ಕೇಂದ್ರ ಬಜೆಟ್ ಕುರಿತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರತಿಕ್ರಿಯೆ

Picture of RB NEWS

RB NEWS

Bureau Report


ಕಾರ್ಕಳ : ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ 9ನೇ ಕೇಂದ್ರ ಬಜೆಟ್, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಮತ್ತೊಂದು ದೃಢ ಹೆಜ್ಜೆಯಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಜಗತ್ತು ಆರ್ಥಿಕ ಅನಿಶ್ಚಿತತೆ ಮತ್ತು ತಲ್ಲಣಗಳಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ, ದೇಶದ ಜನತೆಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬುವಂತಹ ಸ್ವಾಗತಾರ್ಹ ಬಜೆಟ್ ಇದಾಗಿದೆ. ದೀರ್ಘಕಾಲೀನ ಆರ್ಥಿಕ ಗುರಿಗಳನ್ನು ಸಾಧಿಸಲು ಅಗತ್ಯವಿರುವ ದೃಷ್ಟಿಯ ಜೊತೆಗೆ, ತಕ್ಷಣದ ಅವಶ್ಯಕತೆಗಳನ್ನು ಪೂರೈಸುವ ಅಲ್ಪಕಾಲೀನ ಯೋಜನೆಗಳನ್ನೂ ಸಮನ್ವಯಗೊಳಿಸಿರುವ ಸಮದೃಷ್ಟಿಯ ಸಂತುಲಿತ ಬಜೆಟ್ ಇದಾಗಿದೆ ಎಂದು ಅವರು ಹೇಳಿದರು.
ಯಾವುದೇ ಸಮುದಾಯ, ಸಂಸ್ಥೆ ಅಥವಾ ವರ್ಗವನ್ನು ತುಷ್ಟೀಕರಿಸುವ ಹಿಂದಿನ ಸರ್ಕಾರಗಳ ಮನೋಭಾವಕ್ಕೆ ಭಿನ್ನವಾಗಿ, ಜಾಗತಿಕ ಆರ್ಥಿಕ ತಲ್ಲಣವನ್ನು ಗಮನದಲ್ಲಿರಿಸಿಕೊಂಡು ದೇಶದ ಜನತೆಯ ಭವಿಷ್ಯದ ಹಿತವನ್ನು ಕಾಪಾಡುವ ದೃಢ ಯೋಚನೆ ಮತ್ತು ಯೋಜನೆಗಳನ್ನು ಒಳಗೊಂಡ ಬಜೆಟ್ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜನತೆಯ ಆಶೋತ್ತರಗಳನ್ನು ಸಾಧಿಸಬಲ್ಲ ಯೋಜನೆಗಳೊಂದಿಗೆ, ತುಷ್ಟೀಕರಣದ ಮಾನಸಿಕತೆಯಿಂದ ಹೊರಬಂದು ಜನಸಾಮಾನ್ಯರನ್ನು ಕೇಂದ್ರಬಿಂದುಗೊಳಿಸಿರುವ ಈ ಬಜೆಟ್ ಅಭಿನಂದನಾರ್ಹವಾಗಿದೆ. ಮೂಲಭೂತ ಸೌಕರ್ಯ, ಕೃಷಿ, ಉದ್ಯೋಗ ಸೃಷ್ಟಿ, ಸೆಮಿಕಂಡಕ್ಟರ್‌, ಪ್ರೆಶಿಯಸ್ ಲೋಹಗಳು, ಡೇಟಾ ಕೇಂದ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಪೂರಕವಾದ ಯೋಜನೆಗಳಿಗೆ ಒತ್ತು ನೀಡಿರುವುದು ಈ ಬಜೆಟ್‌ನ ಮತ್ತೊಂದು ಪ್ರಮುಖ ಅಂಶವಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top