಯಾವ ಕಡೆಗೆ ಯಾವ ಪತ್ರಿಕೆ ಎಷ್ಟು ಎಂದು ಲೆಕ್ಕ ಮಾಡಿ ಬೇರೆಬೇರೆ ಇಡುವುದು.
ಬೆಳಿಗ್ಗೆ ಎಂಟು ಘಂಟೆಯ ತನಕ ಅದೇ ಬಸ್ ಸ್ಟೇಂಡಿನಲ್ಲಿರುವ ಆದಿರಾಜ ಅಜಿಲರವರ ಗೂಡಂಗಡಿ ಮುಂದೆ ಪತ್ರಿಕಾ ಏಜೆಂಟನಾಗಿ ಕುಳಿತುಕೊಳ್ಳುತ್ತಿದ್ದರು ಆ ಗಣಪತಿ ಭಟ್ ಮಾಮ್.( ಜಿ. ಎಸ್. ಬಿ)
ಅದೇನು ಸೆಖೆಗಾಲದಲ್ಲಿ ಮಾತ್ರ ,ಮನೆಯಲ್ಲಿ ನಿದ್ದೆ ಬರುವುದಿಲ್ಲ ಎಂದು ಎದ್ದು ಬಸ್ ನಿಲ್ದಾಣಕ್ಕೆ ಬರುವುದಲ್ಲ, ಎಲ್ಲ ಕಾಲದಲ್ಲೂ ಬರಲೇಬೇಕು. ಮಳೆಗಾಲದಲ್ಲಿ ಕಾರ್ಕಳದಲ್ಲಿ ಅದೆಂಥ ಮಳೆ ಗುಡುಗು ಇರುತ್ತಿತ್ತು ಎನ್ನುವುದನ್ನು ಬರೆದು ಅರ್ಥ ಮಾಡಿಸಲಿಕ್ಕಾಗುವುದಿಲ್ಲ. ಆ ಮಳೆ ಗಾಳಿಗೂ ಪತ್ರಿಕೆ ಬಂಡಲನ್ನು ಸಂಗ್ರಹಿಸಿ ಅದರ ವಿಂಗಡಣೆ ಮಾಡಿಡಬೇಕು.ಆ ಗೂಡಂಗಡಿ ಬಾಗಿಲಿನ ಎದುರಿಗಿರುವ ಒಂದಡಿ ಅಗಲದ ಜಗಲಿಯಲ್ಲೇ ಇಡುವುದು,ಮಿಕ್ಕಿದ್ದನ್ನು ತನ್ನ ಮೊಪೆಡ್ ನ ಸೀಟು,ಕ್ಯಾರಿಯರಲ್ಲಿಡುವುದು.
ಬೆಳಿಗ್ಗೆ ಆರೂವರೆ ಏಳು ಘಂಟೆಯಷ್ಟೊತ್ತಿಗೆ ಪತ್ರಿಕೆ ತಲುಪಿಸುವ ಹುಡುಗರು,ಯುವಕರು ಹಾಜರಾಗುತ್ತಾರೆ. ಅವರಲ್ಲಿ ಅವರವರ ಪಾಲಿನ ಪತ್ರಿಕೆ ಕೊಟ್ಟು ಕಳುಹಿಸುವ ಕೆಲಸವಾಗುತ್ತದೆ.
ಅದೆಲ್ಲ ಮುಗಿದು ನಂತರ ಬರೆಯುವುದಕ್ಕೆ ಶುರು!
ಅವರ ಮೊಪೆಡ್ ಕ್ಯಾರಿಯರಲ್ಲಿ ಒಂದು ಪೆಟ್ಟಿಗೆ ಕೂರಿಸಲಾಗಿತ್ತು.ಅದು ಹಾಲು ಸರಬರಾಜು ಮಾಡುವುದಕ್ಕೆ.ಅದುವೇ ಮೇಜು!
