ನನ್ನಪ್ಪನ ಕಾಲೇಜು ಆಗಿದ್ದರೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದೆ’-ಶಾಸಕ ವೇದವ್ಯಾಸ ಕಾಮತ್
RB NEWS
Bureau Report
‘ನನ್ನಪ್ಪನ ಕಾಲೇಜು ಆಗಿದ್ದರೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದೆ’-ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ತಪ್ಪು ಯಾರು ಮಾಡಿದರೂ ನಾವು ಮಾತಾಡ್ತೇನೆ, ಈಗ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಕಾಲೇಜಿನ ವಿರುದ್ಧ ಮಾತಾಡಿದ್ದೇನೆ. ಕೆನರಾ ಕಾಲೇಜು ಅಥವಾ ನನ್ನಪ್ಪನ ಕಾಲೇಜು ಆಗಿದ್ದರೂ ನಾನು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ ಸುದ್ದಿಗೋಷ್ಠಿ ಮಾಡುತ್ತಿದ್ದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರತಿಪಾದಿಸಿದ್ದಾರೆ. ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವು ವರ್ಷಗಳ ಹಿಂದೆ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಕ್ರೈಸ್ತ ಧರ್ಮಗುರುವಿಗೆ ಮೂವರು ವಿದ್ಯಾರ್ಥಿಗಳು ಹಲ್ಲೆ ಮಾಡಿದಾಗ ಅವರ ಪರವಾಗಿ ೮೦೦ ಮಂದಿ ನಡೆಸಿದ್ದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿ ಭಾಷಣ ಮಾಡಿದ್ದೆ. ಯಾರು ತಪ್ಪು ಮಾಡಿದರೂ ಅದನ್ನು ನಾವು ಧೈರ್ಯವಾಗಿ ಹೇಳ್ತೇವೆ ಎಂದರು. ಅದೇ ದಿನ ಶಾರದಾ ಕಾಲೇಜು, ಕೆನರಾ ಕಾಲೇಜು, ಆಳ್ವಾಸ್ನಲ್ಲಿ ಪರೀಕ್ಷೆ ಇತ್ತು, ಅಲ್ಲೇಕೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿಲ್ಲ. ಕೇವಲ ಒಂದು ಸಮುದಾಯದ ಅಧೀನದಲ್ಲಿರುವ ಕಾಲೇಜನ್ನ ಮಾತ್ರ ಆಯ್ಕೆ ಮಾಡಿದ್ದೇಕೆನ್ನುವ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಕಾಮತ್, ಯಾವ ಕಾಲೇಜಿನಲ್ಲಿ ಪರೀಕ್ಷೆ ಇದೆ, ಇಲ್ಲ ಎನ್ನುವುದನ್ನು ನೋಡಿಕೊಳ್ಳುವ ಜವಾಬ್ದಾರಿ ಅದನ್ನು ಸರ್ಕಾರದ್ದೇ ಹೊರತು ನನ್ನದಲ್ಲ. ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕೂರಿಸಿದ್ದು ನಾವಲ್ಲ ಎಂದು ತಿಳಿಸಿದರು. ಪರೀಕ್ಷೆ ಮುಂದೂಡುವುದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ ಆಗಿದ್ದರಿಂದ ನಾವು ಮಧ್ಯೆ ಹೋಗಿರಲಿಲ್ಲ. ಆದರೆ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿನಿಯರನ್ನು ಪೊಲೀಸರು