ಪತ್ನಿ ಜೊತೆಗಿನ ಕಲಹದ ಹಿನ್ನೆಲೆ: ಅಕ್ಕನೊಂದಿಗೆ ವೀಡಿಯೊ ಕಾಲ್ನಲ್ಲೇ ಮಾತನಾಡುತ್ತ ಆತ್ಮಹತ್ಯೆ
RB NEWS
Bureau Report
ಪತ್ನಿ ಜೊತೆಗಿನ ಕಲಹದ ಹಿನ್ನೆಲೆ: ಅಕ್ಕನೊಂದಿಗೆ ವೀಡಿಯೊ ಕಾಲ್ನಲ್ಲೇ ಮಾತನಾಡುತ್ತ ಆತ್ಮಹತ್ಯೆ
ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಣಿಲ್ ಎಂಬಲ್ಲಿ ಯುವಕನೋರ್ವ ತನ್ನ ಅಕ್ಕನೊಂದಿಗೆ ವೀಡಿಯೊ ಕಾಲ್ ಮೂಲಕ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಅಬುಸಾಲಿ ಇಸ್ಮಾಯಿಲ್ ಅವರ ಪುತ್ರ ಸಯ್ಯದ್ ಅನ್ವರ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಸಯ್ಯದ್ ಅನ್ವರ್ ಅವರು ಬೆಳುವಾಯಿಯಲ್ಲಿ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಎರಡು ವರ್ಷದ ಮಗುವಿನೊಂದಿಗೆ ವಾಸವಾಗಿದ್ದರು. ಪತಿ-ಪತ್ನಿ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಮೀನಿನ ಟೆಂಪೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅನ್ವರ್ ಕಳೆದ ಕೆಲವು ಸಮಯಗಳಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ವಾಪಸ್ ಬಂದಿದ್ದ ಅವರು, ಗುರುವಾರ ಮತ್ತೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಬಳಿಕ ಪತ್ನಿ ತನ್ನ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಈ ಬೆಳವಣಿಗೆಯಿಂದ ಮನನೊಂದ ಅನ್ವರ್ ತನ್ನ ಅಕ್ಕನಿಗೆ ವೀಡಿಯೊ ಕರೆ ಮಾಡಿ, ಪತ್ನಿಯ ಮನೆಯವರಿಂದ ಕಿರುಕುಳವಾಗುತ್ತಿದೆ, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಆತಂಕಗೊಂಡ ಕುಟುಂಬಸ್ಥರು ಬಾಡಿಗೆ ಮನೆಗೆ ಆಗಮಿಸಿದಾಗ, ಅನ್ವರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.