ಆ ರಣ ರಾತ್ರಿಯಲ್ಲಿ ಬಸ್ ನಿಲ್ದಾಣದಲ್ಲಿ ಒಬ್ಬರೇ ಒಂಟಿಯಾಗಿ ಕುಳಿತು ಬೆಳಿಗ್ಗೆ ಮಾಡುವ ,ಆ ನಂತರವೂ ಎಂಟು ಘಂಟೆ ತನಕ ಅಲ್ಲೇ ಇದ್ದು ಮತ್ತೆ ಅಲ್ಲಿಂದ ಹೊರಟರೆ ಹನ್ನೊಂದು ಘಂಟೆಯಷ್ಟೊತ್ತಿಗೆ ಅದೇ ಅಂಗಡಿಯೆದುರು ಬಂದು ಅವತಾರ ಮಾಡುವುದಕ್ಕಿದೆ! ಅದೇನಿಲ್ಲ ಬಾಕಿ ಪೇಪರುಗಳ ವಿಚಾರಣೆ,ಅಲ್ಲಿಗೆ ಬರುವ ಜನರೊಂದಿಗೆ ಹರಟೆ ಅಷ್ಟೆ. ಅವರು ಅಲ್ಲಿ ಇದ್ದಾರೆ ಅಂತ ಎಲ್ಲರಿಗೂ ಗೊತ್ತಾಗುವುದು ಅವರ ಮಾತಿನ ಸ್ವರದಿಂದಾಗಿ.ಒಟ್ಟು ಗಮ್ಮತ್ತಲ್ಲೇ ಮಾತು,ಗದರಿಸುವಿಕೆ ಎಲ್ಲವೂ!
1948 ರಲ್ಲಿ ಜನಿಸಿರುವ ಗಣಪತಿ ಭಟ್ ಅವರು ಮೊದಲಿಗೆ ಕೆಲಸಕ್ಕೆ ಸೇರಿದ್ದು ಒಂದು ಪ್ಲಾಸ್ಟಿಕ್ ಹಗ್ಗ ತಯಾರಿಸುವ ಫ್ಯಾಕ್ಟರಿಯಲ್ಲಿ.ಅದಕ್ಕೆ ಆನೆಕೆರೆ ಪೈ ಇಂಡಸ್ಟ್ರೀಸ್ ಎಂದೇ ಪ್ರಚಾರ ಹೆಸರು. ಅಲ್ಲಿ ಅವರು ಬಹಳ ಶ್ರದ್ದೆಯಿಂದ ಕೆಲಸ ಮಾಡುತ್ತ ಇಡೀ ಜವಾಬ್ದಾರಿಯನ್ನೆ ಹೊರುವಷ್ಟು ಕೆಲಸ ಮಾಡಿದರು. ನಂತರ ಸೇರಿಕೊಂಡ ಇಂಜಿನಿಯರುಗಳಿಗೂ ಅವರನ್ನು ಹಿಮ್ಮೆಟ್ಟಿಸಲಾಗಲಿಲ್ಲ.
ಅಚ್ಚು ಕೊಡುತ್ತೇನೆ ಬೆಲ್ಲ ಕೊಡುತ್ತೇನೆ ಎಂದು ನಯವಾಗಿ ಬೆನ್ನು ಸವರಿದ ಅದರ ಮಾಲೀಕನ ಮೋಸದ ನಡೆ ಗೊತ್ತಾಗಿ ಕೆಲಸ ಬಿಡಬೇಕಾಯಿತು.ಆದರೆ ಭಟ್ಟರಿಗೆ ಕೊಡಬೇಕಾದದ್ದನ್ನೂ ಕೊಡದೆ ಅಲ್ಲಿದ್ದ ,ಅದೇ ಕಂಪನಿ ತಯಾರಿಸುತ್ತಿದ್ದ ನೈಲಾನ್ ಹಗ್ಗವನ್ನೇ ತೋರಿಸಿದರು.
