ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ : ಮುಖ್ಯಮಂತ್ರಿ ಸಿದ್ಧರಾಮಯ್ಯ

Picture of RB NEWS

RB NEWS

Bureau Report

ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ.

ಈ ವರ್ಷ ಉತ್ತಮ ಮಳೆಯಾಗಿದ್ದು, ಇಡೀ ರಾಜ್ಯದ ರೈತರು ಸಂತೋಷದಿಂದ ಇದ್ದಾರೆ. ಮುಂಗಾರು ಬಿತ್ತನೆ ರಾಜ್ಯದಲ್ಲಿ 99 ಶೇ ಆಗಿದೆ. ಇನ್ನೂ ಹೆಚ್ಚು ಮಳೆಯಾಗಲಿ, ಹೆಚ್ಚು ಬೆಳೆಯಾಗಲಿ ನಮ್ಮ ನಿರೀಕ್ಷೆಗಿಂತ ಮೀರಿ ಬೆಳೆ ಬೆಳೆಯಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುತ್ತೇನೆ. ಮಳೆ – ಬೆಳೆ ಆದರೆ ಮಾತ್ರ ಜನರು ಸುಖ ಶಾಂತಿಯಿಂದ ಬದುಕಲು ಸಾಧ್ಯ.

ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ಮಾಡಲು ಸೂಚನೆ ನೀಡಿದ್ದೇನೆ. ದಸರಾ ನಾಡಹಬ್ಬವಾಗಬೇಕು, ಅಧಿಕಾರಿಗಳ ಹಬ್ಬವಾಗಬಾರದು. ಎಲ್ಲಾ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

ಈ ಬಾರಿ ದಸರಾ ಮಹೋತ್ಸವಕ್ಕೆ ಹಂ.ಪ. ನಾಗರಾಜಯ್ಯ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಅವರಿಗೆ ಈ ಮೊದಲೇ ಈ ಅವಕಾಶ ದೊರೆಯಬೇಕಿತ್ತು. ಹಂ.ಪ. ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಅಪಾರ ಕೊಡುಗೆಯನ್ನು ಕನ್ನಡ ನಾಡಿನ ಜನ ಮರೆಯಲು ಸಾಧ್ಯವಿಲ್ಲ. ಅವರ ಆಯ್ಕೆ ಔಚಿತ್ಯಪೂರ್ಣ. ಕರ್ನಾಟಕ ಕಂಡ ಅಪರೂಪದ ಸಾಹಿತಿ ಅವರು.

ಹಂ.ಪ. ನಾಗರಾಜಯ್ಯ ಅವರು ಮೌಲ್ಯಯುತ ಭಾಷಣ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರಗಳನ್ನು ವಾಮಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಾಗಿದ್ದು, ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸಬೇಕು ಎಂದಿರುವುದು ಔಚಿತ್ಯಪೂರ್ಣವಾಗಿದೆ.

ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ.

‌ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top