

ಜೋಡುರಸ್ತೆ ಕಾರ್ಕಳದ ಮುಕುಟ !
ಆರ್.ಬಿ. ನ್ಯೂಸ್, ಕಾರ್ಕಳ
ಕಾರ್ಕಳ, ಫೆ. 26:
ಕಾರ್ಕಳದ ಜೋಡುರಸ್ತೆಯಲ್ಲಿರುವ ಕಾರ್ಲ ಸಿಟಿ ಸೆಂಟರ್ ಕಟ್ಟಡದಲ್ಲಿ “ಮಾನಸ ಕಂಫರ್ಟ್ಸ್ ಬೋರ್ಡಿಂಗ್ & ಲಾಡ್ಜಿಂಗ್” ನೂತನವಾಗಿ ಶುಭಾರಂಭಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಹೊಸಹೊಸ ಉದ್ಯಮಗಳು ಆರಂಭವಾಗಬೇಕು. ಇದರಿಂದ ವ್ಯಾಪಾರ ವಹಿವಾಟು ವೃದ್ಧಿಯಾಗಿ, ಸಮಾಜದ ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಬಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜೋಡುರಸ್ತೆ ಪೇಟೆ ವೇಗವಾಗಿ ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಕಾರ್ಕಳದ ಪ್ರಮುಖ ವ್ಯಾಪಾರ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಅವರು ಹೇಳಿದರು. ಮಾನಸ ಕಂಫರ್ಟ್ಸ್ನ ಪಾಲುದಾರರು ತಮ್ಮ ಉದ್ಯಮ ಲಾಭದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಮಾದರಿಯಾಗಿದ್ದಾರೆ. ಇವರ ಸೇವಾ ಕಾರ್ಯಗಳು ನಿರಂತರವಾಗಿರಲಿ ಹಾಗೂ ನೂತನ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ವೀರಪ್ಪ ಮೊಯ್ಲಿಯವರನ್ನು ಮಾನಸ ಕಂಫರ್ಟ್ಸ್ ಪರವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕುಕ್ಕುಂದೂರು ಪಂಚಾಯತಿಯ 9 ಮಂದಿ ಸ್ವಚ್ಚತಾ ಕಾರ್ಮಿಕರನ್ನು ಗೌರವಿಸಲಾಯಿತು. ಜೊತೆಗೆ ಬಜಗೋಳಿಯ ಅಹಿಂಸಾ ಅನಿಮಲ್ ಟ್ರಸ್ಟ್, ಸುರಕ್ಷಾ ಆಶ್ರಮದ ಸಾಯಿರಾ ಬಾನು, ವಿಜೇತಾ ವಿಶೇಷ ಶಾಲೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
ಕಾರ್ಕಳ ಮೈನ್ ಶಾಲೆಗೆ ಸುಣ್ಣಬಣ್ಣ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಗೆ ಬ್ಯಾರಿಕೇಡ್ಗಳ ಹಸ್ತಾಂತರ ಸೇರಿದಂತೆ ಒಟ್ಟು ಆರು ಸೇವಾ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಗಣನಾಥ ಶೆಟ್ಟಿ, ಹಿರಿಯ ವಕೀಲ ಮಣಿರಾಜ ಶೆಟ್ಟಿ, ಹರಿ ಮೊಗೆರಾಯ, ನೀರೆ ಕೃಷ್ಣ ಶೆಟ್ಟಿ, ಪುರಸಭಾ ಮಾಜಿ ಸದಸ್ಯ ಅಶ್ಫಕ್ ಅಹಮ್ಮದ್, ಸಂತೋಷ್ ಡಿಸಿಲ್ವ, ಪ್ರಕಾಶ್ ಆಚಾರ್ಯ, ಕುಕ್ಕುಂದೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಉಷಾ ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾನಸ ಕಂಫರ್ಟ್ಸ್ನ ಪಾಲುದಾರರಾದ ನವೀನ್ ದೇವಾಡಿಗ, ಮಧುರಾಜ್ ಶೆಟ್ಟಿ ಹಾಗೂ ಶಾಕೀರ್ ಅಹಮ್ಮದ್ ಅತಿಥಿಗಳನ್ನು ಸ್ವಾಗತಿಸಿದರು. ನ್ಯಾಯವಾದಿ ಶೇಖರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.









