ಗಣಪತಿ ಭಟ್ಟರು ಕುತ್ತಿಗೆಗೆ ನೈಲಾನ್ ಹಗ್ಗ ಬಿಗಿದುಕೊಳ್ಳದೆ ಬೇರೆ ಏನಾದರೂ ಸಾಧಿಸುವುದಕ್ಕೆ ಮುಂದಾದರು.ಹಾಲು ಮಾರುವುದಕ್ಕೆ ಕಾಲು ಮುಂದಿಟ್ಟ ಭಟ್ಟರಿಗೆ ಗಿರಾಕಿಗಳ ಕೂಡಾ ಸಾಕಷ್ಟು ದೊರಕುತ್ತಿದ್ದಂತೆ ಒಂದಿಬ್ಬರು ಗಿರಾಕಿಗಳಿಗೆ ಪೇಟೆಯಿಂದ ಉದಯವಾಣಿ ದಿನ ಪತ್ರಿಕೆಯನ್ನೂ ಕೊಂಡೊಯ್ಯುವ ಕೆಲಸ ಮಾಡಿದರು. ತಿಂಗಳಾದರೂ ಒಬ್ಬ ಮಾತ್ರ ಗಿರಾಕಿ! ಅ ನಂತರ ಇಬ್ಬರಾದರು ಮೂವರಾದರು.
ಕಾರ್ಕಳ ಪೇಟೆಯಲ್ಲಿ ಶೆಣೈ ಸ್ಟಾಲ್ ನವರು ಪ್ರಮುಖ ಏಜೆಂಟರಾಗಿರುವುದರಿಂದ ಮತ್ತೊಬ್ಬನಿಗೆ ನೇರವಾಗಿ ಏಜೆನ್ಸಿ ಕೊಡುವುದಿಲ್ಲವಾಗಿತ್ತು. ಭಟ್ಟರು ಅತ್ತೂರಿನ ವಿಳಾಸದಲ್ಲಿ ಏಜೆನ್ಸಿ ಪಡೆದು ಪತ್ರಿಕೆ ವಿತರಿಸ ತೊಡಗಿದರು.
ಭಟ್ಟರಿಗೆ ಉದಯವಾಣಿ ಗಿರಾಕಿಗಳ ಎಷ್ಟು ಹೆಚ್ಚಾಯಿತೆಂದರೆ ಶೆಣೈಯವರು ,ಮಣಿಪಾಲಕ್ಕೆ ದೂರು ಕೊಡುವಲ್ಲಿವರೆಗೆ ಮುಟ್ಟಿತು. ಅಲ್ಲಿ ಮುಖಾಮುಖಿಯಾಗಿ ಮಾತಾಡಿದ ಭಟ್ಟರು, ಪತ್ರಿಕೆ ಯಾರ ಕೈಕೆಳಗೆ ಜಾಸ್ತಿ ಮಾರಾಟವಾಗುತ್ತದೆ ತಿಳಿಯಿರಿ,ಸಾಧ್ಯವಿದ್ದರೆ ಶೆಣೈಯವರ ಏಜೆನ್ಸಿಯನ್ನು ತೆಗೆದು ಬಿಡಿ ಎಂದು ಸವಾಲು ಹಾಕಿದರು.
ಅದು ಭಟ್ಟರ ತಾಕತ್ತು, ಅತೀ ಹೆಚ್ಚು ಪತ್ರಿಕೆ ಮಾರಾಟ ಮಾಡುತ್ತಿದ್ದರು. ಹಾಗಿದ್ದೂ ಉದಯವಾಣಿಯ ಪ್ರಸರಣಾ ವಿಭಾಗದವರು ಭಟ್ಟರಿಗೆ ಕಿರುಕುಳ ಕೊಟ್ಟದ್ದೇ ಜಾಸ್ತಿ.ಆದರೂ ಭಟ್ಟರು ಸೋತಿಲ್ಲ. ಆಗೆಲ್ಲ ದಿನ ಪತ್ರಿಕೆಗಳವರ ದುರಹಂಕಾರ ಜಾಸ್ತಿನೇ ಇತ್ತು. ಪತ್ರಿಕ ಏಜನ್ಸಿ ಪಡೆಯಲಿಕ್ಕೂ ಭಾರೀ ಮೊತ್ತದ ಮುಂಗಡ ಹಣ ಠೇವಣಿ ಇಡಬೇಕಾಗಿತ್ತು. ವಿಜಯ ಸಂಕೇಶ್ವರ ಅವರು ವಿಜಯ ಕರ್ನಾಟಕ ದಿನಪತ್ರಿಕೆ ಪ್ರಾರಂಭಿಸಿದ ತಿಂಗಳ ಅವಧಿಯಲ್ಲೇ ಆ ಉಳಿದ ಎಲ್ಲ ಧಿಮಾಕಿನ ಪತ್ರಿಕೆಯವರು ವಿದ್ಯುತ್ ಕಂಬವನ್ನು ಕಂಡರೂ ಏಜಂಟರಾಗುತ್ತೀರಾ,ಡಿಪಾಸಿಟ್ ಬೇಡ ಎಂದು ನಮಸ್ಕರಿಸಲು ತೊಡಗಿದರು. ಹಾಗೆ ಬೇಡವಾದ ಡಿಪಾಸಿಟು ಮತ್ತು ಭಯಂಕರ ಕಂಡಿಶನುಗಳು ಇವತ್ತಿಗೂ ಇಲ್ಲವಾಗಿದೆ.ಏಜಂಟರ ಅಣತಿಯಂತೆ ಪ್ರಸರಣಾಧಿಕಾರಿಗಳು ನಡೆದುಕೊಳ್ಳುತ್ತಾರೆ.