ದೂಡಿರುವ ಮಾಹಿತಿ ಸಿಕ್ಕಾಗ ಉಸ್ತುವಾರಿ ಸಚಿವರು, ವಿದಾನಪರಿಷತ್ ಸದಸ್ಯ ಐವನ್ ಡಿ’ಸೋಜ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿದ್ಯಾರ್ಥಿನಿಯರನ್ನು ಪೊಲೀಸರು ದೂಡುತ್ತಿದ್ದು ಅವರನ್ನು ತಡೆಯಿರಿ, ಸ್ಥಳದಲ್ಲಿ ಮಹಿಳಾ ಪೊಲೀಸರೂ ಇಲ್ಲ ಎಂದು ಮನವಿ ಮಾಡಿದ್ದೆವು. ಆ ಬಳಿಕವೂ ‘ಭಾರತ್ ಮಾತಾ ಕೀ ಜೈ’ ಎಂದ ವಿದ್ಯಾರ್ಥಿನಿ ಹಾಗೂ ಇತರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ, ಲಾಠಿ ಬೀಸಿದ್ದಾರೆ. ಹೀಗೆ ಮಾಡಲು ಸಚಿವರು ಮತ್ತು ಸರ್ಕಾರದ ಕೃಪಕಟಾಕ್ಷ ಇಲ್ಲದಿದ್ದರೆ ಪೊಲೀಸರಿಗೆ ಧೈರ್ಯ ಬರುತ್ತಿತ್ತೇ? ಐವನ್ ಡಿ’ಸೋಜ ಮತ್ತು ಉಸ್ತುವಾರಿ ಸಚಿವರು ಹೇಳಿಯೇ ವಿದ್ಯಾರ್ಥಿಗಳಿಗೆ ಹೊಡೆಸಿದ್ದಾರೆಂದು ಕಾಮತ್ ಗಂಭೀರ ಆರೋಪ ಮಾಡಿದ್ದಾರೆ. ಕಾಲೇಜಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ಎ.ಬಿ.ವಿ.ಪಿ.ಯ ವಿದ್ಯಾರ್ಥಿಗಳಿಗೆ ಕರೆ ಮಾಡಿದ ಮೇರೆಗೆ ನಾಲ್ಕೈದು ವಿದ್ಯಾರ್ಥಿಗಳು ಮನವಿ ಕೊಡಲು ಹೋದಾಗ ಹೊರಗಿನವರು ಎಂದು ಹೇಳಿ ಪೊಲೀಸರು ಬಂಧಿಸಿ ಠಾಣೆಗೆ ಕೊಂಡೊಯ್ದಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಪೊಲೀಸ್ ವಾಹನಕ್ಕೆ ಕಲ್ಲು ಹೊಡೆಯಲಿಲ್ಲ, ಬ್ಯಾರಿಕೇಡ್ ಮೇಲೆ ನಿಂತಿಲ್ಲ, ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಪೊಲೀಸರೇ, ಆಡಳಿತ ಯಾವಾಗಲೂ ಕಾಂಗ್ರೆಸ್ ಕೈಯಲ್ಲೇ ಇರುವುದಿಲ್ಲ. ಪೂರ್ವಾಗ್ರಹ ಪೀಡಿತರಾಗಿ ಮಕ್ಕಳಿಗೆ ಅನ್ಯಾಯ ಮಾಡಿದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಎಲ್ಲವನ್ನೂ ನಮ್ಮ ಸರ್ಕಾರ ಮಾಡಿದ್ದಾಗಿ ಎದೆ ತಟ್ಟಿಕೊಳ್ಳುವ ಕಾಂಗ್ರೆಸ್ನವರು, ಪೊಲೀಸರ ಕರ್ಮವನ್ನೂ ಒಪ್ಪಿಕೊಳ್ಳಲಿ. ಎ.ಬಿ.ವಿ.ಪಿ ನ್ಯಾಯಕ್ಕಾಗಿ ಕೈಗೊಳ್ಳುವ ಯಾವುದೇ ಹೋರಾಟಕ್ಕೂ ನನ್ನ ಸಹಿತ ಪಕ್ಷ ಬೆಂಬಲ ನೀಡಲಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ತಕ್ಷಣ ವಜಾಗೊಳಿಸಬೇಕು ಎಂದು ಕಾಮತ್ ಆಗ್ರಹಿಸಿದ್ದಾರೆ. ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ನಂದನ್ ಮಲ್ಯ, ವರುಣ್ ಅಂಬಟ್, ನಿಶಾನ್ ಪೂಜಾರಿ, ಭಾಸ್ಕರ್ ಚಂದ್ರ ಶೆಟ್ಟಿ, ರಿತೇಶ್, ಅಶ್ವಿತ್ ಕೊಟ್ಟಾರಿ, ಮನೋಹರ್ ಶೆಟ್ಟಿ ಹಾಗೂ ರಾಜೇಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.