ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮದಿನಾಚರಣೆ

Picture of RB NEWS

RB NEWS

Bureau Report


ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅವರು ಮಹನೀಯರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಇಂದು ಸಾಮಾನ್ಯ ಜನರಿಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಹಾಗೂ ಪಾಲ್ಗೊಳ್ಳುವ ಅವಕಾಶ ದೊರೆತಿದೆ ಎಂದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಹೊಲದೊಡೆಯ’ ಎಂಬ ಗುರಿಯೊಂದಿಗೆ ಉಳಿಗಮಾನ್ಯ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭೂಸುಧಾರಣಾ ಮಸೂದೆಯನ್ನು ಜಾರಿಗೆ ತಂದರು ಎಂದು ಅವರು ಹೇಳಿದರು.
ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ ಮಾಳ ಮಾತನಾಡಿ, ದೇವರಾಜ ಅರಸು ಅವರು ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಬಡವರು ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ಭೂಮಿ ದೊರೆಯುವಂತೆ ಮಾಡಿ ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಟ್ಟರು ಎಂದರು.
ಆದರೆ, ದೇವರಾಜ ಅರಸು ಅವರು ಅನುಷ್ಠಾನಗೊಳಿಸಿದ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿ ಪಡೆದವರೇ ಇಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತಿರುವುದು ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟರು.
ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲಿನೋ ಮಾತನಾಡಿ, ರಾಜೀವ್ ಗಾಂಧಿ ಅವರು ದೇಶದಲ್ಲಿ ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕಿದರು. ಇದರ ಪರಿಣಾಮವಾಗಿ ದೇಶದ ಕಟ್ಟಕಡೆಯ ವ್ಯಕ್ತಿಯೂ ವಿಶ್ವದಾದ್ಯಂತ ನಡೆಯುವ ಬೆಳವಣಿಗೆಗಳು ಹಾಗೂ ವಿಚಾರಗಳನ್ನು ತ್ವರಿತವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ಅತ್ತೂರು ಸ್ವಾಗತಿಸಿದರು. ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಮಾ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ, ಶೋಭಾ ಪ್ರಸಾದ್, ಹೇಮಂತ್ ಆಚಾರ್ಯ, ಕಾಂತಿ ಶೆಟ್ಟಿ, ಮಹ್ಮದ್ ಹುಸೇನ್ ತೆಳ್ಳಾರ್, ಶಾಮ ದಾನಶಾಲೆ ಹಾಗೂ ಪಿಲಿಫ್ ಮಸ್ಕರೇನಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top