ಭಟ್ಟರ ಕೈ ಕೆಳಗೆ ಸುಮಾರು ಹದಿನಂಟು ಮಂದಿ ಕೆಲಸ ಮಾಡುತ್ತಿದ್ದರು. ಪತ್ರಿಕೆಗಳನ್ನು ಹಂಚುವುದಕ್ಕೆ,ಬಸ್ಸುಗಳಿಗೆ ಕೊಡುವುದಕ್ಕೆ, ಬಸ್ಸಿನಲ್ಲಿ ಬಂದ ಪಾರ್ಸೆಲನ್ನು ತಂದಿಡುವುದಕ್ಕೆ ಹೀಗೆ ಪತ್ರಿಕೆಯ ವಿತರಣೆ ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದ್ದ ಅಷ್ಟೂ ಮಂದಿಗೂ ಉಚಿತ ಸೈಕಲು,ರಿಪೇರಿ ಕೂಡಾ ಭಟ್ಟರ ಲೆಕ್ಕದಲ್ಲಿಯೆ.
ಭಟ್ಟರದ್ದು ತಮಾಷೆಯ ಮಾತಗಳು,ದರ್ಬಾರಿ ಖರ್ಚು. ಪತ್ರಿಕೆಗಳ ಪಾವತಿ ಲೆಕ್ಕ ಸರಿ ಮಾಡಿದರೆ ಮುಗೀತು,ಬೇರೆ ಸ್ವಾರ್ಥ ಅವರಲ್ಲಿದ್ದಿಲ್ಲ.ಕಾಫಿ ಕುಡಿಸುವುದಕ್ಕೆ ಹೊಟೇಲಿಗೆ ಹೋಗಬೇಕೆಂದೆನಿಸಿದರೆ ,ಹೊರಟರೆಂದರೆ ಅಲ್ಲಿರುವ ಯಾರನ್ನಾದರೂ ಕರೆದೊಯ್ಯುವ ಗುಣ ಅವರದು.
ಇಡ್ಲಿ ತೊವೆ ತಿನ್ನುವ ಕ್ರಮ ಹೇಗೆ ಎಂದು ನಿಮಗೆ ತಿಳಿಸುತ್ತೇನೆ ಎಂದು ನನ್ನನ್ನೊಮ್ಮೆ ಕಾರ್ಕಳದ ಅಶೋಕ ಭವನಕ್ಕೆ ಕರೆದುಕೊಂಡು ಹೋದವರು ,
ಇಡ್ಲಿ,ತೊವೆ ,ಚಟ್ನಿ ಎಂದು ಸಪ್ಲಾಯರಿಗೆ ಹೇಳಿದರು.ಅವರಿಗೆ ಚಟ್ನಿ ಕೇಳಬೇಕೆಂದಿಲ್ಲ,ನನಗೆ ತಿಳಿಯಬೇಕೆಂಬ ರೀತಿಯಲ್ಲಿ ಹಾಗೆ ಹೇಳಿರಬಹುದು.
ಇಡ್ಲಿಗೆ ಬರೇ ತೊವೆ ಹಾಕಿ ತಿನ್ನುವುದು ರುಚಿಯಲ್ಲ ಅದಕ್ಕೆ ತೆಂಗಿನ ಕಾಯಿಯ ಚಟ್ನಿಯನ್ನೂ ಸೇರಿಸಿ ಕಲಸಿ ತಿನ್ನಬೇಕು ಅಂತ ನನಗೆ ತಿನಿಸಿದರು. ಅದೆಂಥ ರುಚಿ! ಅಂದಿನಿಂದ ಇವತ್ತಿಗೂ ಕೂಡ ತೊವೆ ಜೊತೆಗೆ ತೆಂಗಿನ ಕಾಯಿ ಚಟ್ನಿ ಸೇರಿಸಿಯೇ ತಿನ್ನುವುದು.ಕೆಲವು ಸಪ್ಲಾಯರುಗಳು ಚಚ್ನಿ ಕೊಡುವುದಿಲ್ಲ ,ಕೇಳಿ ತಗೊಳ್ಳುವುದು. ಆ ವಿಚಾರದಲ್ಲಿ ಗಣಪತಿ ಭಟ್ಟರು ನನಗೆ ನಿತ್ಯ ಸ್ಮರಣೀಯರು.
ನಿಮಗೆ ಜಿಲೇಬಿ ತಿನ್ನಿಸುತ್ತೇನೆ.ಇಂಥ ಜಿಲೇಬಿ ನೀವು ತಿಂದಿರಲಿಕ್ಕಿಲ್ಲ ಎಂದುಕೊಂಡು ನನ್ನನ್ನು ಅಶೋಕ ಭವನಕ್ಕೆ ಕರೆದುಕೊಂಡು ಹೋಗುವುದು.ಆ ಹೊಟೇಲಿನ ಜಿಲೇಬಿ ಅದೆಷ್ಟು ಬೇಡಿಕೆಯದ್ದು ಎಂದರೆ ಬಿಸಿ ಬಿಸಿ ಜಿಲೇಬಿಯನ್ನು ಹೊರಗೆ ತಂದಿಟ್ಟ ಒಂದು ಘಂಟೆಯಲ್ಲಿಯೇ ಮಾರಾಟವಾಗುತ್ತಿತ್ತು. ಅಷ್ಟೊಂದು ರುಚಿಯಾದ ಜಿಲೇಬಿ!
ಭಟ್ಟರ ಔದಾರ್ಯ ಹೇಗಿತ್ತೆಂದರೆ ಆ ಹದಿನೆಂಟು ಮಂದಿ ಕೆಲಸಗಾರರಿಗಲ್ಲದೆ ಅನೇಕ ಮಂದಿ ಬಸ್ ಚಾಲಕರು,ನಿರ್ವಾಹಕರು,ಕ್ಲೀನರುಗಳಿಗೆ ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯಂದು ಹೊಸ ಬಟ್ಟೆ ಕೊಡುವುದು, ಪ್ಯಾಂಟು,ಷರ್ಟು ಪೀಸ್.
ಪೆಪರ್ ಪಾರ್ಸೆಲ್ ತರುವ ಬಸ್ ಚಾಲಕರು,ಕಂಡಕ್ಟರ್ ಕ್ಲೀನರುಗಳಿಗೆ ಆ ಕೊಡುಗೆ. ಅವರಲ್ಲದೆ ಬಾಕಿ ಕೆಲವರಿಗೂ ಕೊಡುವುದಿದೆ. ಆಮೇಲೆ ಪತ್ರಿಕೆಗಾಗಿ ಅಂಗಡಿಗೆ ಬಂದವರಿಗೆಲ್ಲ ಎಳ್ಳುಂಡೆ! ತಾನಿಲ್ಲದಿದ್ದರೂ ಆದಿರಾಜರಲ್ಲಿ ಕೊಟ್ಟು ಹೋಗುವುದು .ಬಂದವರಿಗೆಲ್ಲ “ಇದು ಭಟ್ಟರ ಸಂಕ್ರಾಂತಿ ಉಡುಗೊರೆ”ಅಂತ ತಮಾಷೆ ಮಾಡಿ ಹಂಚುವುದು!
ಅವರು ಈ ಹೊತ್ತಿಗೂ ಋಣಿಯಾಗಿರುವುದೆಂದರೆ ಗೂಡಂಗಡಿಯಲ್ಲಿ ಸ್ಥಳಾವಕಾಶ ಕೊಟ್ಟ ಆದಿರಾಜ ಅಜಿರಿಯವರಿಗೆ. ಅವರಿಗೆ ಬಸ್ ನಿಲ್ದಾಣದಲ್ಲಿ ಆಸರೆ ಬೇಕಾಗಿತ್ತು. ಅದನ್ನು ಪೂರೈಸಿದ್ದೇ ಅಜ್ರಿಯವರು. ಅಜ್ರಿಯವರ ಅಂಗಡಿ ತುಂಬಾ ಪತ್ರಿಕೆಗಳೆ ಹೊರತು ,ಅವರು ಏನು ವ್ಯಾಪಾರ ಮಾಡಬೇಕೆಂದು ಅಂಗಡಿ ಪಡೆದುಕೊಂಡಿದ್ದಾರೆಯೊ ಅದರ ವ್ಯಾಪಾರ ಮಾಡಿದ್ದೇ ಇಲ್ಲ!
ರಾತ್ರಿ ಎರಡೂವರೆ ಘಂಟೆ ಹೊತ್ತಿಗೆ ಹಾಸಿಗೆಯಿಂದೇಳುವ ಗಣಪತಿ ಭಟ್ಟರು ಮತ್ತೆ ಮಲಗುವುದೇ ರಾತ್ರಿ ಹತ್ತು ಘಂಟೆ ನಂತರವೆ. ಮಧ್ಯಾಹ್ನದ ಊಟ ಮತ್ತು ರೆಸ್ಟ್ ಎಂದು ಮನೆಯಲ್ಲಿ ಹೊತ್ತು ಕಳೆಯುವುದು ಹೊರತಾದರೆ ಮಿಕ್ಕುಳಿದ ಸಮಯವೆಲ್ಲವೂ ತನ್ನ ಮೊಪೆಡ್ ಜೊತೆ ಸುತ್ತಾಡುವುದು.
ಪೇಪರ್ ಹಂಚುವುದರ ಜೊತೆಗೆ ಹಾಲು ಹಂಚುತ್ತಿದ್ದ ಭಟ್ಟರು ಬೇಕರಿ ತಿಂಡಿ ತಯಾರಿ ಮಾಡಿ ಅದರ ಮಾರಾಟಕ್ಕೂ ತೊಡಗಿದರು. ಸಮಯವನ್ನು ಒಂದಿಷ್ಟೂ ಹಾಳು ಮಾಡದೆ,ಪರಿಶ್ರಮಕ್ಕೆ ವಿರಾಮ ಕೊಡದೆ ಒಂದರ್ಥದಲ್ಲಿ ಅಹರ್ನಿಶಿ ದುಡಿಮೆ ಗಣಪತಿ ಭಟ್ಟರದ್ದು. ಕಳೆದ ಒಂದು ವರ್ಷದಿಂದ ಅವರು ಪೇಟೆಗೆ ಬರುವುದನ್ನು ನಿಲ್ಲಿಸಿದ್ದರು.

1948 ರಲ್ಲಿ ಜನಿಸಿದ್ದ ಗಣಪತಿ ಭಟ್ಟರಿಗೆ ನಿಧನ ಕಾಲಕ್ಕೆ ಎಪ್ಪತ್ತೈದು ವರ್ಷ ವಯಸ್ಸಷ್ಟೆ.
ಗಣಪತಿ ಭಟ್ಟರಿಗೆ ಭಾವಪೂರ್ಣ ಶ್ರದ್ಧಾಂಜಲಿ.
-ವಿ. ಕೆ. ವಾಲ್ಪಾಡಿ
ಚಿತ್ರ: ಗಣಪತಿ ಭಟ್





















